Home> World
Advertisement

ಯೋಮ್ ಕಿಪ್ಪುರ್ ಯುದ್ಧ- ಪ್ರಸ್ತುತ ಇಸ್ರೇಲ್ ಯುದ್ಧ: ಎರಡರ ನಡುವಿನ ಸಮಾನಾಂತರಗಳು

Yom Kippur War: ಯೋಮ್ ಕಿಪ್ಪುರ್ ಯುದ್ಧವನ್ನು ಅಕ್ಟೋಬರ್ ಯುದ್ಧ ಅಥವಾ ರಂಜಾನ್ ಯುದ್ಧ ಎಂದೂ ಕರೆಯಲಾಗುತ್ತದೆ. ಇದು 1973ರ ಅಕ್ಟೋಬರ್ 6ರಿಂದ 25ರ ನಡುವೆ ನಡೆಯಿತು. ಈ ಯುದ್ಧದಲ್ಲಿ ಇಸ್ರೇಲ್ ಒಂದು ಬದಿಯಲ್ಲಿ ಇಸ್ರೇಲನ್ನು ಎದುರಿಸಿದರೆ, ಇನ್ನೊಂದು ಬದಿಯಲ್ಲಿ ಈಜಿಪ್ಟನ್ನು ಎದುರಿಸಿತ್ತು. 

ಯೋಮ್ ಕಿಪ್ಪುರ್ ಯುದ್ಧ- ಪ್ರಸ್ತುತ ಇಸ್ರೇಲ್ ಯುದ್ಧ: ಎರಡರ ನಡುವಿನ ಸಮಾನಾಂತರಗಳು

Yom Kippur War: ಯೋಮ್ ಕಿಪ್ಪುರ್ ಯುದ್ಧವನ್ನು ರಂಜಾನ್ ಯುದ್ಧ ಎಂದೂ ಕರೆಯಲಾಗುತ್ತದೆ. ಇಸ್ರೇಲ್ ಈ ಯುದ್ಧದಲ್ಲಿ ಈಜಿಪ್ಟ್ ಮತ್ತು ಸಿರಿಯಾಗಳ ವಿರುದ್ಧ ಸೆಣಸಾಡಿತ್ತು. ಈ ಯುದ್ಧದ ಸಂದರ್ಭದಲ್ಲಿ, ಇಸ್ರೇಲ್ ಶತ್ರುಗಳ ದಾಳಿಯನ್ನು ತಡೆಯಲು ಯಶಸ್ವಿಯಾದರೂ, ಈ ಯುದ್ಧ ಇಸ್ರೇಲಿನ ಪ್ರತಿಷ್ಠೆಗೆ ಧಕ್ಕೆ ಉಂಟುಮಾಡಿತ್ತು. ಅದರ ಹಿಂದಿನ ಕಾರಣಗಳೇನು ಎನ್ನುವುದನ್ನು ನಾವು ಈ ಲೇಖನದಲ್ಲಿ ತಿಳಿದುಕೊಳ್ಳೋಣ.

ಅಕ್ಟೋಬರ್ 7, ಶನಿವಾರದಂದು ಇಸ್ರೇಲ್ ಮೇಲೆ ಹಮಾಸ್ ನಡೆಸಿದ ಅನಿರೀಕ್ಷಿತ ದಾಳಿ, ಐವತ್ತು ವರ್ಷ ಮತ್ತು ಒಂದು ದಿನದ ಹಿಂದೆ ನಡೆದ, ಮಧ್ಯ ಪೂರ್ವ ಪ್ರದೇಶದ ಆಯಾಮಗಳನ್ನು ಶಾಶ್ವತವಾಗಿ ಬದಲಾಯಿಸಿದ ಯೋಮ್ ಕಿಪ್ಪುರ್ ಯುದ್ಧದ ನೆನಪುಗಳನ್ನು ಹೊತ್ತು ತಂದಿತ್ತು.

ಈ ಯೋಮ್ ಕಿಪ್ಪುರ್ ಯುದ್ಧ ಎಂದರೇನು? ಅದಕ್ಕೂ ಈಗ ನಡೆಯುತ್ತಿರುವ ಯುದ್ಧಕ್ಕೂ ಯಾಕೆ ಹೋಲಿಕೆ ನಡೆಸಲಾಗುತ್ತಿದೆ?
ಮೊದಲನೆಯದಾಗಿ, 1973ರ ಯೋಮ್ ಕಿಪ್ಪುರ್ ಯುದ್ಧದ ಬಳಿಕ, ಇದು ಇಸ್ರೇಲ್ ನೆಲದ ಮೆಲೆ ನಡೆದ ಅತ್ಯಂತ ಗಂಭೀರ ಪ್ರಮಾಣದ ದಾಳಿಯಾಗಿದೆ. ಹಮಾಸ್ ಉಗ್ರರು ಕೈಗೊಂಡ ಆಕ್ರಮಣದಲ್ಲಿ 400ಕ್ಕೂ ಹೆಚ್ಚು ಇಸ್ರೇಲ್ ನಾಗರಿಕರು ಸಾವಿಗೀಡಾಗಿದ್ದು, ಹಲವಾರು ನಾಗರಿಕರನ್ನು ಹಮಾಸ್ ಉಗ್ರರು ಒತ್ತೆಯಾಳುಗಳಾಗಿ ಎಳೆದೊಯ್ದಿದೆ. ಇದಕ್ಕೆ ಪ್ರತಿಯಾಗಿ ಇಸ್ರೇಲ್ ಕೈಗೊಂಡ ದಾಳಿಯಲ್ಲಿ ಕನಿಷ್ಠ 313 ಪ್ಯಾಲೆಸ್ತೀನಿಯನ್ನರು ಸಾವಿಗೀಡಾಗಿದ್ದಾರೆ ಎನ್ನಲಾಗಿದೆ. ಯೋಮ್ ಕಿಪ್ಪುರ್ ಯುದ್ಧದಲ್ಲಿ ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗಿದ್ದು, 2,500 ಇಸ್ರೇಲಿ ಸೈನಿಕರು ಸಾವನ್ನಪ್ಪಿದ್ದರು.

ಈ ಎರಡು ಯುದ್ಧಗಳ ನಡುವಿನ ಇನ್ನೊಂದು ಹೋಲಿಕೆಯೆಂದರೆ, ಇಸ್ರೇಲಿನ ಯುದ್ಧ ಸಿದ್ಧತೆಯ ಕುರಿತು ನಾಗರಿಕರ ಟೀಕೆ. ಇಸ್ರೇಲಿನ ಅತ್ಯಾಧುನಿಕ ಗುಪ್ತಚರ ವ್ಯವಸ್ಥೆ ಮತ್ತು ದಾಳಿ ತಡೆ ವ್ಯವಸ್ಥೆಗಳ ಹೊರತಾಗಿಯೂ, ಶನಿವಾರ ನಡೆದ ಹಮಾಸ್ ದಾಳಿ ಆಶ್ಚರ್ಯಕರವಾಗಿತ್ತು. ಇದೇ ಮಾದರಿಯಲ್ಲಿ, ಯೋಮ್ ಕಿಪ್ಪುರ್ ಯುದ್ಧದ ಸಂದರ್ಭದಲ್ಲಿ, ಇಸ್ರೇಲ್ ಅಷ್ಟೇನೂ ಯುದ್ಧ ಸನ್ನದ್ಧವಾಗಿರಲಿಲ್ಲ. ಯೋಮ್ ಕಿಪ್ಪುರ್ ಯಹೂದಿಗಳಿಗೆ ಅತ್ಯಂತ ಪವಿತ್ರ ದಿನವಾಗಿದ್ದು, ಆ ದಿನ ಬಹಳಷ್ಟು ಯೋಧರು ರಜಾದಲ್ಲಿದ್ದರು.

ಇದನ್ನೂ ಓದಿ- "ಅವರು ಪ್ರಾರಂಭಿಸಿದ್ದಾರೆ, ನಾವು ಮುಗಿಸುತ್ತೇವೆ": ಹಮಾಸ್ಗೆ ಇಸ್ರೇಲ್ ಪ್ರಧಾನಿಯಿಂದ ಖಡಕ್ ಎಚ್ಚರಿಕೆ!

ಶನಿವಾರ ನಡೆದ ದಾಳಿಯ ಸಂದರ್ಭದಲ್ಲೂ, ಬಹಳಷ್ಟು ಇಸ್ರೇಲಿಗರು ಸಿಮ್‌ಖಟ್ ಟೋರಾ ಸಂಭ್ರಮಕ್ಕೆ ಸಿದ್ಧತೆ ನಡೆಸುತ್ತಿದ್ದರು. ಇದೊಂದು ವಿಶೇಷ ದಿನವಾಗಿದ್ದು, ಈ ದಿನದಂದು ಸಾರ್ವಜನಿಕವಾಗಿ ವಾರ್ಷಿಕ ಟೋರಾ ಓದುವುದು ಕೊನೆಗೊಂಡು, ಹೊಸ ಆವೃತ್ತಿ ಆರಂಭವಾಗುತ್ತದೆ. ಟೋರಾ ಎನ್ನುವುದು ಹೀಬ್ರೂ ಭಾಷೆಯ ಬೈಬಲ್‌ನ ಮೊದಲ ಐದು ಪುಸ್ತಕಗಳಾಗಿವೆ.

ಯೋಮ್ ಕಿಪ್ಪುರ್ ಯುದ್ಧ: ಒಂದು ನೋಟ
ಯೋಮ್ ಕಿಪ್ಪುರ್ ಯುದ್ಧವನ್ನು ಅಕ್ಟೋಬರ್ ಯುದ್ಧ ಅಥವಾ ರಂಜಾನ್ ಯುದ್ಧ ಎಂದೂ ಕರೆಯಲಾಗುತ್ತದೆ. ಇದು 1973ರ ಅಕ್ಟೋಬರ್ 6ರಿಂದ 25ರ ನಡುವೆ ನಡೆಯಿತು. ಈ ಯುದ್ಧದಲ್ಲಿ ಇಸ್ರೇಲ್ ಒಂದು ಬದಿಯಲ್ಲಿ ಇಸ್ರೇಲನ್ನು ಎದುರಿಸಿದರೆ, ಇನ್ನೊಂದು ಬದಿಯಲ್ಲಿ ಈಜಿಪ್ಟನ್ನು ಎದುರಿಸಿತ್ತು. ಈ ಯುದ್ಧವನ್ನು ನಾಲ್ಕನೇ ಅರಬ್ - ಇಸ್ರೇಲಿ ಯುದ್ಧ ಎಂದೂ ಕರೆಯಲಾಗುತ್ತದೆ. ಈ ಮೊದಲು, 1949, 1956 ಮತ್ತು 1967ರಲ್ಲಿ ಅರಬ್ - ಇಸ್ರೇಲ್ ಯುದ್ಧಗಳು ನಡೆದಿದ್ದವು.

1967ರ ಆರು ದಿನಗಳ ಯುದ್ಧದಲ್ಲಿ ಸ್ಪಷ್ಟ ಗೆಲುವು ಸಾಧಿಸಿದ ಬಳಿಕ, ಇಸ್ರೇಲ್ ಸೋಲಿಲ್ಲದ ಸರದಾರ ಎಂದು ಭಾವಿಸಲಾಗಿತ್ತು. ಅದರೊಡನೆ, ಇಸ್ರೇಲ್ ನೆರೆಯ ರಾಷ್ಟ್ರಗಳ ಭೂಭಾಗಗಳ ಮೇಲೂ ನಿಯಂತ್ರಣ ಸಾಧಿಸಿತ್ತು. ಇದರಲ್ಲಿ ಸಿರಿಯಾದಿಂದ ಕಸಿದುಕೊಂಡ ಗೋಲನ್ ಹೈಟ್ಸ್ ಮತ್ತು ಈಜಿಪ್ಟಿನಿಂದ ಪಡೆದ ಸಿನಾಯ್ ಪರ್ಯಾಯ ದ್ವೀಪಗಳೂ ಸೇರಿವೆ.

ಆರು ವರ್ಷಗಳ ಬಳಿಕ, ಅವೆರಡು ದೇಶಗಳು ಮರಳಿ ಜೊತೆಯಾಗಿ ಇಸ್ರೇಲ್ ಮೇಲೆ ಆಕ್ರಮಣ ನಡೆಸಿದವು. ಇಸ್ರೇಲ್‌ಗೆ ಅವುಗಳ ಸೇನೆ ಸಿದ್ಧವಾಗುತ್ತಿವೆ ಎನ್ನುವುದು ಅರಿವಿಗೆ ಬಂದಿತ್ತಾದರೂ, ಪವಿತ್ರ ರಂಜಾನ್ ತಿಂಗಳಲ್ಲಿ ಯುದ್ಧ ನಡೆಸಬಹುದು ಎಂದು ಇಸ್ರೇಲ್ ಎದುರು ನೋಡಿರಲಿಲ್ಲ. ಇಸ್ರೇಲ್ ತಕ್ಷಣವೇ ಯುದ್ಧಕ್ಕೆ ಸಿದ್ಧವಾಗಿರದ ಕಾರಣ, ಅದರ ಸೈನಿಕರನ್ನು ನಿಯೋಜಿಸಲು ಕೊಂಚ ಸಮಯ ಹಿಡಿಯಿತು. ಅವರಲ್ಲಿ ಬಹಳಷ್ಟು ಯೋಧರು ಯೋಮ್ ಕಿಪ್ಪುರ್ ರಜೆಯಲ್ಲಿದ್ದರು. ಆದ್ದರಿಂದ, ಯುದ್ಧದ ಆರಂಭದಲ್ಲಿ ಈಜಿಪ್ಟ್ ಮತ್ತು ಸಿರಿಯಾ ಕೊಂಚ ಮೇಲುಗೈ ಸಾಧಿಸಿದವು.

ಇದನ್ನೂ ಓದಿ- Israel-Hamas War: ಇಸ್ರೇಲ್‍ಗೆ ಅಮೆರಿಕ ಬೆಂಬಲ ನೀಡಲು ಕಾರಣವೇನು..?

ಆದರೆ ಇಸ್ರೇಲ್ ಮೂರು ದಿನಗಳ ಬಳಿಕ ಸಿರಿಯಾ ಮತ್ತು ಈಜಿಪ್ಟ್‌ಗಳ ದಾಳಿಯನ್ನು ತಡೆಗಟ್ಟಿ, ಪ್ರತಿದಾಳಿ ನಡೆಸಲು ಆರಂಭಿಸಿತು. ಆ ಸಂದರ್ಭದಲ್ಲಿ ಅಮೆರಿಕಾ ಇಸ್ರೇಲ್‌ಗೆ ಬೆಂಬಲ ನೀಡಿದರೆ, ಸೋವಿಯತ್ ಒಕ್ಕೂಟ ಈಜಿಪ್ಟ್ ಮತ್ತು ಸಿರಿಯಾಗಳಿಗೆ ಬೆಂಬಲ ಘೋಷಿಸಿತ್ತು. ಇದು ಅವೆರಡು ಶಕ್ತಿಶಾಲಿ ರಾಷ್ಟ್ರಗಳ ನಡುವೆ ಉದ್ವಿಗ್ನ ಪರಿಸ್ಥಿತಿಯನ್ನು ಉಂಟುಮಾಡಿತ್ತು.

ವಿಶ್ವಸಂಸ್ಥೆ ಅಕ್ಟೋಬರ್ 22ರಂದು ಆಯೋಜಿಸಿದ ಆರಂಭಿಕ ಕದನ ವಿರಾಮ ಪರಿಣಾಮಕಾರಿಯಾಗಿರಲಿಲ್ಲ. ಆದರೆ, ಅಕ್ಟೋಬರ್ 25ರ ವೇಳೆಗೆ ಹೆಚ್ಚು ಪರಿಣಾಮಕಾರಿ ಕದನ ವಿರಾಮ ಜಾರಿಗೆ ಬಂತು. ಆದರೆ, ಸೋಲಿಸಲು ಸಾಧ್ಯವಿಲ್ಲ ಎಂಬ ಇಸ್ರೇಲಿನ ಗೌರವಕ್ಕೆ ಚ್ಯುತಿ ಬಂದಿತ್ತು.

ಯೋಮ್ ಕಿಪ್ಪುರ್ ಯುದ್ಧ ಯಾಕೆ ಪ್ರಸ್ತುತವಾಗಿದೆ?
ಯೋಮ್ ಕಿಪ್ಪುರ್ ಯುದ್ಧದಲ್ಲಿ ಇಸ್ರೇಲ್ ತನ್ನ ಶತ್ರುಗಳನ್ನು ಕ್ರಮೇಣ ಹಿಂದೆ ತಳ್ಳಲು ಯಶಸ್ವಿಯಾದರೂ, ಇಸ್ರೇಲ್ ತನ್ನ ಸೈನಿಕರನ್ನು ಹೊಂದಿಸಲು ಪಟ್ಟ ಆರಂಭಿಕ ಕಷ್ಟ ಮತ್ತು ಅದು ಎದುರಿಸಿದ ನಷ್ಟಗಳು ಶತ್ರು ದಾಳಿಗಳ ವಿರುದ್ಧ ಇಸ್ರೇಲ್ ಸಂಪೂರ್ಣ ಸುರಕ್ಷಿತವಲ್ಲ ಎಂಬ ಸಂದೇಶ ರವಾನಿಸಿತ್ತು. ಅದಾಗಿ ಆರು ತಿಂಗಳ ಬಳಿಕ ಪ್ರಧಾನಿ ಗೋಲ್ಡಾ ಮೇರ್ ಮತ್ತು ಅವರ ಸರ್ಕಾರ ರಾಜೀನಾಮೆ ನೀಡಿತು.

ವಾಸ್ತವವಾಗಿ, ಹಲವು ತಜ್ಞರ ಪ್ರಕಾರ, ಈ ದಾಳಿಯನ್ನು ಆರಂಭಿಸುವಾಗ ಈಜಿಪ್ಟ್ ತನಗಿಂತ ಎಷ್ಟೋ ಪಟ್ಟು ಶಕ್ತಿಶಾಲಿಯಾಗಿದ್ದ ಇಸ್ರೇಲ್ ವಿರುದ್ಧ ಗೆಲ್ಲುವ ಬಯಕೆಯನ್ನೇನೂ ಹೊಂದಿರಲಿಲ್ಲ. ಆದರೆ, ಇಸ್ರೇಲ್‌ಗೆ ಅಪಾರ ನಷ್ಟ, ಹಾನಿಯನ್ನುಂಟುಮಾಡಿ, ಆ ಮೂಲಕ ಇಸ್ರೇಲ್ ಮಾತುಕತೆಗೆ ಮುಂದಾಗುವಂತೆ ಮಾಡಬೇಕು ಎಂದುಕೊಂಡಿತ್ತು.

ಇದನ್ನೂ ಓದಿ- ಉಗ್ರ ದಾಳಿಗೆ ಹಾದಿ ಮಾಡಿಕೊಟ್ಟ ಇಸ್ರೇಲ್ ಗುಪ್ತಚರ ವೈಫಲ್ಯ: ಗಾಜಾ ಗಡಿ ಭದ್ರತೆಯನ್ನು ಭೇದಿಸಿದ ಹಮಾಸ್

ಒಂದು ಬಾರಿ ಯುದ್ಧ ಪೂರ್ಣಗೊಂಡ ಬಳಿಕ, ಅವೆರಡೂ ರಾಷ್ಟ್ರಗಳು ಶಾಂತಿ ಸ್ಥಾಪನೆಗೆ ಪ್ರಯತ್ನ ನಡೆಸಿದವು. 1978ರಲ್ಲಿ ಕ್ಯಾಂಪ್ ಡೇವಿಡ್ ಒಪ್ಪಂದ ಎಂದು ಕರೆಯಲಾಗುವ ಮಹತ್ತರ ಒಪ್ಪಂದಗಳು ಏರ್ಪಟ್ಟವು. ಈ ಒಪ್ಪಂದದ ಪ್ರಕಾರ, ಇಸ್ರೇಲ್ ಸಿನಾಯ್ ಪರ್ಯಾಯದ್ವೀಪವನ್ನು ಈಜಿಪ್ಟ್‌ಗೆ ಮರಳಿಸಿತು. 1979ರಲ್ಲಿ ಇಸ್ರೇಲ್ ಮತ್ತು ಈಜಿಪ್ಟ್ ಅಧಿಕೃತ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದವು. ಆ ಮೂಲಕ ಒಂದು ಅರಬ್ ರಾಷ್ಟ್ರ ಮೊದಲ ಬಾರಿಗೆ ಇಸ್ರೇಲನ್ನು ಒಂದು ರಾಷ್ಟ್ರ ಎಂದು ಅಧಿಕೃತವಾಗಿ ಒಪ್ಪಿಕೊಂಡಿತು.

ಆದರೆ ಈ ಯುದ್ಧದಿಂದ ಸಿರಿಯಾಗೆ ಯಾವುದೇ ಪ್ರಯೋಜನ ಉಂಟಾಗಲಿಲ್ಲ. ಇಸ್ರೇಲ್ ಮತ್ತು ಈಜಿಪ್ಟ್ ಪರಸ್ಪರ ಶಾಂತಿ ಒಪ್ಪಂದ ಮಾಡಿಕೊಂಡವಾದರೂ, ಸಿರಿಯಾಗೆ ಏನೂ ಲಭಿಸಲಿಲ್ಲ. ಇಸ್ರೇಲ್ ಮೌಲ್ಯಯುತ ಭೂಭಾಗವಾದ ಗೋಲನ್ ಹೈಟ್ಸ್ ಅನ್ನು ಸಿರಿಯಾಗೆ ಮರಳಿಸದೆ ತನ್ನ ಬಳಿಯೇ ಉಳಿಸಿಕೊಂಡಿತು. ಆ ಪ್ರದೇಶ ಇಂದಿಗೂ ಇಸ್ರೇಲ್ ವಶದಲ್ಲೇ ಉಳಿದಿದೆ.

ಲೇಖಕರು - ಗಿರೀಶ್ ಲಿಂಗಣ್ಣ( ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Read More