Home> Technology
Advertisement

Aero India 2023 : ಏರೋ ಇಂಡಿಯಾ 2023 ರ ಭವ್ಯತೆಗೆ ಸಾಕ್ಷಿ : ಇಲ್ಲಿದೆ ಈ ಭಾರಿಯ ವಿಶೇಷತೆಗಳು!

ಈ ವರ್ಷದ ಏರೋ ಇಂಡಿಯಾ ಪ್ರದರ್ಶನ 'ದ ರನ್‌ವೇ ಟು ಬಿಲಿಯನ್ ಅಪರ್ಚುನಿಟೀಸ್' (ಕೋಟ್ಯಂತರ ಅವಕಾಶಗಳೆಡೆಗಿನ ರನ್‌ವೇ) ಎಂಬ ಥೀಮ್‌ನಲ್ಲಿ ನಡೆಯುತ್ತಿದೆ. ಈ ಆವೃತ್ತಿಯ ಪ್ರದರ್ಶನದಿಂದ ಸಾಕಷ್ಟು ನಿರೀಕ್ಷೆಗಳೂ ಗರಿಗೆದರಿವೆ.

Aero India 2023 : ಏರೋ ಇಂಡಿಯಾ 2023 ರ ಭವ್ಯತೆಗೆ ಸಾಕ್ಷಿ : ಇಲ್ಲಿದೆ ಈ ಭಾರಿಯ ವಿಶೇಷತೆಗಳು!

ಬೆಂಗಳೂರು : ಫೆಬ್ರವರಿ 13ರಿಂದ 17ರ ತನಕ ಆಯೋಜಿಸಲಾಗುತ್ತಿರುವ ಏರೋ ಇಂಡಿಯಾ 2023 ವೈಮಾನಿಕ ಪ್ರದರ್ಶನವನ್ನು ಭಾರತೀಯ ರಕ್ಷಣಾ ಸಚಿವಾಲಯ ಆಯೋಜಿಸುತ್ತಿದೆ.

ನಗರದ ಯಲಹಂಕ ವಾಯುಪಡೆಯ ವಾಯುನೆಲೆಯಲ್ಲಿ ಏರೋ ಇಂಡಿಯಾದ 14ನೇ ಆವೃತ್ತಿ ನಡೆಯಲಿದೆ. ಇದು ಏರೋಸ್ಪೇಸ್ ಉದ್ಯಮದಲ್ಲಿ ಜಾಗತಿಕವಾಗಿ ಪ್ರಸಿದ್ಧವಾದ ಕಾರ್ಯಕ್ರಮ ಇದಾಗಿದೆ. ಪಿಎಂ ನರೇಂದ್ರ ಮೋದಿಯವರು ಈ ಸಮಾರಂಭವನ್ನು ಉದ್ಘಾಟಿಸಲಿದ್ದಾರೆ. ಏರೋ ಇಂಡಿಯಾದ ವೆಬ್‌ಸೈಟ್ ನಲ್ಲಿ ತಿಳಿಸಿರುವ ಪ್ರಕಾರ, 731 ಪ್ರದರ್ಶಕರು ಈಗಾಗಲೇ ತಮ್ಮ ಹೆಸರು ನೊಂದಾಯಿಸಿದ್ದು, ಅವರಲ್ಲಿ 633 ಪ್ರದರ್ಶಕರು ಭಾರತೀಯ ಸಂಸ್ಥೆಗಳಾಗಿವೆ. ಈ ವರ್ಷದ ಏರೋ ಇಂಡಿಯಾ ಪ್ರದರ್ಶನ 'ದ ರನ್‌ವೇ ಟು ಬಿಲಿಯನ್ ಅಪರ್ಚುನಿಟೀಸ್' (ಕೋಟ್ಯಂತರ ಅವಕಾಶಗಳೆಡೆಗಿನ ರನ್‌ವೇ) ಎಂಬ ಥೀಮ್‌ನಲ್ಲಿ ನಡೆಯುತ್ತಿದೆ. ಈ ಆವೃತ್ತಿಯ ಪ್ರದರ್ಶನದಿಂದ ಸಾಕಷ್ಟು ನಿರೀಕ್ಷೆಗಳೂ ಗರಿಗೆದರಿವೆ.

ಇದನ್ನೂ ಓದಿ : Google versus OpenAI:ಕೆಲವೇ ದಿನಗಳಲ್ಲಿ ಬಳಕೆದಾರರಿಗೆ ಲಭ್ಯವಾಗಲಿದೆ ಚಾಟ್‌ಜಿಪಿಟಿ ಪ್ರತಿಸ್ಪರ್ಧಿ “ಬಾರ್ಡ್”

ಏರೋ ಇಂಡಿಯಾ ಪ್ರದರ್ಶನದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿರುವ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ತಾನು ಈಗಾಗಲೇ ವಿದೇಶೀ ರಾಜತಾಂತ್ರಿಕರ ಬಳಿ ಮುಂಬರುವ ಸಮಾರಂಭದಲ್ಲಿ ಭಾರತೀಯ ರಕ್ಷಣಾ ಮತ್ತು ಮಿಲಿಟರಿ ಉತ್ಪಾದನೆಗಳಲ್ಲಿ ಭಾಗೀದಾರರಾಗುವಂತೆ ಕೋರಿರುವುದಾಗಿ ಹೇಳಿದ್ದಾರೆ. ಈ ಸಹಯೋಗಗಳು ಪ್ರಮುಖವಾಗಿ ಡ್ರೋನ್, ಸೈಬರ್ ತಂತ್ರಜ್ಞಾನಗಳು ಮತ್ತು ರೇಡಾರ್‌ಗಳ ಕುರಿತಾಗಿರಲಿವೆ. ಈ ಸಮಾರಂಭವು ಏರೋಸ್ಪೇಸ್ ಮತ್ತು ರಕ್ಷಣಾ ವಲಯದ ಪ್ರಮುಖ ವ್ಯಾಪಾರ ಪ್ರದರ್ಶನ ಹಾಗೂ ಭಾರತೀಯ ವಾಯುಪಡೆ ಮತ್ತು ಅಂತಾರಾಷ್ಟ್ರೀಯ ಪಾಲುದಾರರ ಪ್ರದರ್ಶನದ ಮಿಶ್ರಣವಾಗಿರಲಿದೆ. ಕರ್ನಾಟಕದ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿಯವರು ಸಮಾರಂಭದ ಪೂರ್ವಭಾವಿಯಾಗಿ ಮಾತನಾಡುತ್ತಾ, "ಈ ಸಲದ ಏರೋ ಇಂಡಿಯಾ ಪ್ರದರ್ಶನ ಇತಿಹಾಸದಲ್ಲೇ ಅತಿದೊಡ್ಡ ಪ್ರದರ್ಶನವಾಗಿರಲಿದ್ದು, ಅತಿಹೆಚ್ಚು ಸಂಖ್ಯೆಯಲ್ಲಿ ಜನರು ಭಾಗವಹಿಸಲಿದ್ದಾರೆ. ವೈಮಾನಿಕ ಮತ್ತು ರಕ್ಷಣಾ ವಲಯದಿಂದ ಸಾಕಷ್ಟು ಗಣ್ಯರು ಮತ್ತು ಕಂಪನಿಗಳು ಈ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ" ಎಂದಿದ್ದರು.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಯಲಹಂಕ ವಾಯುನೆಲೆಯ‌ ಸುತ್ತಮುತ್ತಲಿನ ಹತ್ತು ಕಿಲೋಮೀಟರ್ ವ್ಯಾಪ್ತಿಯಲ್ಲಿ ಜನವರಿ 30ರಿಂದ ಫೆಬ್ರವರಿ 20ರ ತನಕ ಮಾಂಸಾಹಾರಿ ಆಹಾರಗಳ ಮಾರಾಟ ನಡೆಸದಂತೆ ನಿರ್ಬಂಧಿಸಿದೆ. ಇದಕ್ಕೆ ಕಾರಣವೇನೆಂದರೆ, ಇಂತಹ ಆಹಾರ ಪದಾರ್ಥಗಳು ಭಕ್ಷಕ ಪಕ್ಷಿಗಳನ್ನು, ಅದರಲ್ಲೂ ಗರುಡ, ಹದ್ದುಗಳಂತಹ ಪಕ್ಷಿಗಳನ್ನು ಆಕರ್ಷಿಸುವ ಸಾಧ್ಯತೆಗಳಿರುತ್ತವೆ. ಈ ಪಕ್ಷಿಗಳು ಏರೋ ಇಂಡಿಯಾ ಪ್ರದರ್ಶನದಲ್ಲಿ ಭಾಗವಹಿಸುವ ವಿಮಾನಗಳಿಗೆ ಅಪಾಯಕಾರಿಯಾಗಿ ಪರಿಣಮಿಸಲೂಬಹುದು. ಯಲಹಂಕ ವಾಯುನೆಲೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪದಲ್ಲಿರುವುದರಿಂದ, ದೈನಂದಿನ ವಿಮಾನಗಳ ಕಾರ್ಯಾಚರಣೆಗಳನ್ನೂ ಫೆಬ್ರವರಿ 8ರಿಂದ 17ರ ತನಕ ಬದಲಾಯಿಸಲಾಗುತ್ತದೆ.

ಈ ಹಿಂದಿನ ಏರೋ ಇಂಡಿಯಾ ಪ್ರದರ್ಶನ ಕೋವಿಡ್-19 ಸಾಂಕ್ರಾಮಿಕದ ಕಾರಣದಿಂದ ಮೂರು ದಿನಗಳಿಗೆ ಸೀಮಿತವಾಗಿತ್ತು. ಆದರೂ ಪ್ರದರ್ಶನಕ್ಕೆ 55 ರಾಷ್ಟ್ರಗಳಿಂದ ಜನರು ಬಂದು ಭಾಗಿಯಾಗಿದ್ದರು. ಒಟ್ಟಾರೆ 540 ಪ್ರದರ್ಶಕರು ಭಾಗವಹಿಸಿದ್ದರು. ಒಂದು ಅಂತಾರಾಷ್ಟ್ರೀಯ ವೈಮಾನಿಕ ಕಾರ್ಯಕ್ರಮವಾಗಿರುವ ಏರೋ ಇಂಡಿಯಾ, 200ಕ್ಕೂ ಹೆಚ್ಚು ಹೊಸ ವ್ಯಾಪಾರ ಸಹಭಾಗಿತ್ವಗಳನ್ನು ಆರಂಭಿಸಿತ್ತು. ಅದಕ್ಕಾಗಿ ಹಲವು ಎಂಒಯುಗಳು, ಒಪ್ಪಂದಗಳು ಮತ್ತು ಸಹಭಾಗಿತ್ವಗಳು ನಡೆದಿದ್ದವು.

ಈ ವರ್ಷದ ಏರೋ ಇಂಡಿಯಾ ಪ್ರದರ್ಶನ ಐದು ದಿನಗಳ ಕಾಲ ನಡೆಯಲಿದ್ದು, ಇದಕ್ಕೆ ಅತಿಹೆಚ್ಚು ಸಂಖ್ಯೆಯಲ್ಲಿ ಜನರು ಭಾಗವಹಿಸುವ ನಿರೀಕ್ಷೆಗಳಿವೆ. ಈ ಬಾರಿ ಹೆಚ್ಚಿನ ಸಂಖ್ಯೆಯ ಜಂಟಿ ಉದ್ಯಮಗಳು, ಹೂಡಿಕೆಗಳು, ವಿಚಾರ ವಿನಿಮಯಗಳು, ಹಾಗೂ ಮೇಕ್ ಇನ್ ಇಂಡಿಯಾ ಯೋಜನೆಯನ್ನು ಸದೃಢವಾಗಿಸುವ ಚಟುವಟಿಕೆಗಳನ್ನು ಆಯೋಜಿಸಲಾಗುತ್ತಿದೆ. ಸಮಾರಂಭಕ್ಕೆ ಬಿಗಿ ಭದ್ರತೆಯನ್ನೂ ಒದಗಿಸಲಾಗುತ್ತಿದೆ.

ಇದನ್ನೂ ಓದಿ : ಅದ್ಭುತ ವೈಶಿಷ್ಟ್ಯಗಳೊಂದಿಗೆ ಇಂದು ಸಂಜೆ ಮಾರುಕಟ್ಟೆಗೆ ಕಾಲಿಡುತ್ತಿದೆ OnePlus Cloud 11

ಫೆಬ್ರವರಿ 6ರಂದು ಬೆಂಗಳೂರಿಗೆ ಆಗಮಿಸಿದ್ದ ಪ್ರಧಾನಿ ಮೋದಿ ಇಂಡಿಯಾ ಎನರ್ಜಿ ವೀಕ್ ಸಮಾರಂಭವನ್ನು ಉದ್ಘಾಟಿಸಿದ್ದರು. ಅವರ ಪೂರ್ವ ನಿರ್ಧರಿತ ಸಮಾರಂಭಗಳ ಪಟ್ಟಿಯಲ್ಲಿದ್ದಂತೆ ಅವರು ತುಮಕೂರು ಜಿಲ್ಲೆಯ ಗುಬ್ಬಿಯಲ್ಲಿ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್ಎಎಲ್) ನ ನೂತನ ಹೆಲಿಕಾಪ್ಟರ್ ಉತ್ಪಾದನಾ ಘಟಕವನ್ನು ಉದ್ಘಾಟಿಸಿದ್ದರು. ಇದು ಭಾರತದಲ್ಲಿ ಈ ಮಾದರಿಯ ಅತಿದೊಡ್ಡ ಘಟಕವಾಗಿದ್ದು, ಭಾರತದ ಎಲ್ಲಾ ಮಾದರಿಯ ಹೆಲಿಕಾಪ್ಟರ್ ಅಗತ್ಯತೆಗಳಿಗೆ ಒಂದೇ ಸೂರಿನಡಿ ಪರಿಹಾರ ಒದಗಿಸಲಿದೆ. ಈ ಘಟಕದಲ್ಲಿ 3-15 ಟನ್ ತೂಕದ ತನಕ 1,000ಕ್ಕೂ ಹೆಚ್ಚಿನ ಹೆಲಿಕಾಪ್ಟರ್‌ಗಳನ್ನು ಜೋಡಿಸುವ ಗುರಿ ಹಾಕಿಕೊಳ್ಳಲಾಗಿದೆ. ಆ ಮೂಲಕ ಇದು ಅಂದಾಜು 6,000 ಜನರಿಗೆ ನೇರ ಉದ್ಯೋಗಾವಕಾಶಗಳನ್ನು ಒದಗಿಸಲಿದೆ. 2014ರ ಮೊದಲಿನ ಹದಿನೈದು ವರ್ಷಗಳಿಗೆ ಹೋಲಿಸಿ ನೋಡಿದರೆ, ಆ ಬಳಿಕವೇ ಭಾರತದ ಏರೋಸ್ಪೇಸ್ ಉದ್ಯಮದಲ್ಲಿನ ಹೂಡಿಕೆ ನಾಲ್ಕರಿಂದ ಐದು ಪಟ್ಟು ಹೆಚ್ಚಳ ಕಂಡಿದೆ. ರಾಜಧಾನಿ ಬೆಂಗಳೂರಿನಿಂದ ಎರಡು ಗಂಟೆಗಳ ಪ್ರಯಾಣದ ದೂರದಲ್ಲಿರುವ ತುಮಕೂರಿಗೂ ಈ ಯೋಜನೆಯಿಂದ ಸಾಕಷ್ಟು ಪ್ರಯೋಜನಗಳಾಗುವ ಸಾಧ್ಯತೆಗಳಿವೆ. ಅಲ್ಲಿನ ಮೂಲಭೂತ ಸೌಕರ್ಯಗಳು ಮತ್ತು ಜನರ ಕೌಶಲ್ಯಗಳೂ ಅಭಿವೃದ್ಧಿ ಹೊಂದಲಿವೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More