Home> Karnataka
Advertisement

ಇಡಿ-ಸಿಬಿಐ ಬಳಸಿ ರಾಜ್ಯ ಸರ್ಕಾರವನ್ನು ಅಸ್ಥಿರಗೊಳಿಸುವ ಕೇಂದ್ರದ ಬೆದರಿಕೆಗೆ ನಾವು ಬಗ್ಗುವುದಿಲ್ಲ: ಕೃಷ್ಣ ಬೈರೇಗೌಡ

ಗುರುವಾರ ವಿಧಾನಸೌಧದ ಸಮ್ಮೇಳನಾ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಕೇಂದ್ರ ಬಿಜೆಪಿ ಸರ್ಕಾರದ ಪ್ರಜಾಪ್ರಭುತ್ವ ವಿರೋಧಿ ನಡೆಯ ವಿರುದ್ಧ ಛೀಮಾರಿ ಹಾಕಿದ ಅವರು,“ ವಾಲ್ಮೀಕಿ ನಿಗಮದ ಹಗರಣ ಪ್ರಕರಣವನ್ನು ತನಿಖೆ ನಡೆಸುತ್ತಿರುವ ಇಡಿ ಅಧಿಕಾರಿಗಳು ವಿಚಾರಣೆಗೊಳಪಟ್ಟವರ ಮೇಲೆ ದಬಾವಣೆ ನಡೆಸುತ್ತಿದ್ದಾರೆ.  ಈ ಹಗರಣದಲ್ಲಿ ಉನ್ನತ ಮಟ್ಟದಲ್ಲಿರುವವರೂ ಸಹ ಭಾಗಿಯಾಗಿದ್ದಾರೆ ಎಂದು ಹೇಳಿಕೆ ನೀಡುವಂತೆ ಒತ್ತಾಯಿಸುತ್ತಿದ್ದಾರೆ” ಎಂದು ಆರೋಪಿಸಿದರು.
 

ಇಡಿ-ಸಿಬಿಐ ಬಳಸಿ ರಾಜ್ಯ ಸರ್ಕಾರವನ್ನು ಅಸ್ಥಿರಗೊಳಿಸುವ ಕೇಂದ್ರದ ಬೆದರಿಕೆಗೆ ನಾವು ಬಗ್ಗುವುದಿಲ್ಲ: ಕೃಷ್ಣ ಬೈರೇಗೌಡ

ಬೆಂಗಳೂರು: ಕೇಂದ್ರ ಬಿಜೆಪಿ ಸರ್ಕಾರ ಜಾರಿ ನಿರ್ದೇಶನಾಲಯವನ್ನು (ಇಡಿ) ಬಳಸಿಕೊಂಡು ರಾಜ್ಯ ಕಾಂಗ್ರೆಸ್‌ ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಜಾಪ್ರಭುತ್ವ ವಿರೋಧಿ ಕೆಲಸಕ್ಕೆ ಮುಂದಾಗಿದೆ. ಆದರೆ, ಇಂತಹ ಗೊಡ್ಡು ಹೆದರಿಕೆ-ಬೆದರಿಕೆಗಳಿಗೆ ಬಗ್ಗುವ ಮಾತೇ ಇಲ್ಲ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ತಿಳಿಸಿದರು.

ಗುರುವಾರ ವಿಧಾನಸೌಧದ ಸಮ್ಮೇಳನಾ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಕೇಂದ್ರ ಬಿಜೆಪಿ ಸರ್ಕಾರದ ಪ್ರಜಾಪ್ರಭುತ್ವ ವಿರೋಧಿ ನಡೆಯ ವಿರುದ್ಧ ಛೀಮಾರಿ ಹಾಕಿದ ಅವರು,“ ವಾಲ್ಮೀಕಿ ನಿಗಮದ ಹಗರಣ ಪ್ರಕರಣವನ್ನು ತನಿಖೆ ನಡೆಸುತ್ತಿರುವ ಇಡಿ ಅಧಿಕಾರಿಗಳು ವಿಚಾರಣೆಗೊಳಪಟ್ಟವರ ಮೇಲೆ ದಬಾವಣೆ ನಡೆಸುತ್ತಿದ್ದಾರೆ.  ಈ ಹಗರಣದಲ್ಲಿ ಉನ್ನತ ಮಟ್ಟದಲ್ಲಿರುವವರೂ ಸಹ ಭಾಗಿಯಾಗಿದ್ದಾರೆ ಎಂದು ಹೇಳಿಕೆ ನೀಡುವಂತೆ ಒತ್ತಾಯಿಸುತ್ತಿದ್ದಾರೆ” ಎಂದು ಆರೋಪಿಸಿದರು.

ಇದನ್ನೂ ಓದಿ:  ಆರ್ ಚಂದ್ರು ಅವರಿಂದ ಅನಾವರಣವಾಯಿತು ಹಾರಾರ್ ಜಾನರ್ ನ "ಹಗ್ಗ" ಚಿತ್ರದ ಟೀಸರ್!   

ಹಗರಣದಲ್ಲಿ ಸಿಎಂ-ಡಿಸಿಎಂ ಸಹ ಭಾಗಿಯಾಗಿದ್ದಾರೆ ಎಂದು ತಪ್ಪೊಪ್ಪಿಗೆ ನೀಡಿ, ಇಲ್ಲದಿದ್ದರೆ ನಿಮಗೆ ಇಡಿ ಪವರ್‌ ಗೊತ್ತಿಲ್ಲ. ಆಮೇಲೆ ನೀವು ಕಷ್ಟಕ್ಕೆ ಸಿಲುಕುತ್ತೀರಿ ಎಂದು ವಿಚಾರಣೆ ವೇಳೆ ಹೆದರಿಸುವ ಮೂಲಕ ಇಡಿ ಅಧಿಕಾರಿಗಳು ತನಿಖೆಯನ್ನೇ ತಪ್ಪುದಾರಿಗೆ ಕೊಂಡೊಯ್ಯುತ್ತಿದ್ದಾರೆ. ಇಡಿ ಅಧಿಕಾರಿಗಳ ಜೊತೆ ರಾಜಿ ಸಂಧಾನ ಮಾಡಿಕೊಂಡು ಅವರು ಹೇಳಿದ್ದನ್ನು ಕೇಳಿಕೊಂಡು ಇರುವವರಿಗೆ ಅಭಯ ನೀಡುತ್ತಿದ್ದಾರೆ. ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡು ಪ್ರಜಾಪ್ರಭುತ್ವದ ಅಡಿಯಲ್ಲಿ ಚುನಾಯಿತಗೊಂಡಿರುವ ಸರ್ಕಾರವನ್ನೇ ಬುಡಮೇಲು ಮಾಡುವ ಕೆಲಸಕ್ಕೆ ಮುಂದಾಗಿದ್ದಾರೆ” ಎಂದು ಆಕ್ರೋಶ ಹೊರಹಾಕಿದರು.

ಮುಂದುವರೆದು, “ಜನ ಮನ್ನಣೆ ಹಾಗೂ ಅಧಿಕಾರ ಕಳೆದುಕೊಂಡು ರಾಜ್ಯದಲ್ಲಿ ದುರ್ಬಲವಾಗಿರು ಬಿಜೆಪಿ ನಾಯಕರು ಜಾರಿ ನಿರ್ದೇಶನಾಲಯವನ್ನು (ಇಡಿ) ಬಳಸಿಕೊಂಡು ವಾಮಮಾರ್ಗದಲ್ಲಿ ಮತ್ತೆ ಅಧಿಕಾರಕ್ಕೆ ಏರಲು ಯತ್ನಿಸುತ್ತಿದ್ದಾರೆ. ಆಪರೇಷನ್‌ ಕಮಲ ಸೇರಿದಂತೆ ಬಿಜೆಪಿಯ ಇಂತಹ ಜನ ವಿರೋಧಿ ಕಸರತ್ತುಗಳು ದೇಶದ ರಾಜಕೀಯ ಇತಿಹಾಸದಲ್ಲಿ  ಹೊಸ ವಿಚಾರವೇನಲ್ಲ. ಇಡಿ, ಸಿಬಿಐ ಹಾಗೂ ಐಟಿಯನ್ನು ಸರ್ಜಿಕಲ್‌ ಸ್ಟ್ರೈಕ್‌ ತರ ವಿರೋಧ ಪಕ್ಷಗಳ ವಿರುದ್ದ ಬಿಜೆಪಿ ಬಳಕೆ ಮಾಡುತ್ತಲೇ ಇದೆ. ಇದೀಗ ಮುಂದುವರೆದ ಬಾಗವಾಗಿ ಕರ್ನಾಟಕದಲ್ಲೂ ಹತಾಶ ಮನೋಭಾವದಿಂದ 2009ರಂತೆ ಆಪರೇ಼ನ್‌ ಕಮಲ ಸಾಧ್ಯವಿಲ್ಲ ಎಂದು ತಿಳಿದು ಇದೀಗ ಇಡಿ ಮೂಲಕ ರಾಜ್ಯ ಸರ್ಕಾರವನ್ನು ಬುಡಮೇಲು ಮಾಡುವ ಕೆಲಸವನ್ನು ಕೇಂದ್ರ ಸರ್ಕಾರ ಮುಂದೆ ನಿಂತು ಮಾಡುತ್ತಿದೆ. ಆದರೆ, ಇವರ ಗೊಡ್ಡು ಬೆದರಿಕೆಗಳಿಗೆ, ಸಂವಿಧಾನ ವಿರೋಧಿ ನಡೆಗಳಿಗೆ ಬಗ್ಗುವ ಮಾತೇ ಇಲ್ಲ” ಎಂದು ಸ್ಪಷ್ಟಪಡಿಸಿದರು.

ಇಡಿ ಅಧಿಕಾರಿಗಳಿಗೆ ಈ ಪ್ರಕರಣದಲ್ಲಿ ತಪ್ಪಿತಸ್ಥರನ್ನು ಹುಡುಕುವ ಉದ್ದೇಶವೇ ಇಲ್ಲ. ಈ ತನಿಖೆ ನೆಪ ಮಾತ್ರವಾಗಿದ್ದು, ರಾಜ್ಯ ಕಾಂಗ್ರೆಸ್‌ ರ್ಕಾರವನ್ನು ಬುಡಮೇಲು ಮಾಡುವುದೇ ಇಡಿ ಅಧಿಕಾರಿಗಳ ತನಿಖೆಯ ಉದ್ದೇಶ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಪತ್ರಿಕಾಗೋಷ್ಠಿಯಲ್ಲಿ ಪುನರುಚ್ಚರಿಸಿದರು.

ವಿಪಕ್ಷದಲ್ಲಿದ್ರೆ ಕೇಸು, ಬಿಜೆಪಿಗೆ ಸೇರಿದ ಕೂಡಲೇ ಖುಲಾಸೆಯ ಚೀಟಿ

ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಬಂದ ಕಳೆದ 10 ವರ್ಷದಲ್ಲಿ ಇಡಿ ರಾಜಕೀಯ ಅಸ್ತ್ರವಾಗಿದೆ. ಬಿಜೆಪಿಗೆ ಎಲ್ಲಿ ಚುನಾವಣೆ ಗೆಲ್ಲಲು ಸಾಧ್ಯವಿಲ್ಲವೋ ಅಲ್ಲೆಲ್ಲಾ ಇಡಿ-ಐಟಿ ಬಳಸಿಕೊಂಡು ಆಡಳಿತ ಪಕ್ಷಗಳ ಮೇಲೆ ದಾಳಿ ಮಾಡುವುದು ವಾಡಿಕೆಯಾಗಿಬಿಟ್ಟಿದೆ. ಬಿಜೆಪಿಯ ಇಂತಹ ನೀಚ ನಡೆಗಳಿಗೆ ಜಾರ್ಖಂಡ್‌, ಪಶ್ಚಿಮ ಬಂಗಾಳ, ದೆಹಲಿ. ತಮಿಳುನಾಡು, ಕೇರಳ, ಆಂದ್ರಪ್ರದೇಶ ಮಹಾರಾಷ್ಟ್ರದ ಸೇರಿದಂತೆ ಸಾಕಷ್ಟು ಉದಾಹರಣೆಗಳಿದ್ದು, ಪಟ್ಟಿ ಇನ್ನೂ ದೊಡ್ಡದಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಲೇವಡಿ ಮಾಡಿದರು.

ಕೆಲವು ಪ್ರತಿಷ್ಠಿತ ಸುದ್ದಿಸಂಸ್ಥೆಗಳು ಸಂಶೋಧನಾ ಸಂಸ್ಥೆಗಳು ಈ ಬಗ್ಗೆ ಅಧ್ಯಯನ ಮಾಡಿವೆ. 2014ರಲ್ಲಿ ಬಿಜೆಪಿ ಸರ್ಕಾರ ಬಂದ ನಂತರ ದೇಶದಲ್ಲಿ ಇಡಿ ದಾಖಲಿಸುವ ಪ್ರಕರಣಗಳ ಸಂಖ್ಯೆ ಶೇ.400 ರಷ್ಟು ಹೆಚ್ಚಾಗಿದೆ. ಅದರಲ್ಲಿ ಶೇ.95 ರಷ್ಟು ಪ್ರಕರಣಗಳು ವಿಪಕ್ಷಗಳ ವಿರುದ್ಧವಾಗಿದೆ. ಶೇ.5 ರಷ್ಟು ಮಾತ್ರ ಬಿಜೆಪಿ ಅಥವಾ ಮಿತ್ರ ಪಕ್ಷಗಳ ಮೇಲೆ ಗುರಿಯಾಗಿದೆ. ಈ ಅಂಕಿಅಂಶಗಳೆಲ್ಲವೂ ಬಿಜೆಪಿ ವಾಷಿಂಗ್‌ ಮೆಷಿಂಗ್‌ ಪಕ್ಷ ಎಂಬುದನ್ನು ಸಾಬೀತುಪಡಿಸುತ್ತಿವೆ. ವಿಪಕ್ಷದಲ್ಲಿದ್ರೆ ಕೇಸು, ಬಿಜೆಪಿಗೆ ಸೇರಿದ ಕೂಡಲೇ ಖುಲಾಸೆಯ ಚೀಟಿ ಎಂಬುದನ್ನು ಒತ್ತಿ ಹೇಳುತ್ತಿವೆ. ಇದಕ್ಕೆ ಮಹಾರಾಷ್ಟ್ರ ತೆಲಂಗಾಣ, ಪಶ್ಚಿಮ ಬಂಗಾಳ, ಬಿಹಾರ, ಅಸ್ಸಾಂ ಸೇರಿದಂತೆ ಹಲವು ರಾಜ್ಯಗಳ ಉದಾಹರಣೆಗಳಿವೆ ಎಂದು ಅವರು ಅಂಕಿಅಂಶಗಳನ್ನು ಮುಂದಿಟ್ಟರು.

ಮುಂದುವರೆದು, ಕೇಂದ್ರದಲ್ಲಿ ಬಿಜೆಪಿ ಅಧಿಕಾರದಲ್ಲಿರುವ ಈ ದುರಿತ ಕಾಲದಲ್ಲಿ ಸತ್ಯ ಮತ್ತು ನಿಖರ ಅಂಕಿಅಂಶಗಳು ಲೆಕ್ಕಕ್ಕಿಲ್ಲದಂತಾಗಿದೆ. ಯುಪಿಎ ಸರ್ಕಾರದ ಅವಧಿಯಲ್ಲಿ ಶೇ.53 ರಷ್ಟು ಪ್ರಕರಣಗಳು ಮಾತ್ರ ವಿಪಕ್ಷ ನಾಯಕರ ಮೇಲೆ ದಾಖಲಾಗಿತ್ತು. ಶೇ.47 ರಷ್ಟು ಪ್ರಕರಣಗಳು ಸ್ವತಃ ಕಾಂಗ್ರೆಸ್‌ ಹಾಗೂ ಮಿತ್ರಪಕ್ಷಗಳ ನಾಯಕರ ಮೇಲೆ ದಾಖಲಾಗಿದ್ದವು. ಆದ್ರೆ ಇಂದಿನ ಸ್ಥಿತಿ ಏನು? ಎಂದು ಪತ್ರಕರ್ತರ ಎದುರೇ ಸಚಿವ ಕೃಷ್ಣ ಬೈರೇಗೌಡ ಅವರು ಪ್ರಶ್ನೆಗಳನ್ನು ಮುಂದಿಟ್ಟರು.

ಬಿಜೆಪಿ ಹಗರಣಗಳ ಬಗ್ಗೆ ಇಡಿ ತನಿಖೆ ಏಕಿಲ್ಲ?

ಈ ಹಿಂದೆ ಬಿಜೆಪಿ ಸರ್ಕಾರದಲ್ಲೂ ಸಾಕಷ್ಟು ಹಗರಣಗಳು ನಡೆದಿವೆ. ಕೊರೋನಾ ಸಂದರ್ಭದಲ್ಲಿ ಹೆಣದ ಮೇಲೂ ಕಾಸು ಮಾಡಿದ ಆರೋಪ ಬಿಜೆಪಿ ಮೇಲೆ ಇದೆ. ಆದರೆ, ಜಾರಿ ನಿರ್ದೇಶನಾಲಯ ಈ ಬಗ್ಗೆ ಏಕೆ ತನಿಖೆ ನಡೆಸುವುದಿಲ್ಲ ? ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಪ್ರಶ್ನಿಸಿದರು.

ಈ ಬಗ್ಗೆಯೂ ಗಮನ ಸೆಳೆದ ಅವರು, “ ಬಿಜೆಪಿ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ದೇವರಾಜ ಅರಸು ಟ್ರಕ್‌ ಟರ್ಮಿನಲ್‌ ನಿಗಮದಲ್ಲಿ 46 ಕೋಟಿ ರೂಪಾಯಿ ಲೂಟಿಯಾಗಿದೆ. ಬಿಜೆಪಿಯ ಮಾಜಿ ಎಂಎಲ್‌ಸಿ ಹಾಗೂ ಮಾಜಿ ಎಂಪಿ ಅಭ್ಯರ್ಥಿಯೊಬ್ಬರ ಬ್ಯಾಂಕ್‌ ಖಾತೆಗೆ 3 ಕೋಟಿ ರೂಪಾಯಿ ಹೋಗಿದೆ. ಈ ಪ್ರಕರಣವನ್ನು ಏಕೆ ಇಡಿ ತನಿಖೆ ಮಾಡುತ್ತಿಲ್ಲ, ಇದು ಹಗರಣದ ಲಾಭಾಂಶ ಅಲ್ವ, ಆ ಲೂಟಿಯ ಹಣ ಯಾವ ಎಲೆಕ್ಷನ್‌ಗೆ ಹೋಗಿದೆ ಅಂತ ಇಡಿ ಏಕೆ ತನಿಖೆ ನಡೆಸುತ್ತಿಲ್ಲ. ಭೋವಿ ನಿಗಮ, ತಾಂಡ ಅಭಿವೃದ್ಧಿ ನಿಗಮದಲ್ಲೂ ಕೋಟಿ ಕೋಟಿ ಲೂಟಿಯಾಗಿದೆ ಅಲ್ಲಿ ಏಕೆ ತನಿಖೆ ಇಲ್ಲ ಎಂದು ಕುಟುಕಿದರು.

ಮುಂದುವರೆದು, ವಾಲ್ಮೀಕಿ ನಿಗಮದ ಹಗರಣದ ಸ್ವರೂಪದಂತೆಯೇ ಈ ಹಿಂದೆ ಡಾ. ಅಂಬೇಡ್ಕರ್‌ನಿಗಮದಲ್ಲೂ ಹಗರಣವಾಗಿದೆ. ಈ ಬಗ್ಗೆ ಏಕೆ ತನಿಖೆ ಇಲ್ಲ. ಕೋವಿಡ್‌ ಸಂದರ್ಭದಲ್ಲಿ ಹೆಣಗಳು ಬೀಳ್ತಾ ಇದ್ರೆ, ಬಿಜೆಪಿ ನಾಯಕರು ಹೆಣಗಳ ಮೇಲೆ ಹಣ ಮಾಡ್ತಾ ಇದ್ರಲ್ಲ ಆ ಬಗ್ಗೆ ತನಿಖೆ ಏಕಿಲ್ಲ. ಹಾಗಾದ್ರೆ ಅದು ಹಗರಣ ಅಲ್ವ. ಬಿಜೆಪಿಯ ಶಾಸಕರೇ ಒಬ್ಬರು ಪಕ್ಷದ ಅಧ್ಯಕ್ಷ ವಿಜಯೇಂದ್ರ ಆಗಾಗ್ಗೆ ದುಬೈ ಹೋಗಿಬರುತ್ತಿರುವ ಬಗ್ಗೆ ದ್ವನಿ ಎತ್ತುತ್ತಿದ್ದಾರಲ್ಲ ಆ ಬಗ್ಗೆ ತನಿಖೆ ಏಕಿಲ್ಲ ಎಂದು ಗುಡುಗಿದರು.

ಕೇಂದ್ರ ಬಿಜೆಪಿ ನಾಯಕರ ಇಂತಹ ಇಬ್ಬಗೆಯ ನೀತಿಯನ್ನು ಆಧಾರವಾಗಿಟ್ಟುಕೊಂಡೇ ಸುಪ್ರೀಂ ಕೋರ್ಟ್‌ ಜಾರ್ಖಂಡ್‌ ಮುಖ್ಯಮಂತ್ರಿ  ಸೊರೇನ್‌ ಹಾಗೂ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಬಂಧನ ಪ್ರಕರಣದಲ್ಲಿ ಜಾಮೀನು ನೀಡುವ ಸಂದರ್ಭದಲ್ಲಿ “ಇಡಿ ತನಗಿಷ್ಟ ಬಂದಂತೆ ಕಾರ್ಯತಂತ್ರ ರೂಪಿಸಿದೆ. ಸಾಕ್ಷಿ ಇಲ್ಲದೆ ಹೋದ್ರೂ ಬಂಧಿಸಲಾಗಿದೆ” ಎಂದು ಸ್ವತಃ ನ್ಯಾಯಾಲಯ ದೂರಿರುವ ಕುರಿತು ಸಚಿವರು ಪತ್ರಿಕಾಗೋಷ್ಠಿಯ ಗಮನಕ್ಕೆ ತಂದರು.

ಪ್ರಸ್ತುತ ವಾಲ್ಮೀಕ ನಿಗಮದಲ್ಲಿ ನಡೆದಿರುವ ಹಗರಣದ ತನಿಖೆಯಲ್ಲಿ ಪಾರದರ್ಶಕತೆ ಇಲ್ಲ. ತನಿಖೆಯಲ್ಲಿ ಅಧಿಕಾರದ ದುರುಪಯೋಗ ನಡೆಯುತ್ತಿದೆ. ಪ್ರಕರಣದ ಸಾಕ್ಷಿಗಳನ್ನು ಕರೆಸಿ ಸತ್ಯಕ್ಕ ದೂರವಾದ ಸುಳ್ಳಿನ ಹೇಳಿಕೆಗಳನ್ನು ನೀಡುವಂತೆ ಮಾಡಲಾಗುತ್ತಿದೆ. ಇದು ಸಂವಿಧಾನ ಹಾಗೂ ಪ್ರಜಾಪ್ರಭುತ್ವದ ವಿರೋಧಿ ನಡೆಯಾಗಿದ್ದು, ಅಗತ್ಯ ಬಂದರೆ ನಾವು ಕಾನೂನಿನ ಹೋರಾಟದ ಜೊತೆಗೆ ಬೀದಿಗಿಳಿದೂ ಹೋರಾಟ ನಡೆಸುತ್ತೇವೆ. 

ಪ್ರಜಾಪ್ರಭುತ್ವದ ಕಗ್ಗೊಲೆಗೆ ನಾವು ಅವಕಾಶ ನೀಡುವುದಿಲ್ಲ. ನಮ್ಮ ಪಕ್ಷ ಆ ನಿಲುವಿನಲ್ಲಿ ದೃಢವಾಗಿದೆ. ಕೇಂದ್ರ ಬಿಜೆಪಿ ಸರ್ಕಾರದ ಹೆದರಿಕೆ ಬೆದರಿಕೆ ದಬ್ಬಾಳಿಕೆಗೆ ನಾವು ಬಗ್ಗಲ್ಲ. ದೇಶದ ಜನ ಎರಡು ತಿಂಗಳ ಹಿಂದೆ ಅವರಿಗೆ ಪಾಠ ಕಲಿಸಿದ್ದರು. ಇನ್ನೂ ಪಾಠ ಕಲಿಯದಿರುವುದು ದುರಂತ. ಅವರ ಅವನತಿಗೆ ಅವರೇ ಗುಳಿ ತೋಡಿಕೊಳ್ಳುತ್ತಿದ್ದಾರೆ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.

ಇದನ್ನೂ ಓದಿ:  ಮತ್ತೆ ಶುರುವಾಗ್ತಿದೆ ಬಿಗ್‌ ಬಾಸ್‌ ಕನ್ನಡ: ಈ ಬಾರಿ ದೊಡ್ಮನೆಗೆ ಎಂಟ್ರಿ ಕೊಡ್ತಿದ್ದಾರೆ ಬ್ರೇಕಪ್‌ ಮಾಡ್ಕೊಂಡು ವಿವಾದ ಸೃಷ್ಟಿಸಿದ್ದ ಈ ಜೋಡಿ!?

ಪತ್ರಿಕಾಗೋಷ್ಠಿಯಲ್ಲಿ ಹಿರಿಯ ಸಚಿವರಾದ ಕೆಜೆ ಜಾರ್ಜ್‌, ದಿನೇಶ್‌ ಗುಂಡೂರಾವ್‌, ಪ್ರಿಯಾಂಕ್‌ ಖರ್ಗೆ, ಸಂತೋಷ್‌ ಲಾಡ್ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್‌. ಪೊನ್ನಣ್ಣ ಅವರು ಇದ್ದರು.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Read More