Home> Karnataka
Advertisement

ಸಕಲ ಸರ್ಕಾರಿ ಗೌರವಗಳೊಂದಿಗೆ ಉಮೇಶ್ ಕತ್ತಿ ಅಂತ್ಯಕ್ರಿಯೆ; ಒಡನಾಟ ಹಂಚಿಕೊಂಡು ಸಿಎಂ ಬೊಮ್ಮಾಯಿ ಭಾವುಕ

ಸಕಲ ಸರ್ಕಾರಿ ಗೌರವಗಳೊಂದಿಗೆ ಸಚಿವ ಉಮೇಶ್ ಕತ್ತಿಯವರ ಅಂತ್ಯಕ್ರಿಯೆ ನೆರವೇರಿಸಲಾಗುವುದು ಎಂದು ಸಿಎಂ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ.

ಸಕಲ ಸರ್ಕಾರಿ ಗೌರವಗಳೊಂದಿಗೆ ಉಮೇಶ್ ಕತ್ತಿ ಅಂತ್ಯಕ್ರಿಯೆ; ಒಡನಾಟ ಹಂಚಿಕೊಂಡು ಸಿಎಂ ಬೊಮ್ಮಾಯಿ ಭಾವುಕ

ಬೆಂಗಳೂರು: ಅರಣ್ಯ ಮತ್ತು ಆಹಾರ ಇಲಾಖೆ ಸಚಿವ ಉಮೇಶ್ ಕತ್ತಿ ಅವರ ಅಂತ್ಯಕ್ರಿಯೆಯನ್ನು ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲಾಗುವುದು ಎಂದು ಸಿಎಂ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ. ರಾಜ್ಯವು ಕ್ರಿಯಾಶಿಲ, ಧೀಮಂತ ನಾಯಕ ಹಾಗೂ ಸಹಕಾರಿ ಧುರೀಣರನ್ನು ಕಳೆದುಕೊಂಡಂತಾಗಿದೆ ಅಂತಾ ಇದೇ ವೇಳೆ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ.   

ಇಂದು ಏರ್ ಆ್ಯಂಬುಲೆನ್ಸ್ ಮೂಲಕ ಉಮೇಶ್ ಕತ್ತಿಯವರ ಪಾರ್ಥಿವ ಶರೀರವನ್ನು ಒಯ್ಯಲಾಗುವುದು. ಬೆಳಗಾವಿಯಿಂದ ಸಂಕೇಶ್ವರದ ಹಿರಾ ಸಕ್ಕರೆ ಕಾರ್ಖಾನೆಯ ಆವರಣದಲ್ಲಿ ಸಾರ್ವಜನಿಕ ದರ್ಶನಕ್ಕಾಗಿ ಮಧ್ಯಾಹ್ನ 2 ಗಂಟೆಯವರೆಗೆ ವ್ಯವಸ್ಥೆ ಮಾಡಲಾಗುವುದು. ಅಲ್ಲಿಂದ ಬಾಗೇವಾಡಿಯ ಅವರ ನಿವಾಸದಲ್ಲಿ ಎಲ್ಲ ವಿಧಿ-ವಿಧಾನಗಳನ್ನು ಪೂರೈಸಿ ಸಂಜೆ 5 ಗಂಟೆಗೆ ಅವರ ತೋಟದಲ್ಲಿ ಅಂತಿಮ ಕ್ರಿಯೆ ನೆರವೇರಿಸಲು ತೀರ್ಮಾನಿಸಲಾಗಿದೆ. ಸಾರ್ವಜನಿಕರ ದರ್ಶನಕ್ಕಾಗಿ ಎಲ್ಲ ವ್ಯವಸ್ಥೆ ಮಾಡಲಾಗಿದ್ದು, ಸಹಕಾರ ನೀಡಬೇಕೆಂದು ಸಿಎಂ ಇದೇ ವೇಳೆ ಕೋರಿದರು.

ಇದನ್ನೂ ಓದಿ: ಬೆಲ್ಲದ ಬಾಗೇವಾಡಿಯಲ್ಲಿ ನೀರವ ಮೌನ - ಸ್ವಗ್ರಾಮದಲ್ಲಿಯೇ ಉಮೇಶ್ ಕತ್ತಿ ಅಂತ್ಯಕ್ರಿಯೆ

ಜನಪರ ಕಾಳಜಿ ಮತ್ತು ರೈತ ಹಿತಚಿಂತನೆಯ ನಾಯಕ

ಉಮೇಶ್ ಕತ್ತಿ ನನ್ನ ಆತ್ಮೀಯ ಸಹೋದರರು. ಸುಮಾರು 4 ದಶಕಗಳಿಗೂ ಹೆಚ್ಚು ನಮ್ಮ & ಅವರ ಕುಟುಂಬದ ಒಡನಾಟವಿತ್ತು. ಅವರ ತಂದೆ ವಿಶ್ವನಾಥ್ ಕತ್ತಿಯವರು ನಮ್ಮ ತಂದೆಯವರ ಜೊತೆಗೆ ಆತ್ಮೀಯ ಒಡನಾಟವಿತ್ತು. ಅವರು ವಿಧಾನಸಭೆಯ ಕಲಾಪ ನಡೆಯುತ್ತಿದ್ದ ಸಂದರ್ಭದಲ್ಲಿ ಹೃದಯಾಘಾತವಾಗಿ ವಿಧಿವಶರಾಗಿದ್ದರು. ಆ ಸಂದರ್ಭದಲ್ಲಿ ಅತ್ಯಂತ ಕಿರಿಯ 25 ವಯಸ್ಸಿನ ಉಮೇಶ್ ಕತ್ತಿ ಶಾಸಕಾರಾಗಿ ಸಾರ್ವಜನಿಕ ಜೀವನದಲ್ಲಿ ಪಾದಾರ್ಪಣೆ ಮಾಡಿದರು. ಬಳಿಕ ಅವರು ಎಂದೂ ತಿರುಗಿ ನೋಡಲಿಲ್ಲ. 8 ಬಾರಿ ಶಾಸಕರಾಗಿ ಆಯ್ಕೆಯಾಗಿ ರಾಜ್ಯದ ಒಬ್ಬ ಪ್ರಮುಖ ನಾಯಕನಾಗಿ ಹೊರಹೊಮ್ಮಿದ್ದರು. ಈ ವಿಧಾನಸಭೆಯಲ್ಲಿ ಅತಿಹೆಚ್ಚು ಬಾರಿ ಶಾಸಕರಾದವರಲ್ಲಿ ಅವರೇ ಹಿರಿಯರು. ಅವರ ಜನಪರ ಕಾಳಜಿ, ವಿಶೇಷವಾಗಿ ರೈತರಿಗೆ, ರೈತ ಹಿತಚಿಂತಕರಾಗಿ ಅವರ ಕೆಲಸಗಳು ಮತ್ತು ರಾಜ್ಯದ ಸಚಿವ ಸಂಪುಟದ ಸದಸ್ಯರಾಗಿ, ಜೆ.ಹೆಚ್.ಪಟೇಲ್‍ರ ಸಚಿವ ಸಂಪುಟದಲ್ಲಿ ಸಕ್ಕರೆ, ಬಂಧಿಖಾನೆ ಹಾಗೂ ಲೋಕಕೋಪಯೋಗಿ ಸಚಿವಾರಗಿ ಕೆಲಸ ಮಾಡಿದ್ದರು. ಬಿ.ಎಸ್.ಯಡಿಯೂರಪ್ಪರ ಸಚಿವ ಸಂಪುಟದಲ್ಲಿ ತೋಟಗಾರಿಕೆ ಮತ್ತು ಕೃಷಿ ಸಚಿವರಾಗಿ ಕರ್ತವ್ಯ ನಿರ್ವಹಿಸಿದ್ದರು. ಉತ್ತರ ಕರ್ನಾಟಕದ ಬಗ್ಗೆ ವಿಶೇಷ ಕಾಳಜಿ ಮತ್ತು ಪ್ರೀತಿ ಅವರಲ್ಲಿತ್ತು ಎಂದು ಹಿರಿಯ ನಾಯಕನ ಕೊಡುಗೆಯನ್ನು ಸಿಎಂ ಬೊಮ್ಮಾಯಿ ಸ್ಮರಿಸಿದ್ದಾರೆ.

ಆಹಾರ-ಅರಣ್ಯ ಖಾತೆಯಲ್ಲಿ ಛಾಪು ಮೂಡಿಸಿದ ಸಚಿವ

ಆಹಾರ ಮತ್ತು ಅರಣ್ಯ ಇಲಾಖೆ ಸಚಿವರಾಗಿ ಅತ್ಯುತ್ತಮವಾಗಿ ನಿಭಾಯಿಸುತ್ತಿದ್ದರು. ಯಾವುದೇ ಖಾತೆ ನೀಡಿದರೂ ತಮ್ಮದೇ ಆದ ಛಾಪನ್ನು ಮೂಡಿಸುತ್ತಿದ್ದರು. ಅವರು ಆಹಾರ ಸಚಿವರಾದ ನಂತರ ಉತ್ತರ ಕರ್ನಾಟಕದಲ್ಲಿ ಬೆಳೆಯುವ ಜೋಳ, ದಕ್ಷಿಣ ಕರ್ನಾಟಕದಲ್ಲಿ ಬೆಳೆಯುವ ರಾಗಿಯನ್ನು ಪಿಡಿಎಸ್‍ನಲ್ಲಿ ತರಲು, ರೈತರ ಬೆಳೆಗೆ ಯೋಗ್ಯ ಬೆಲೆ ದೊರೆಯಲು ಗಟ್ಟಿಯಾಗಿ ನಿಂತಿದ್ದರು. ಅವರು ಮಾಡಿದ ಕಾರ್ಯ ಎಂದಿಗೂ ಮರೆಯಲು ಸಾಧ್ಯವಿಲ್ಲ. ನೀರಾವರಿ ಕ್ಷೇತ್ರದಲ್ಲಿ ದೊಡ್ಡ ಪರಿಣಿತರಿದ್ದರು. 3 ದಶಕಗಳ ಕಾಲ ಶಾಸಕರಾಗಿ, ಮಂತ್ರಿಯಾಗಿ ಘಟಪ್ರಭಾ ಯೋಜನೆಯ ಅನುಷ್ಠಾನದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅವರ ಹಿಡಕಲ್ ಜಲಾಶಯದ ತೋಟವನ್ನು ಆಲಮಟ್ಟಿ ಮಾದರಿಯಲ್ಲಿ ಮತ್ತು ಬೃಂದಾವನ ಮಾಡಲು, ಹಿಡಕಲ್ ಜಲಾಶಯದ ಹಿನ್ನೀರಿನ ನಡುಗಡ್ಡೆಗಳನ್ನು ಪ್ರವಾಸೋದ್ಯಮ ಕೇಂದ್ರಗಳಾಗಿ ಮಾಡಬೇಕೆಂಬ ಮಹತ್ವಾಕಾಂಕ್ಷೆ ಹೊಂದಿದ್ದರು. ಅದನ್ನು ಬಜೆಟ್ ನಲ್ಲಿ ಘೋಷಿಸಿ ಮೊನ್ನೆ ನಡೆದ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಂಡಾಗ ಅವರ ಕನಸನ್ನು ನನಸು ಮಾಡಿದ್ದಕ್ಕಾಗಿ ನನ್ನನ್ನು ಅಭಿನಂದಿಸಿದ್ದರು ಎಂದು ಸಿಎಂ  ಬೊಮ್ಮಾಯಿ ನೆನೆದರು.

ಇದನ್ನೂ ಓದಿ: Umesh Katti: ಉಮೇಶ್ ಕತ್ತಿ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ

ಅಜಾತಶತ್ರು ವ್ಯಕ್ತಿತ್ವ

ವ್ಯಕ್ತಿಗತವಾಗಿ ಉಮೇಶ್ ಕತ್ತಿ ಅಜಾತಶತ್ರು. ಎಲ್ಲರ ಜೊತೆಗೆ ನಗು ನಗುತ್ತಲೇ ಮಾತನಾಡುತ್ತಿದ್ದರು. ರಾಜಕಾರಣಿಗಳಲ್ಲಿ ಹಾಸ್ಯಪ್ರಜ್ಞೆ ಇರುವುದು ಕಡಿಮೆ. ಎಂತಹುದೇ ಕಠಿಣ ಪರಿಸ್ಥಿತಿಯಲ್ಲಿಯೂ ತಮ್ಮ ಹಾಸ್ಯದಿಂದ ತಿಳಿಗೊಳಿಸಿ ಪರಿಹಾರ ನೀಡುತ್ತಿದ್ದರು. ಅದರ ಪ್ರೀತಿ-ವಿಶ್ವಾಸವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಜೆ.ಎಚ್.ಪಟೇಲ್, ರಾಮಕೃಷ್ಣ ಹೆಗಡೆ, ಎಸ್.ಆರ್.ಬೊಮ್ಮಾಯಿ, ಎಚ್.ಡಿ.ದೇವೇಗೌಡ, ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಹಿರಿಯರ ಜೊತೆಗೆ ಉತ್ತಮ ಸಂಬಂಧವಿರಿಸಿಕೊಂಡಿದ್ದರು. ನನ್ನ ಜೊತೆಗೆ 3 ದಶಕಗಳಿಗೂ ಹೆಚ್ಚು ಕಾಲ ಸಹೋದರರ ಸಂಬಂಧವಿತ್ತು ಎಂದು ಸಿಎಂ ಇದೇ ವೇಳೆ ಭಾವುಕರಾದರು.

ಸಹಕಾರ ರಂಗದಲ್ಲಿ ಹಿರಿದಾದ ಪಾತ್ರ

ರಾಜಕಾರಣದಲ್ಲಿ ನಾವಿಬ್ಬರು ಹಲವಾರು ಏರುಪೇರುಗಳನ್ನು ಒಟ್ಟಿಗೆ ನೋಡಿದ್ದೇವೆ. ಹಲವು ಹೋರಾಟಗಳಲ್ಲಿ ಪ್ರಮುಖ ರಾಜಕೀಯ ನಿರ್ಧಾರಗಳನ್ನು ಒಟ್ಟಿಗೆ ತೆಗೆದುಕೊಂಡಿದ್ದೇವೆ. ಆಡಳಿತಾತ್ಮಕ ನಿರ್ಧಾರಗಳನ್ನು ಪರಸ್ಪರ ವಿಶ್ವಾಸದೊಂದಿಗೆ ಮಾಡಿದ್ದೇವೆ. ಆ ಪ್ರತಿಯೊಂದು ಕ್ಷಣ ನನಗೆ ನೆನಪಾಗುತ್ತಿದೆ. ಅವರ ಸೋದರ ರಮೇಶ್ ಕತ್ತಿ, ಅವರ ಕುಟುಂಬದ ಎಲ್ಲ ಸದಸ್ಯರು ಅತ್ಯಂತ ಆತ್ಮೀಯರಾಗಿದ್ದರು. ಸಹಕಾರ ರಂಗದಲ್ಲಿ ಅತ್ಯಂತ ಹಿರಿದಾದ ಪಾತ್ರ ವಹಿಸಿದ್ದ ಸಹಕಾರಿ ಧುರೀಣರಾಗಿದ್ದರು.  ಸಹಕಾರಿ ಬ್ಯಾಂಕ್, ಸಕ್ಕರೆ ಕಾರ್ಖಾನೆ, ವಿದ್ಯುತ್ ವಿಸ್ತರಣೆ ಮತ್ತು ಸಹಕಾರಿ ಸೊಸೈಟಿಯ ಅಧ್ಯಕ್ಷರಾಗಿ ಸಮರ್ಪಕವಾಗಿ ಕಾರ್ಯ ನಿರ್ವಹಿಸಿದ್ದರು. ರಾಜ್ಯಕ್ಕೆ ವಿದ್ಯುತ್, ನೀರಾವರಿ ಕ್ಷತ್ರದಲ್ಲಿ ಹಲವು ಬಾರಿ ಮಾರ್ಗದರ್ಶನ ಮಾಡಿದ್ದಾರೆ. ವಿರೋಧಪಕ್ಷದಲ್ಲಿ ಹಾಗೂ ಆಡಳಿತ ಪಕ್ಷದಲ್ಲಿ ಹಲವು ಸ್ನೇಹಿತರನ್ನು ಹೊಂದಿದ್ದರು. ಬೆಳಗಾವಿ ಜಿಲ್ಲೆ ಹಿರಿಯ ಧುರೀಣರನ್ನು ಕಳೆದುಕೊಂಡಿದ್ದು, ಉತ್ತರ ಕರ್ನಾಟಕದ ಧ್ವನಿ ಈಗ ನಿಂತು ಹೋಗಿದೆ. ವೈಯಕ್ತಿಕವಾಗಿ ನನಗೆ ತುಂಬಲಾರದ ನಷ್ಟವಾಗಿದೆ. ಒಬ್ಬ ಸಹೋದರನನ್ನು ಕಳೆದುಕೊಂಡಿದ್ದೇನೆ. ಭಗವಂತ ಅವರ ಆತ್ಮಕ್ಕೆ ಶಾಂತಿಯನ್ನು ನೀಡಲಿ, ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Read More