Home> Karnataka
Advertisement

ಈ ಉಪಚುನಾವಣೆ ಹೊಸಕೋಟೆಯ ಸ್ವಾಭಿಮಾನಿ ಜನತೆ, ನಂಬಿಕೆದ್ರೋಹದ ನಡುವಿನ ಚುನಾವಣೆ; ಸಿದ್ದರಾಮಯ್ಯ

ಸ್ವಾರ್ಥಕ್ಕಾಗಿ ನಂಬಿದವರ ಬೆನ್ನಿಗೆ ಚೂರಿ ಹಾಕುವವರಿಗೆ ಮತ ನೀಡಿದರೆ ಅಂಥವರು ಜನರ ಪರವಾಗಿ ಕೆಲಸ ಮಾಡುವರೇ? ರಾಜಕೀಯ ಪಕ್ಷಗಳು ಉಳಿದಿರುವುದು ಜನರಿಂದ, ಕಾರ್ಯಕರ್ತರಿಂದಲೇ ಹೊರತು ನಾಯಕರುಗಳಿಂದ ಅಲ್ಲ. ಸಾವಿರ ಪಕ್ಷಗಳನ್ನು ಉಳಿಸುವ, ಬೆಳೆಸುವ ಶಕ್ತಿ ಇರುವುದು ಮತದಾರರಲ್ಲಿ ಮಾತ್ರ ಎಂಬುದನ್ನು ಮರೆಯಬಾರದು- ಹೊಸಕೋಟಿ ಚುನಾವಣಾ ಪ್ರಚಾರದ ವೇಳೆ ಮಾಜಿ ಸಿಎಂ ಸಿದ್ದರಾಮಯ್ಯ

ಈ ಉಪಚುನಾವಣೆ ಹೊಸಕೋಟೆಯ ಸ್ವಾಭಿಮಾನಿ ಜನತೆ, ನಂಬಿಕೆದ್ರೋಹದ ನಡುವಿನ ಚುನಾವಣೆ; ಸಿದ್ದರಾಮಯ್ಯ

ಹೊಸಕೋಟೆ: ಹೊಸಕೋಟೆ(Hosakote) ವಿಧಾನಸಭಾ ಕ್ಷೇತ್ರದ ನಂದಗುಡಿಯಲ್ಲಿ ಆಯೋಜಿಸಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಪದ್ಮಾವತಿ ಸುರೇಶ್ ಅವರ ಪರ ಮತ ಯಾಚಿಸಿದರು. ಈ ಸಂದರ್ಭದಲ್ಲಿ ಅದೇ ಕ್ಷೇತ್ರದಿಂದ ಬಿಜೆಪಿಯಿಂದ ಕಣಕ್ಕಿಳಿದಿರುವ ಎಂಟಿಬಿ ನಾಗರಾಜ್ ವಿರುದ್ಧ ತೀವ್ರ ವಾಗ್ಧಾಳಿ ನಡೆಸಿದ ಅವರು, ಈ ಉಪಚುನಾವಣೆ ಹೊಸಕೋಟೆಯ ಸ್ವಾಭಿಮಾನಿ ಜನತೆ ಮತ್ತು ನಂಬಿಕೆದ್ರೋಹದ ನಡುವಿನ ಚುನಾವಣೆ. ಕ್ಷೇತ್ರವನ್ನು ಪ್ರತಿನಿಧಿಸಲು ಯಾರು ಅರ್ಹರು ಎಂದು ಮತದಾರರೇ ತೀರ್ಮಾನಿಸಬೇಕು ಎಂದು ಮತದಾರರಿಗೆ ಕರೆ ನೀಡಿದರು.

ಹೊಸಕೋಟೆಯಲ್ಲಿ ನಡೆಯುತ್ತಿರುವ ಉಪಚುನಾವಣೆಯನ್ನು ಇಲ್ಲಿನ ಯಾವೊಬ್ಬ ವ್ಯಕ್ತಿಯೂ ಬಯಸಿರಲಿಲ್ಲ ಎಂಬುದನ್ನು ಒತ್ತಿ ಹೇಳಿದ ಸಿದ್ದರಾಮಯ್ಯ, ಇಲ್ಲಿನ ಶಾಸಕರಾಗಿದ್ದ ಎಂ.ಟಿ.ಬಿ ನಾಗರಾಜ್(MTB Nagaraj) ಅವರು ನಮ್ಮ ಪಕ್ಷಕ್ಕೆ(ಕಾಂಗ್ರೆಸ್) ದ್ರೋಹಮಾಡಿ, ಬಿಜೆಪಿ ಸೇರಿದ್ದರ ಫಲ ಕ್ಷೇತ್ರ ಮತ್ತೊಂದು ಚುನಾವಣೆ ಎದುರಿಸುವಂತಾಗಿದೆ. ನಾಗರಾಜ್ ಅವರಿಗೆ ಹೊಸಕೋಟೆ ಕ್ಷೇತ್ರದಲ್ಲಿ 4 ಬಾರಿ ಪಕ್ಷದಿಂದ ಟಿಕೇಟ್ ನೀಡಿ, ನಾನು(ಸಿದ್ದರಾಮಯ್ಯ) ಮುಖ್ಯಮಂತ್ರಿಯಾಗಿದ್ದಾಗ ನಿಗಮ ಮಂಡಳಿ ಅಧ್ಯಕ್ಷ ಹಾಗೂ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಮಂತ್ರಿ ಮಾಡಿದ್ದೆವು. ಇಷ್ಟೆಲ್ಲಾ ಮಾಡಿದ ಹೊರತಾಗಿಯೂ ಪಕ್ಷ ಬಿಡಲು ಕಾರಣವೇನು ಎಂದು ಇಲ್ಲಿನ ಮತದಾರರು ಎಂಟಿಬಿ ನಾಗರಾಜ್ ಅವರನ್ನು ಪ್ರಶ್ನಿಸಬೇಕು ಎಂದು ತಿಳಿಸಿದರು.

ಪಕ್ಷ ಬಿಡುವ ಮುಂಚೆ ನಾಗರಾಜ್ ನಮ್ಮ ಮನೆಗೆ ಬಂದಿದ್ದರು, ಆಗ ನಿಮ್ಮ ಸಮಸ್ಯೆ ಏನಪ್ಪ? ಯಾಕೆ ಪಕ್ಷ ಬಿಡ್ತೀನಿ ಅಂತಿದೀರ ಎಂದು ಕೇಳಿದೆ. ಅದಕ್ಕವರು ನಾನು ಚಿಕ್ಕಬಳ್ಳಾಪುರ ಶಾಸಕ ಸುಧಾಕರ್‌ಗೆ ಪಕ್ಷ ಬಿಟ್ಟು ನಿಮ್ಮ ಜೊತೆ ಬರುತ್ತೇನೆ ಎಂದು ಮಾತುಕೊಟ್ಟಿದ್ದೀನಿ ಎಂದಿದ್ದರು. ಇವರನ್ನು ಗೆಲ್ಲಿಸಿದ್ದು ಸುಧಾಕರ್‌ ಅವರೋ ಅಥವಾ ಹೊಸಕೋಟೆ ಜನತೆಯೋ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

ಸ್ವಾರ್ಥಕ್ಕಾಗಿ ನಂಬಿದವರ ಬೆನ್ನಿಗೆ ಚೂರಿ ಹಾಕುವವರಿಗೆ ಮತ ನೀಡಿದರೆ ಅಂಥವರು ಜನರ ಪರವಾಗಿ ಕೆಲಸ ಮಾಡುವರೇ? ಎಂದು ಪ್ರಶ್ನಿಸಿದ ಸಿದ್ದರಾಮಯ್ಯ, ರಾಜಕೀಯ ಪಕ್ಷಗಳು ಉಳಿದಿರುವುದು ಜನರಿಂದ, ಕಾರ್ಯಕರ್ತರಿಂದಲೇ ಹೊರತು ನಾಯಕರುಗಳಿಂದ ಅಲ್ಲ. ಸಾವಿರ ಪಕ್ಷಗಳನ್ನು ಉಳಿಸುವ, ಬೆಳೆಸುವ ಶಕ್ತಿ ಇರುವುದು ಮತದಾರರಲ್ಲಿ ಮಾತ್ರ ಎಂಬುದನ್ನು ಮರೆಯಬಾರದು ಎಂದು ಮತದಾರರಿಗೆ ಕಿವಿಮಾತು ಹೇಳಿದರು.

ದೇಶದ ಸರ್ವೋಚ್ಛ ನ್ಯಾಯಾಲಯವೇ ನಾಗರಾಜ್ ಅವರನ್ನು ಅನರ್ಹ ಎಂದು ಹೇಳಿದೆ. ಮತ್ತೆ ಯಾವ ಮುಖ ಹೊತ್ತುಕೊಂಡು ಜನರ ಬಳಿ ಮತ ಕೇಳಲು ಬರುತ್ತಾರೆ. ಪಕ್ಷಾಂತರ ಮಾಡಿದವರೆಲ್ಲ ರಾಜಕೀಯದಲ್ಲಿ ಇರಲು ನಾಲಾಯಕ್ ಎಂದು ಸುಪ್ರೀಂ ಕೋರ್ಟೇ ಹೇಳಿದ ಮೇಲೆ ಜನತೆ ಅವರಿಗೆ ಮತ ನೀಡಬೇಕೆ? ಎಂದರು.

ದೇಶಕ್ಕಾಗಿ ಕಾಂಗ್ರೆಸ್ ಏನು ಮಾಡಿದೆ ಎಂದು ಕೇಳುತ್ತಲೇ ಕಾಂಗ್ರೆಸ್ ಸ್ಥಾಪಿಸಿದ ಬಿ.ಎಸ್.ಎನ್.ಎಲ್(BSNL), ಬಿ.ಇ.ಎಮ್.ಎಲ್(BEML), ಹೆಚ್.ಎಂ.ಟಿ(HMT), ಏರ್ ಇಂಡಿಯಾ ಸಂಸ್ಥೆಗಳನ್ನು ಒಂದೊಂದಾಗಿ ಬಾಗಿಲು ಹಾಕಿಸುತ್ತಿದ್ದಾರೆ. ಹೀಗೇ ಆದರೆ ಕಾಂಗ್ರೆಸ್ ಸ್ಥಾಪಿಸಿದ ಸಂಸ್ಥೆಗಳ ಬಾಗಿಲು ಹಾಕಿಸಿದ್ದೊಂದೇ ಪ್ರಧಾನಿ ನರೇಂದ್ರ ಮೋದಿಯವರ ಸಾಧನೆಯಾಗಲಿದೆ ಎಂದು ಮೋದಿ ಸರ್ಕಾರದ ವಿರುದ್ಧ ಸಿದ್ದರಾಮಯ್ಯ ಕಿಡಿಕಾರಿದರು.

ನಮ್ಮದು ಸಹೋದರತ್ವ, ಸಹಬಾಳ್ವೆಯ ಸಿದ್ಧಾಂತವನ್ನು ನಂಬಿರುವ ಪಕ್ಷ, ನಾಗರಾಜ್ ಸೇರಿರುವುದು ಸಮಾಜ ಒಡೆಯುವ ಕೋಮುವಾದಿ ಪಕ್ಷವನ್ನು. ಸಮಾಜ ಕಟ್ಟುವ ಕೈ ಬೆಂಬಲಿಸಬೇಕೋ ಅಥವಾ ಸಮಾಜ ಒಡೆಯುವ ಕೈ ಬೆಂಬಲಿಸಬೇಕೋ ಎಂದು ಯೋಚಿಸಿ ಮತ ನೀಡಿ. ಅನರ್ಹರನ್ನು ಸೋಲಿಸಿ, ಅರ್ಹರನ್ನು ಗೆಲ್ಲಿಸುವ ಮೂಲಕ ಪ್ರಜಾಪ್ರಭುತ್ವವನ್ನು ಉಳಿಸಿ ಎಂದು ಸಿದ್ದರಾಮಯ್ಯ ಜನತೆಯಲ್ಲಿ ಮನವಿ ಮಾಡಿದರು.

Read More