Home> Karnataka
Advertisement

ರೈತರಿಗೆ ಪರಿಹಾರ ನೀಡದ ಬಿಜೆಪಿ ಸರ್ಕಾರಕ್ಕೆ ಕಣ್ಣು, ಕಿವಿ ಯಾವುದೂ ಇಲ್ಲ: ಸಿದ್ದರಾಮಯ್ಯ

ನಮ್ಮ ಸರ್ಕಾರ ತೊಗರಿ ಬೆಳೆಗೆ ಕನಿಷ್ಠ ಬೆಂಬಲ ಬೆಲೆ ಮೊದಲು 450 ರೂ., ನಂತರ 550 ರೂ.ವನ್ನು ಹೆಚ್ಚುವರಿಯಾಗಿ ನೀಡಿತ್ತು. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಇದನ್ನು 300 ರೂ.ಗೆ ಇಳಿಸಿದೆ ಅಂತಾ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.  

ರೈತರಿಗೆ ಪರಿಹಾರ ನೀಡದ ಬಿಜೆಪಿ ಸರ್ಕಾರಕ್ಕೆ ಕಣ್ಣು, ಕಿವಿ ಯಾವುದೂ ಇಲ್ಲ: ಸಿದ್ದರಾಮಯ್ಯ

ಬೆಳಗಾವಿ: ರೈತರಿಗೆ ಸರಿಯಾಗಿ ಬೆಳೆ ಪರಿಹಾರ ನೀಡದ ಬಿಜೆಪಿ ಸರ್ಕಾರಕ್ಕೆ ಕಣ್ಣು, ಕಿವಿ ಯಾವುದೂ ಇಲ್ಲವೆಂದು ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯ(Siddaramaiah) ಕಿಡಿಕಾರಿದ್ದಾರೆ. ಬೆಳಗಾವಿ ಚಳಿಗಾಲ ಅಧಿವೇಶನ(Belagavi Winter Session)ದಲ್ಲಿ ಮಂಗಳವಾರ ಮಾತನಾಡಿರುವ ಅವರು, ‘2019ರಲ್ಲಿ ಬಂದ ಭಾರಿ ಪ್ರವಾಹದಿಂದ ಬಿದ್ದ ಮನೆಗಳು 2.47 ಲಕ್ಷ. ಅದರಲ್ಲಿ 1 ಲಕ್ಷದ 14 ಸಾವಿರ ಮನೆಗಳಿಗೆ ಇನ್ನೂ ಪರಿಹಾರ ನೀಡಿಲ್ಲ. ಸೂರು ಕಳೆದುಕೊಂಡ ಬಡ ಜನ ದಿಕ್ಕು ತೋಚದೆ ಕೂತಿದ್ದಾರೆ. ಬಿಜೆಪಿ ಸರ್ಕಾರಕ್ಕೆ ಕಣ್ಣು, ಕಿವಿ ಯಾವುದೂ ಇಲ್ಲ’ ಅಂತಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯ ನಿಯಮಗಳೇ ರೈತ(Farmers) ವಿರೋಧಿಯಾಗಿದೆ. ಶೇ.33ಕ್ಕಿಂತ ಕಡಿಮೆ ಬೆಳೆ ಹಾನಿಗೆ ಪರಿಹಾರ ನೀಡಲ್ಲ. ಬೆಳೆದು ನಿಂತ ಬೆಳೆಗಳು ಹಾನಿಯಾದಾಗ ಮಾತ್ರ ಪರಿಹಾರ ನೀಡಲಾಗುತ್ತೆ. ಕಟಾವು ಆಗಿರುವ ಬೆಳೆ ಮಳೆಯಿಂದ ಹಾನಿಯಾದರೆ ಅದಕ್ಕೆ ಪರಿಹಾರ ಸಿಗಲ್ಲ. ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯ ನಿಯಮಗಳು ಕೊನೆಯ ಬಾರಿ ಪರಿಷ್ಕರಣೆಗೊಂಡಿದ್ದು 2015ರಲ್ಲಿ. ಹಳೆಯ ನಿಯಮಗಳಿಗೆ ಬದಲಾವಣೆ ತಂದು ನಷ್ಟದಲ್ಲಿರುವ ಎಲ್ಲ ರೈತರಿಗೆ ಪರಿಹಾರ ನೀಡುವಂತೆ ಪರಿಷ್ಕರಿಸಬೇಕು’ ಎಂದು ಅವರು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ಪರಿಷತ್ ಫೈಟ್ : ಗೆದ್ದವರು ಯಾರು..? ಸೋತವರು ಯಾರು..? ಇಲ್ಲಿದೆ ಸಂಪೂರ್ಣ ಮಾಹಿತಿ

‘ನಮ್ಮ ಸರ್ಕಾರ ತೊಗರಿ ಬೆಳೆಗೆ ಕನಿಷ್ಠ ಬೆಂಬಲ ಬೆಲೆ ಮೊದಲು 450 ರೂ., ನಂತರ 550 ರೂ.ವನ್ನು ಹೆಚ್ಚುವರಿಯಾಗಿ ನೀಡಿತ್ತು. ಬಿಜೆಪಿ ಸರ್ಕಾರ(BJP Government) ಅಧಿಕಾರಕ್ಕೆ ಬಂದ ನಂತರ ಇದನ್ನು 300 ರೂ.ಗೆ ಇಳಿಸಿದೆ. ಇದೇನಾ ತಮ್ಮದು ರೈತ ಪರ ಸರ್ಕಾರ ಎಂದು ಕರೆದುಕೊಳ್ಳುವವರ ಧೋರಣೆ? NDRF ನಿಯಮದ ಪ್ರಕಾರ ಕುಷ್ಕಿ ಜಮೀನಿಗೆ 6,800 ರೂ., ತರಿ ಜಮೀಮಿಗೆ 13,500 ರೂ. ಮತ್ತು ತೋಟಗಾರಿಕಾ ಬೆಳೆಗಳಿಗೆ 18,000 ರೂ. ಪರಿಹಾರ ನೀಡಬೇಕು. ಗರಿಷ್ಠ 2 ಹೆಕ್ಟೇರ್ ಬೆಳೆಹಾನಿಗೆ ಮಾತ್ರ ಪರಿಹಾರ ನೀಡಬೇಕೆಂದಿದೆ. NDRF ನಿಯಮಗಳಡಿ ಈಗ ನೀಡುತ್ತಿರುವ ಪರಿಹಾರದ ಹಣ ರೈತರು ಬಿತ್ತನೆ ಬೀಜ ಖರೀದಿ ಮಾಡಲು ವೆಚ್ಚ ಮಾಡುವ ಹಣಕ್ಕಿಂತ ಕಡಿಮೆಯಿದ್ದು, ಇದನ್ನು ಕನಿಷ್ಠ 3 ಪಟ್ಟು ಹೆಚ್ಚಿಸಬೇಕೆಂದು’ ಸಿದ್ದರಾಮಯ್ಯ ರಾಜ್ಯ ಮತ್ತು ಕೇಂದ್ರ ಬಿಜೆಪಿ ಸರ್ಕಾರಗಳನ್ನು ಒತ್ತಾಯಿಸಿದ್ದಾರೆ.

‘ಪ್ರಸಕ್ತ ವರ್ಷ 39,000 ಮನೆಗಳು ಮಳೆ(Karnataka Flood)ಯಿಂದ ಹಾನಿಗೀಡಾಗಿದೆ. ಈವರೆಗೆ ಒಂದೇ ಒಂದು ಮನೆಗೆ ಪರಿಹಾರದ ಹಣ ನೀಡಿಲ್ಲ. 12 ಲಕ್ಷ ಎಕರೆ ಪ್ರದೇಶಕ್ಕೆ 782 ಕೋಟಿ ರೂ. ಬೆಳೆ ಪರಿಹಾರದ ಹಣ ಮಾತ್ರ ನೀಡಲಾಗಿದೆ. ಬೆಳೆ ನಷ್ಟ ನಮೂದು ಮಾಡುವುದನ್ನು ಈ ತಿಂಗಳ 8ನೇ ತಾರೀಖಿಗೆ ಕೊನೆಗೊಳಿಸಲಾಗಿದೆ. ಹಲವು ರೈತರ ಬೆಳೆನಷ್ಟದ ಮಾಹಿತಿ ಇನ್ನೂ ನಮೂದಾಗದೆ ಬಾಕಿ ಉಳಿದಿರುವುದರಿಂದ ಬೆಳೆ‌ ನಷ್ಟ ನಮೂದು ಪ್ರಕ್ರಿಯೆಯನ್ನು ಬಿಜೆಪಿ ಸರ್ಕಾರ ಮುಂದುವರೆಸಬೇಕೆಂದು’ ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಸಾವಿರ ಕೋಟಿ ಒಡೆಯನಿಗೆ ಕೈಹಿಡಿಯದ ಅದೃಷ್ಟ: ‘ಕೆಜಿಎಫ್ ಬಾಬು’ಗೆ ಹೀನಾಯ ಸೋಲು..!

‘ಹಿಂದಿನ ಯುಪಿಎ ಸರ್ಕಾರ(UPA Govt.)ದ ಅವಧಿಯ ಬಜೆಟ್ ಗಾತ್ರ 16 ಲಕ್ಷದ 65 ಸಾವಿರ ಕೋಟಿ ರೂ. ಇತ್ತು. ಕೇಂದ್ರದ ಈಗಿನ ಬಜೆಟ್ ಗಾತ್ರ 34 ಲಕ್ಷದ 83 ಸಾವಿರ ಕೋಟಿ ರೂ. ಆಗಿದೆ. ಬಜೆಟ್ ಗಾತ್ರ ಹೆಚ್ಚಾದಂತೆ NDRFನ ಗಾತ್ರ, ರಾಜ್ಯಗಳಿಗೆ ನೀಡುವ ಪರಿಹಾರದ ಹಣ ಹೆಚ್ಚಾಗಬೇಕಲ್ಲವೇ? ರಾಜ್ಯ ವಿಪತ್ತು ಪರಿಹಾರ ನಿಧಿ ನಿಯಮಗಳ ಅನ್ವಯ 2019ರಲ್ಲಿ ರಾಜ್ಯ ಬಿಜೆಪಿ ಸರ್ಕಾರ ಪರಿಹಾರ ನೀಡಿದ್ದು 1,652 ಕೋಟಿ ರೂ., ನೀಡಬೇಕಾದುದ್ದು 3,891 ಕೋಟಿ ರೂ. 2020ರಲ್ಲಿ 1,318 ಕೋಟಿ ರೂ. ಪರಿಹಾರ ನೀಡಲಾಗಿದೆ. ಕಳೆದ 2 ವರ್ಷದಲ್ಲಿ ಒಟ್ಟು 2,971 ರೂ. ಕೋಟಿ ಮಾತ್ರ ಪರಿಹಾರ ನೀಡಲಾಗಿದೆ’ ಅಂತಾ ಸಿದ್ದರಾಮಯ್ಯ ಹೇಳಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More