Home> Karnataka
Advertisement

'ನಡೆದಾಡುವ ದೇವರ' ಆರೋಗ್ಯ ಸ್ಥಿತಿ ಗಂಭೀರ: ಶ್ರೀಗಳ ಆಪ್ತ ವೈದ್ಯ ಡಾ. ಪರಮೇಶ್

ಸಿದ್ದಗಂಗಾ ಮಠದಲ್ಲಿ ನೀರವ ಮೌನ, ಶ್ರೀಗಳ ಆರೋಗ್ಯಕ್ಕಾಗಿ ವಿದ್ಯಾರ್ಥಿಗಳ ಪ್ರಾರ್ಥನೆ.

'ನಡೆದಾಡುವ ದೇವರ' ಆರೋಗ್ಯ ಸ್ಥಿತಿ ಗಂಭೀರ: ಶ್ರೀಗಳ ಆಪ್ತ ವೈದ್ಯ ಡಾ. ಪರಮೇಶ್

ತುಮಕೂರು: ನಡೆದಾಡುವ ದೇವರು ಸಿದ್ದಗಂಗಾ ಶ್ರೀಗಳ ಆರೋಗ್ಯ ಚಿಂತಾಜನಕವಾಗಿದೆ ಎಂದು ಶ್ರೀಗಳ ಆಪ್ತ ವೈದ್ಯ ಡಾ. ಪರಮೇಶ್ ಮಾಹಿತಿ ನೀಡಿದ್ದಾರೆ.

ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸದ್ಯ ಶ್ರೀಗಳ ಅರೋಗ್ಯ ಸ್ಥಿತಿ ತೀರಾ ಗಂಭೀರವಾಗಿದ್ದು, ಚಿಂತಾಜನಕವಾಗಿದೆ. ನಿನ್ನೆ ರಾತ್ರಿ ಶ್ರೀಗಳ ರಕ್ತದೊತ್ತಡ ಮತ್ತು ಶ್ವಾಸಕೋಶದ ಏರುಪಾರಾಗಿತ್ತು. ಅಲ್ಲದೆ ಶ್ರೀಗಳ ದೇಹದಲ್ಲಿ ಪ್ರೊಟೀನ್ ಅಂಶ ತೀರಾ ಕಡಿಮೆಯಾಗಿದ್ದು ನಮ್ಮ ಪ್ರಯತ್ನ ಮುಂದುವರೆಸಿದ್ದೇವೆ ಎಂದು ಹೇಳಿದರು.

ಇನ್ನು ಶ್ರೀಗಳ ಆರೋಗ್ಯ ಏರುಪೇರಾಗಿರುವ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಭದ್ರತೆ ಒದಗಿಸುವಂತೆ ಐಜಿಪಿ ನೀಲಮಣಿರಾಜು ಅವರಿಗೆ ಸಿಎಂ ಸೂಚಿಸಿದ್ದಾರೆ. ಇದೀಗ ಐಜಿಪಿ ನೀಲಮಣಿರಾಜು ಆದೇಶದಂತೆ ಭದ್ರತೆ ಹೆಚ್ಚಿಸಲಾಗಿದೆ. ಮೊದಲ ಹಂತದಲ್ಲಿ 2 ಸಾವಿರ ಪೊಲೀಸರನ್ನು ನಿಜೋಜಿಸಲಾಗಿದೆ. ಇನ್ನು ಎರಡನೇ ಹಂತಕ್ಕೆ 1500 ಗೃಹ ರಕ್ಷಕದಳ ಸಿಬ್ಬಂದಿ ನಿಯೋಜನೆ ಮಾಡಲು ಸೂಚನೆ ನೀಡಲಾಗಿದೆ. ಇತರೆ ಜಿಲ್ಲೆಗಳಿಂದ ಪೊಲೀಸರನ್ನು ಕರೆಸಿಕೊಳ್ಳಲು ಸೂಚಿಸಲಾಗಿದೆ.

ಐಜಿಪಿ ದಯಾನಂದ್ ನೇತೃತ್ವದಲ್ಲಿ ಬೆಂಗಳೂರು ಗ್ರಾಮಾಂತರ, ಚಿಕ್ಕಮಂಗಳೂರು, ಶಿವಮೊಗ್ಗ, ದಾವಣಗೆರೆ, ತುಮಕೂರು, ಚಿತ್ರದುರ್ಗ, ರಾಮನಗರ, ಹಾಸನ ಸೇರಿದಂತೆ ಒಟ್ಟು 10 ಜಿಲ್ಲೆಗಳ ಪೊಲೀಸ್ ವರಿಷ್ಠಾಧಿಕಾರಿಗಳು, ಡಿವೈಎಸ್ಪಿ, ಇನ್‍ಸ್ಪೆಕ್ಟರ್, ಸಬ್‍ಇನ್‍ಸ್ಪೆಕ್ಟರ್ ಸೇರಿದಂತೆ ವಿವಿಧ ಶ್ರೇಣಿಯ ಅಧಿಕಾರಿಗಳನ್ನು ಭದ್ರತೆಗೆ ನಿಯೋಜಿಸಲಾಗಿದೆ.

ಸಿದ್ಧಗಂಗಾ ಮಠದಲ್ಲಿ ಐಜಿಪಿ ದಯಾನಂದ್ ನೇತೃತ್ವದಲ್ಲಿ ಭದ್ರತೆ ಒದಗಿಸಲಾಗಿದ್ದು, ಚಿಕ್ಕಬಳ್ಳಾಪುರ ಎಸ್ಪಿ ಕಾರ್ತಿಕ್ ರೆಡ್ಡಿ ಮಠಕ್ಕೆ ಆಗಮಿಸಿದ್ದಾರೆ. ಪರಿಸ್ಥಿತಿ ನಿಭಾಯಿಸಲು ಮಠದ ಆವರಣದಲ್ಲಿ ಬ್ಯಾರಿಕೇಡ್ ಹಾಕಿರುವ ಪೊಲೀಸರು, ಮಠದ ಆವರಣದಲ್ಲೇ ಪೊಲೀಸ್ ಕಂಟ್ರೋಲ್ ವ್ಯವಸ್ಥೆ ಕಲ್ಪಿಸಲಾಗಿದ್ದು, ಸಂಸ್ಕೃತ ಕಾಲೇಜಿನ 2ನೇ ಮಹಡಿಯಲ್ಲಿ ಕಂಟ್ರೋಲ್ ರೂಂ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಐಜಿಪಿ ದಯಾನಂದ್, ಎಸ್ಪಿ ಕೋನವಂಶಿ ಕೃಷ್ಣ, ಎಎಸ್ಪಿ ಡಾ. ಶೋಭಾರಾಣಿ, ಡಿವೈಎಸ್ಪಿ ತಿಪ್ಪೇಸ್ವಾಮಿ, ಪೊಲೀಸ್ ಅಧಿಕಾರಿಗಳು ಕಂಟ್ರೋಲ್​ ರೂಂಗೆ ತೆರಳಿದ್ದಾರೆ. 

ದಯಾನಂದ್ ಜೊತೆ ಕಾರ್ತಿಕ್ ರೆಡ್ಡಿ ನಿರಂತರ ಚರ್ಚೆ ನಡೆಸುತ್ತಿದ್ದು, ಈಗಾಗಲೇ ತುಮಕೂರಿಗೆ 2,000 ಪೊಲೀಸರು ಆಗಮಿಸಿದ್ದಾರೆ. ಸದ್ಯ 10 ಜಿಲ್ಲೆಗಳ ಎಸ್ಪಿಗಳು ತುಮಕೂರಿಗೆ ಆಗಮಿಸಿದ್ದಾರೆ. ಮೂರೂವರೆ ಸಾವಿರ ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ.

ಸದ್ಯಕ್ಕೆ ಸಿದ್ದಗಂಗಾ ಮಠದಲ್ಲಿ ನೀರವ ಮೌನ ಆವರಿಸಿದ್ದು, ಶ್ರೀಗಳ ಆರೋಗ್ಯಕ್ಕಾಗಿ ವಿದ್ಯಾರ್ಥಿಗಳು ಪ್ರಾರ್ಥಿಸುತ್ತಿದ್ದಾರೆ. ವಿವಿಧ ಭಾಗಗಳಿಂದ ಅಪಾರ ಸಂಖ್ಯೆಯ ಗಣ್ಯರು ಮತ್ತು ಭಕ್ತರು ಮಠಕ್ಕೆ ಆಗಮಿಸುತ್ತಿದ್ದಾರೆ.
 

Read More