Home> Karnataka
Advertisement

"ಮೀಸಲಾತಿ ಭಿಕ್ಷೆಯಲ್ಲ. ಅದು ನಮ್ಮ ಹಕ್ಕು"- ಕಾಂಗ್ರೆಸ್

ಮೀಸಲಾತಿ ಭಿಕ್ಷೆಯಲ್ಲ. ಅದು ನಮ್ಮ ಹಕ್ಕು ಹಾಗೂ ಜನ ಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ನೀಡಲು ಡಾ ಬಿ ಆರ್ ಅಂಬೇಡ್ಕರ್ ರವರು ಸಂವಿಧಾನದಲ್ಲಿ ಪ್ರತಿಪಾದಿಸುತ್ತಾರೆ. ಆ ಕಾರಣದಿಂದ SC - ST ಜನ ಸಂಖ್ಯೆಗೆ ಅನುಗುಣವಾಗಿ ಮೀಸಲಾತಿಯನ್ನು ಹೆಚ್ಚಿಸಬೇಕೆಂದು SC - ST ಸಮುದಾಯಗಳ ಹೋರಾಟದ ಕಾರಣದಿಂದ ನ್ಯಾಯಮೂರ್ತಿ ನಾಗಮೋಹನ್ ದಾಸ್ ಸಮಿತಿಯನ್ನು ನಮ್ಮ ಸರ್ಕಾರ ರಚನೆ ಮಾಡಿತ್ತು.

ಚಿತ್ರದುರ್ಗ: ನಗರದಲ್ಲಿ ನಡೆದ ದಲಿತ ಐಕ್ಯತಾ ಸಮಾವೇಶದಲ್ಲಿ ಕಾಂಗ್ರೆಸ್ ಪಕ್ಷವು ಹತ್ತು ಘೋಷಣೆಗಳನ್ನು ಇಟ್ಟಿದೆ.

8 ಜನವರಿ 2023 ರಂದು ಚಿತ್ರದುರ್ಗ ನಗರದಲ್ಲಿ ನಡೆದ ಕಾಂಗ್ರೆಸ್ ಪಕ್ಷದ SC - ST ಸಮಾವೇಶದ ಘೋಷಣೆಗಳು: 

1. ಮೀಸಲಾತಿ ಭಿಕ್ಷೆಯಲ್ಲ. ಅದು ನಮ್ಮ ಹಕ್ಕು ಹಾಗೂ ಜನ ಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ನೀಡಲು ಡಾ ಬಿ ಆರ್ ಅಂಬೇಡ್ಕರ್ ರವರು ಸಂವಿಧಾನದಲ್ಲಿ ಪ್ರತಿಪಾದಿಸುತ್ತಾರೆ. ಆ ಕಾರಣದಿಂದ SC - ST ಜನ ಸಂಖ್ಯೆಗೆ ಅನುಗುಣವಾಗಿ ಮೀಸಲಾತಿಯನ್ನು ಹೆಚ್ಚಿಸಬೇಕೆಂದು SC - ST ಸಮುದಾಯಗಳ ಹೋರಾಟದ ಕಾರಣದಿಂದ ನ್ಯಾಯಮೂರ್ತಿ ನಾಗಮೋಹನ್ ದಾಸ್ ಸಮಿತಿಯನ್ನು ನಮ್ಮ ಸರ್ಕಾರ ರಚನೆ ಮಾಡಿತ್ತು. ಸದರಿ ಸಮಿತಿಯು ಸೂಕ್ತ ಮಾಹಿತಿ ಸಂಗ್ರಹಣೆ ಮತ್ತು ನಡಾವಳಿಗಳನ್ನು ನಡೆಸಿ ದಿ: 3 ಜುಲೈ 2020ರಂದು ರಾಜ್ಯ ಸರ್ಕಾರಕ್ಕೆ ವರದಿಯನ್ನು ನೀಡಿತ್ತು. ಆ ವರದಿಯಲ್ಲಿ SC ಮೀಸಲಾತಿಯನ್ನು 15% ರಿಂದ 17% ಹಾಗೂ ST ಮೀಸಲಾತಿಯನ್ನು 3% ರಿಂದ 7% ಗೆ ಹೆಚ್ಚಿಸಲು ಶಿಫಾರಸ್ಸು ಮಾಡಿ ಮೀಸಲಾತಿ ಹೆಚ್ಚಳ ಮಾಡಲು ಕಾಯಿದೆ ರೂಪಿಸಬೇಕೆಂದು ಹಾಗೂ ಆ ಕಾಯಿದೆಯನ್ನು ಸಂವಿಧಾನದ 9ನೇ ಷೆಡ್ಯೂಲ್ ಗೆ ಸೇರಿಸಬೇಕೆಂದು ಸಹ ಶಿಫಾರಸ್ಸು ಮಾಡಲಾಯಿತು. ಆದರೆ ಅಧಿಕಾರದಲ್ಲಿರುವ ಭಾರತೀಯ ಜನತಾ ಪಾರ್ಟಿಯು ಉದ್ದೇಶಪೂರ್ವಕವಾಗಿ ಆ ವರದಿಯನ್ನು 3 ವರ್ಷಗಳ ಕಾಲ ಯಾವುದೇ ಕ್ರಮ ತೆಗೆದುಕೊಂಡಿರುವುದಿಲ್ಲ. ಈ ವಿಚಾರವಾಗಿ ನಮ್ಮ ಪಕ್ಷ ಅನೇಕ ಸಾರಿ ಕ್ರಮ ಜರುಗಿಸಲು ಒತ್ತಾಯ ಮಾಡಿದ್ದರೂ ಶ್ರೀ ಬಸವರಾಜ ಬೊಮ್ಮಾಯಿ ನೇತೃತ್ವದ ರಾಜ್ಯ ಸರ್ಕಾರವಾಗಲಿ, ಶ್ರೀ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವಾಗಲಿ ಆ ವರದಿಯನ್ನು ಪರಿಗಣಿಸಿ ಮೀಸಲಾತಿ ಹೆಚ್ಚಿಸಲು ಯಾವುದೇ ಕ್ರಮ ಜರುಗಿಸಲು ಮುಂದಾಗಿರಲಿಲ್ಲ. ಆದರೆ ಚುನಾವಣೆಗಳು ಸಮೀಪಿಸುತ್ತಿರುವ ಕಾರಣದಿಂದ ಮೀಸಲಾತಿಯನ್ನು ಹೆಚ್ಚಿಸಲು ಇತ್ತೀಚಿಗೆ ಕಾನೂನನ್ನು ರೂಪಿಸಿರುತ್ತಾರೆಯೇ ಹೊರತು ಆ ಕಾಯಿದೆಯನ್ನು ಸಂವಿಧಾನದ ೯ನೇ ಷೆಡ್ಯೂಲ್ ಗೆ ಸೇರಿಸಲು ಕ್ರಮ ಜರುಗಿಸಿರುವುದಿಲ್ಲ. ಇದು SC - ST ವರ್ಗದ ಜನರನ್ನು ದಾರಿ ತಪ್ಪಿಸುವ ಕೆಲಸವೇ ಹೊರತು ನ್ಯಾಯ ನೀಡುವ ಉದ್ದೇಶವಾಗಿರುವುದಿಲ್ಲ. ಆ ಕಾರಣದಿಂದ ದಿ: 30 ಜನವರಿ 2023ರೊಳಗೆ ನ್ಯಾಯಮೂರ್ತಿ ನಾಗಮೋಹನ್ ದಾಸ್ ವರದಿಯನ್ನು ಸಂಪೂರ್ಣ ಒಪ್ಪಬೇಕು ಹಾಗೂ ಅವರ ಶಿಫಾರಸ್ಸಿನಂತೆ ಮೀಸಲಾತಿ ಹೆಚ್ಚಳದ ಕಾಯಿದೆಯನ್ನು ಸಂವಿಧಾನದ 9ನೇ ಷೆಡ್ಯೂಲ್ ಗೆ ಸೇರಿಸಬೇಕು ಎಂದು ಒತ್ತಾಯಿಸುತ್ತೇವೆ. 

2. ನ್ಯಾಯಮೂರ್ತಿ ಸದಾಶಿವ ಆಯೋಗ ನೀಡಿರುವ ವರದಿಯನ್ನು ನಮ್ಮ ಸರ್ಕಾರ ಬಂದ ಮೊದಲನೇ ಅಧಿವೇಶನದಲ್ಲಿ ವಿಧಾನ ಮಂಡಲದ ಮುಂದೆ ಮಂಡಿಸಲಾಗುವುದು. ಎರಡೂ ಸದನಗಳ ಅಭಿಪ್ರಾಯಗಳನ್ನು ಪಡೆದು ಪರಿಶಿಷ್ಟ ಜಾತಿಗಳ ಎಲ್ಲಾ ಜಾತಿಯ ಜನರಿಗೂ ನ್ಯಾಯ ಸಿಗುವಂತೆ ಕ್ರಮ ಜರುಗಿಸಲು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಲಾಗುವುದು.

3. SCSP-TSP ಕಾಯಿದೆಯ ಕಲಂ 7-D ಗೆ ತಿದ್ದುಪಡಿ ತರುವ ಮೂಲಕ ಈ ಯೋಜನೆಗೆ ಪ್ರತಿ ವರ್ಷ ಆಯವ್ಯಯದಲ್ಲಿ ನೀಡುವ 100% ಪೂರ್ಣ ಮೊತ್ತವನ್ನು SC - ST ಜನರ ಅಭಿವೃದ್ಧಿಗೆ ವೆಚ್ಚ ಮಾಡಲಾಗುವುದು ಹಾಗೂ ಕಾಲ್ಪನಿಕ ವೆಚ್ಚ (Deemed Expenditure) 5%ರೊಳಗೆ ತರಲು ಕ್ರಮ ಜರುಗಿಸಲಾಗುವುದು. 

4. PTCL ಕಾಯಿದೆಗೆ ಸೂಕ್ತ ತಿದ್ದುಪಡಿ ತಂದು SC - ST ಜನರಿಗೆ "ದರಕಾಸ್ತ್" ಮೂಲಕ ಸರ್ಕಾರ ನೀಡಿರುವ ಜಮೀನುಗಳನ್ನು ಶಾಶ್ವತವಾಗಿ ಅವರಿಗೆ ಉಳಿಯುವಂತೆ ಕ್ರಮ ಕೈಗೊಳ್ಳುತ್ತೇವೆ. 

5. ರಾಜ್ಯದ ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆಯ ವರದಿ ಪ್ರಕಾರ ರಾಜ್ಯದಲ್ಲಿ ಅನುಕ್ರಮವಾಗಿ 2.54 ಲಕ್ಷ ಹಾಗೂ 1.32 ಲಕ್ಷ ವಸತಿ ರಹಿತ SC - ST ಕುಟುಂಬಗಳು ಇರುತ್ತವೆ. ಅವರಿಗೆ ಸಾಮಾಜಿಕ ನ್ಯಾಯ ನೀಡಿ ಮುಖ್ಯವಾಹಿನಿಗೆ ತರುವ ದೃಷ್ಟಿಯಿಂದ ಬರುವ 5 ವರ್ಷಗಳಲ್ಲಿ ವಸತಿ ರಹಿತ ಕುಟುಂಬಗಳಿಗೆ ಮನೆಗಳನ್ನು ಕಟ್ಟಿಸಿಕೊಡಲು ಬದ್ಧರಿದ್ದೇವೆ. 

6. ರಾಜ್ಯದ ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆಯ ವರದಿಯ ಪ್ರಕಾರ ಕರ್ನಾಟಕ ರಾಜ್ಯದಲ್ಲಿ ಲಕ್ಷಾಂತರ SC - ST ಕುಟುಂಬಗಳು ಭೂ ರಹಿತರಾಗಿದ್ದಾರೆ. ಅವರುಗಳನ್ನು ಭೂ ಮಾಲೀಕರನ್ನಾಗಿ ಮಾಡುವ ದೃಷ್ಟಿಯಿಂದ ಅಂತಹ ಪ್ರತಿ ಕುಟುಂಬಕ್ಕೆ 2 ಎಕರೆ ಒಣ ಭೂಮಿಯನ್ನು "ಭೂ ಒಡೆತನ ಯೋಜನೆ"ಯಡಿಯಲ್ಲಿ ನೀಡುವುದು ಹಾಗೂ ಆ ಜಮೀನುಗಳಲ್ಲಿ "ಗಂಗಾ ಕಲ್ಯಾಣ ಯೋಜನೆ"ಯಲ್ಲಿ ಕೊಳವೆ ಬಾವಿಗಳನ್ನು ಬರುವ 5 ವರ್ಷಗಳಲ್ಲಿ ಕೊರೆಸಿಕೊಡಲಾಗುವುದು. 

7. ಪ್ರತಿ ವರ್ಷ ರಾಜ್ಯದ 10,000 SC - ST ವಿದ್ಯಾವಂತ ನಿರುದ್ಯೋಗಿ ಯುವಕರಿಗೆ ಸ್ವಯಂ ಉದ್ಯೋಗ ರೂಪಿಸಿಕೊಳ್ಳಲು "ಐರಾವತ ಯೋಜನೆ"ಯಡಿಯಲ್ಲಿ ಟ್ಯಾಕ್ಸಿ, ಗೂಡ್ಸ್ ಟ್ಯಾಕ್ಸಿ, ತ್ರಿಚಕ್ರ ಮತ್ತು ನಾಲ್ಕು ಚಕ್ರ ಹಾಗೂ ಇತರೆ ವಾಹನಗಳನ್ನು ಖರೀದಿಸಲು ಸಹಾಯ ಧನ ಹಾಗೂ ಸಾಲದ ಸೌಲಭ್ಯಗಳನ್ನು ಒದಗಿಸಲಾಗುವುದು. 

8. ಕರ್ನಾಟಕ ರಾಜ್ಯ ಸರಕಾರ ಮಂಜೂರು ಮಾಡಿರುವ ಹುದ್ದೆಗಳ ಪೈಕಿ 2.54 ಲಕ್ಷ ಹುದ್ದೆಗಳು ಎಲ್ಲಾ ಇಲಾಖೆಗಳು ಸೇರಿದಂತೆ ಖಾಲಿ ಇರುತ್ತವೆ. ನಿರುದ್ಯೋಗಿ ಯುವಕ-ಯುವತಿಯರಿಗೆ ಉದ್ಯೋಗ ನೀಡಲು ಬರುವ 5 ವರ್ಷಗಳಲ್ಲಿ ಬ್ಯಾಕ್ ಲಾಗ್ ಹುದ್ದೆಗಳು ಸೇರಿದಂತೆ ಎಲ್ಲಾ ಖಾಲಿ ಹುದ್ದೆಗಳನ್ನು ತುಂಬಲು ಕ್ರಮ ಜರುಗಿಸಲಾಗುವುದು.
9. ರಾಜ್ಯದ ಅನೇಕ ಜನ SC - ST ವಿದ್ಯಾರ್ಥಿಗಳು ಕೋವಿಡ್ ಮುಂತಾದ ಸಾಂಕ್ರಾಮಿಕ ರೋಗಗಳು ಹಾಗೂ ಇನ್ನಿತರ ಕಾರಣಗಳಿಂದ ಶಾಲೆಗಳನ್ನು ಬಿಡುತ್ತಿರುವುದು ಸಮೀಕ್ಷೆಗಳಿಂದ ತಿಳಿದು ಬಂದಿರುತ್ತದೆ. ಶಾಲೆಗಳನ್ನು ಬಿಟ್ಟ ಮಕ್ಕಳನ್ನು ಮರಳಿ ಶಾಲೆಗೆ ತರುವ ದೃಷ್ಟಿಯಿಂದ ಹಾಗೂ ಮಕ್ಕಳು ನಿರಂತರವಾಗಿ ಶಿಕ್ಷಣ ಪಡೆಯಲು "ಶ್ರೀಮತಿ ಸಾವಿತ್ರಿ ಬಾಯಿ ಪುಲೆ ವಿದ್ಯಾ ಯೋಜನೆ"ಯನ್ನು ಹೊಸತಾಗಿ ರೂಪಿಸಲು ನಿಶ್ಚಯಿಸಿರುತ್ತೇವೆ. ಈ ಯೋಜನೆ ಮೂಲಕ SC - ST ವಿದ್ಯಾರ್ಥಿಗಳು ಶಾಲೆಗಳಿಗೆ ನಿರಂತರವಾಗಿ ಬರುವಂತೆ ಮಾಡಲು 1ನೇ ತರಗತಿಯಿಂದ 5ನೇ ತರಗತಿಯ ವಿದ್ಯಾರ್ಥಿಗಳಿಗೆ ಪ್ರತಿ ತಿಂಗಳು ರೂ 150/- ಹಾಗೂ 6ನೇ ತರಗತಿಯಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಪ್ರತಿ ತಿಂಗಳು ರೂ 300/- ಪ್ರೋತ್ಸಾಹಧನ ನೀಡುವ ಯೋಜನೆಯನ್ನು ರೂಪಿಸುತ್ತೇವೆ. ಆ ಪ್ರೋತ್ಸಾಹ ಧನವನ್ನು ಆಯಾ ಮಕ್ಕಳ ತಾಯಂದಿರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುವುದು. 

10. ರಾಷ್ಟ್ರದಲ್ಲಿ ಮೆಟ್ರಿಕ್ ಪೂರ್ವ ತರಗತಿಯ SC - ST ವಿದ್ಯಾರ್ಥಿಗಳಿಗೆ ನೀಡುತ್ತಿದ್ದ ವಿದ್ಯಾರ್ಥಿ ವೇತನವನ್ನು ಕೇಂದ್ರ ಸರಕಾರ ನಿಲ್ಲಿಸಿರುತ್ತದೆ. ಆ ಕ್ರಮ ಮಕ್ಕಳ ಭವಿಷ್ಯಕ್ಕೆ ಮಾರಕವಾಗಿರುತ್ತದೆ. ಆ ಕಾರಣದಿಂದ ಮಕ್ಕಳ ಭವಿಷ್ಯವನ್ನು ರೂಪಿಸಲು "ಮೈಸೂರಿನ ಮಹಾರಾಜಾ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ವಿದ್ಯಾರ್ಥಿ ವೇತನ ಯೋಜನೆ" ಎಂಬ ಹೊಸ ಯೋಜನೆಯನ್ನು ರೂಪಿಸಿ ಆ ಯೋಜನೆಯ ಮೂಲಕ ಎಲ್ಲಾ SC - ST ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲು ಪುನರ್ ಪ್ರಾರಂಭಿಸುತ್ತೇವೆ ಹಾಗೂ ರಾಜ್ಯ ವ್ಯಾಪಿ ಎಲ್ಲಾ SC - ST ವಿದ್ಯಾರ್ಥಿಗಳಿಗೆ ವಸತಿ ನಿಲಯಗಳ ಸೌಲಭ್ಯಗಳನ್ನು ಒದಗಿಸಲಾಗುವುದು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Read More