Home> Karnataka
Advertisement

ಕರ್ನಾಟಕವನ್ನು ನಂಬರ್ 1 ರಾಜ್ಯವನ್ನಾಗಿಸೋಣ: ದೆಹಲಿಯಲ್ಲಿ ಸಿಎಂ ಬಿ.ಎಸ್.ಯಡಿಯೂರಪ್ಪ

ಸಂಸತ್ತಿನಲ್ಲಿ ನಮ್ಮ ರಾಜ್ಯದ ನೆಲ, ಜಲ, ಭಾಷೆಯ ವಿಷಯದಲ್ಲಿ ಒಗ್ಗಟ್ಟಾಗಿ ಕಾರ್ಯನಿರ್ವಹಿಸುವುದು ಇಂದು ಅತಿ ಅಗತ್ಯವಾಗಿದೆ- ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ

ಕರ್ನಾಟಕವನ್ನು ನಂಬರ್ 1 ರಾಜ್ಯವನ್ನಾಗಿಸೋಣ: ದೆಹಲಿಯಲ್ಲಿ ಸಿಎಂ ಬಿ.ಎಸ್.ಯಡಿಯೂರಪ್ಪ

ನವದೆಹಲಿ: ಕರ್ನಾಟಕವನ್ನು ದೇಶದಲ್ಲೇ ನಂಬರ್  1 ರಾಜ್ಯವನ್ನಾಗಿ ಮಾಡಲು ಕೇಂದ್ರದಿಂದ ಹೆಚ್ಚು ಹೆಚ್ಚಾಗಿ ನೆರವು ಪಡೆಯಲು ರಾಜ್ಯವನ್ನು ಪ್ರತಿನಿಧಿಸುವ ಕೇಂದ್ರದ ಸಚಿವರು, ಸಂಸತ್ ಸದಸ್ಯರು ಶ್ರಮಿಸಬೇಕೆಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕರೆ ನೀಡಿದರು.

ದೆಹಲಿಯ ಕರ್ನಾಟಕ ಭವನದಲ್ಲಿ ಮಂಗಳವಾರ ಸಂಜೆ ಕರೆದಿದ್ದ ರಾಜ್ಯವನ್ನು ಪ್ರತಿನಿಧಿಸುವ ಕೇಂದ್ರದ ಸಚಿವರು ಮತ್ತು ಸಂಸತ್ ಸದಸ್ಯರ ಸಭೆ ಉದ್ದೇಶಿಸಿ ಮಾತನಾಡುತ್ತಿದ್ದ ಯಡಿಯೂರಪ್ಪ, ಕೇಂದ್ರದಿಂದ ನಮ್ಮ ರಾಜ್ಯದ ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚಿನ ಬೆಂಬಲ ಪಡೆಯುವಲ್ಲಿ ನಿಮ್ಮೆಲ್ಲರ ಸಹಕಾರವನ್ನು ನಿರೀಕ್ಷಿಸುತ್ತಿದ್ದೇನೆ. ಒಕ್ಕೂಟ ವ್ಯವಸ್ಥೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವಣ ಬಾಂಧವ್ಯ ಮಹತ್ವಪೂರ್ಣವಾದುದು. ಸಂಸತ್ತಿನಲ್ಲಿ ನಮ್ಮ ರಾಜ್ಯದ ನೆಲ, ಜಲ, ಭಾಷೆಯ ವಿಷಯದಲ್ಲಿ ಒಗ್ಗಟ್ಟಾಗಿ ಕಾರ್ಯನಿರ್ವಹಿಸುವುದು ಇಂದು ಅತಿ ಅಗತ್ಯವಾಗಿದೆ ಎಂದು ಹೇಳಿದರು.

ಮೂರು ದಿನಗಳ ನವದೆಹಲಿ ಭೇಟಿಯ ಅವಧಿಯಲ್ಲಿ ರಾಜ್ಯದ ವಿವಿಧ ಅಭಿವೃದ್ಧಿ ವಿಚಾರಗಳು ಹಾಗೂ ಕೇಂದ್ರ ಸರ್ಕಾರದಲ್ಲಿ ಬಾಕಿ ಇರುವ ಹಲವು ಪ್ರಸ್ತಾವನೆಗಳಿಗೆ ಸಂಬಂಧಿಸಿದಂತೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸೇರಿದಂತೆ ಕೇಂದ್ರದ ಹಲವು ಸಚಿವರನ್ನು ಭೇಟಿಯಾಗಿ ಚರ್ಚಿಸಿದ್ದೇನೆ. ಬಹಳ ದಿನಗಳಿಂದ ಬಾಕಿ ಇರುವ ಕನಿಷ್ಠ ಬೆಂಬಲ ಬೆಲೆಯ ಕೇಂದ್ರದ ಪಾಲಿನ ಅನುದಾನ, ಕಲ್ಲಿದ್ದಲು ಬ್ಲಾಕ್‍ಗಳ ಹಂಚಿಕೆ, ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯ ಬಾಕಿ ಅನುದಾನ, ಹೀಗೆ ಹಲವಾರು ವಿಷಯಗಳ ಕುರಿತು ಕೇಂದ್ರದ ಸಚಿವರುಗಳ ಗಮನ ಸೆಳೆಯಲಾಗಿದೆ ಎಂದು ತಿಳಿಸಿದರು.

ರಾಜ್ಯದಲ್ಲಿ ಹಲವೆಡೆ ಬರದ ಛಾಯೆ ಇದ್ದು, ಉತ್ತರ ಕರ್ನಾಟಕದಲ್ಲಿ ಕೃಷ್ಣಾನದಿಯಲ್ಲಿ ಪ್ರವಾಹ ಉಂಟಾಗಿ 5 ಜಿಲ್ಲೆಗಳಲ್ಲಿ ಜನ ತೊಂದರೆಗೀಡಾಗಿದ್ದಾರೆ. ರಾಜ್ಯವು ವಿಪತ್ತು ನಿರ್ವಹಣೆಗೆ ಸಂಪೂರ್ಣವಾಗಿ ಸನ್ನದ್ಧವಾಗಿದೆ. ಸಂಕಷ್ಟಕ್ಕೆ ಒಳಗಾದ ಜನರಿಗೆ ಕೇಂದ್ರ ಸರ್ಕಾರದಿಂದ ಪರಿಹಾರ ಪಡೆಯುವಲ್ಲಿ ರಾಜ್ಯವನ್ನು ಪ್ರತಿನಿಧಿಸುವ ಕೇಂದ್ರದ ಸಚಿವರು, ಸಂಸತ್ ಸದಸ್ಯರ ಸಹಕಾರವೂ ಅಗತ್ಯ ಎಂದು ವಿನಂತಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಂಸದ ಸಿದ್ದೇಶ್ವರ, ಬೆಂಗಳೂರು- ತುಮಕೂರು- ದಾವಣಗೆರೆ ರೈಲ್ವೆ ಯೋಜನೆಗೆ ಭೂ ಸ್ವಾಧೀನಕ್ಕೆ ಕ್ರಮವಹಿಸಿ ಎಂದು ಮನವಿ ಸಲ್ಲಿಸಿದರು. ರಾಜಸಭಾ ಸಂಸದರಾದ ರಾಜೀವ್ ಗೌಡ ಮಾತನಾಡಿ, ಬೆಂಗಳೂರಿನ ಟ್ರಾಪಿಕ್ ಸಮಸ್ಯೆ ಪರಿಹಾರಕ್ಕೆ ಸಬರ್ಬ್ ನ್ ರೈಲ್ವೆ ಜಾರಿಗೆ ಮೊದಲ ಆದ್ಯತೆ ನೀಡಿ ಎಂದರು.

ಸಭೆಯಲ್ಲಿ ಹಾಜರಿದ್ದ ಕೇಂದ್ರ ರಾಜ್ಯ ಸಚಿವ ಸುರೇಶ್ ಅಂಗಡಿ ಇದಕ್ಕೆ ಪ್ರತಿಕ್ರಿಯಿಸುತ್ತಾ, ಈಗಾಗಲೇ ಅಧಿಕಾರಿಗಳ ಸಭೆ ನಡೆಸಿದ್ದೇನೆ. ಈ ಯೋಜನೆಗೆ ಹಣದ ಸಮಸ್ಯೆ ಇಲ್ಲ, ಶೀಘ್ರದಲ್ಲೇ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಮತ್ತೋರ್ವ ಸಂಸದ ಪಿ.ಸಿ. ಮೋಹನ್ ಮಾತನಾಡಿ, ನೀತಿ ಆಯೋಗ ಕೆಲವೊಂದು ಸಬರ್ಬ್ ನ್ ರೈಲ್ವೆ ಸಂಬಂಧಿಸಿದಂತೆ ಕೆಲವೊಂದು ಅಂಶಗಳ ಬಗ್ಗೆ ಪ್ರಶ್ನಿಸಿದೆ, ಇದರ ಪರಿಹಾರಕ್ಕೆ ಒತ್ತು ನೀಡಿ ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ರೈಲ್ವೆ ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ, ಸಚಿವರು ಸಂಸತ್ ಅಧಿವೇಶನ ಮುಗಿದ ಬಳಿಕ ಬೆಂಗಳೂರಿಗೆ ಬಂದು ಸಭೆ ನಡೆಸಿ, ಸಮಸ್ಯೆ ಪರಿಹಾರಕ್ಕೆ ಒಪ್ಪಿಗೆ ನೀಡಿದ್ದಾರೆ ಎಂದು ಸಭೆಗೆ ಮಾಹಿತಿ ನೀಡಿದರು. 

ರಾಜ್ಯದಲ್ಲಿ ಸಾಕಷ್ಟು ರೈಲ್ವೆ ಯೋಜನೆಗಳು ಚಾಲನೆ ಯಾಗಬೇಕಾಗಿದೆ, ಜೊತೆಗೆ ಯೋಜನೆಗಳಿಗೆ ವೇಗ ಅವಶ್ಯಕತೆ ಇದೆ. ಈ ಬಗ್ಗೆ ರಾಜ್ಯದ ರೈಲ್ವೆ ಸಚಿವ ಸುರೇಶ್ ಅಂಗಡಿ ಅವರು ರಾಜ್ಯದ ಸಂಸದರ ವಿಶೇಷ ಸಭೆ ನಡೆಸಲಿ, ರಾಜ್ಯ ಸರ್ಕಾರ ಸಭೆಯಲ್ಲಿ ಪಾಲ್ಗೊಂಡು ಸ್ಥಳದಲ್ಲೆ ರೈಲ್ವೆ ಅಧಿಕಾರಿಗಳ ಸಭೆಯಲ್ಲಿ ಬಗೆಹರಿಸಿಕೊಳ್ಳೋಣ ಎಂದು ಸಲಹೆ ನೀಡಿದರು.

ಸಂಸದರಾದ ಸಿದ್ದೇಶ್ವರ ಮಾತನಾಡುತ್ತಾ, ರಾಜ್ಯದಲ್ಲಿ ರಾಸಾಯನಿಕ ಗೊಬ್ಬರ ಕಾರ್ಖಾನೆಯನ್ನು ದಾವಣಗೆರೆಯಲ್ಲಿ ಸ್ಥಾಪಿಸಲು ಕೇಂದ್ರ ಸರ್ಕಾರ ಒಪ್ಪಿದೆ, ರಾಜ್ಯ ಸರ್ಕಾರ ಕಾರ್ಖಾನೆ ಪ್ರಾರಂಭಕ್ಕೆ ಅಗತ್ಯವಾದ ಭೂ ಸ್ವಾಧೀನಕ್ಕೆ ಚಾಲನೆ ನೀಡಲು ಮನವಿ ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಡಿವಿಎಸ್, ಕೇಂದ್ರ ಕಾರ್ಖಾನೆ ಸ್ಥಾಪನೆಗೆ ಒಪ್ಪಿದೆ. ಭೂಸ್ವಾಧಿನ ಜೊತೆಗೆ ಅಗತ್ಯ ನೆರವು ನೀಡಿದರೆ ದಾವಣಗೆರೆಯಲ್ಲಿ ಶೀಘ್ರದಲ್ಲೇ ಕಾರ್ಖಾನೆ ಪ್ರಾರಂಭಕ್ಕೆ ಚಾಲನೆ ನೀಡುತ್ತೇವೆ ಎಂದರು.

ಮಂಡ್ಯ ಸಂಸದರಾದ ಸುಮಲತಾ, ಮಂಡ್ಯ ಸಕ್ಕರೆ ಕಾರ್ಖಾನೆ ಪುನಶ್ಚೇತನಕ್ಕೆ ಕ್ರಮವಹಿಸಿ & ಕಾರ್ಮಿಕರ ವೇತನವನ್ನು ಸಮಯಕ್ಕೆ ಸರಿಯಾಗಿ ಬಿಡುಗಡೆಗೊಳಿಸಿ ಎಂದು ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಸಿಎಂ ಬಿ.ಎಸ್. ಯಡಿಯೂರಪ್ಪ ನಾನು ಈಗಾಗಲೇ ಕಾರ್ಯಪ್ರವೃತನಾಗಿದ್ದೇನೆ, ಸದ್ಯದಲ್ಲೇ ಈ ಬಗ್ಗೆ ಸಭೆ ಕರೆದು ಸಮಸ್ಯೆ ಬಗೆಹರಿಸುತ್ತೇನೆ ಎಂದು ಭರವಸೆ ನೀಡಿದರು.

ಸಭೆಯಲ್ಲಿ ರಾಜ್ಯದಿಂದ ಪ್ರತಿನಿಧಿಸುವ ಕೇಂದ್ರ ಸಚಿವರಾದ ಡಿ.ವಿ. ಸದಾನಂದಗೌಡ, ಪ್ರಹ್ಲಾದ್ ಜೋಷಿ, ನಿರ್ಮಲಾ‌ ಸೀತಾರಾಮನ್, ಸುರೇಶ್ ಅಂಗಡಿ, ಬಿಜೆಪಿಯ ರಾಜ್ಯಸಭಾ ಮತ್ತು ಲೋಕಸಭಾ ಸದಸ್ಯರು ಭಾಗವಹಿಸಿದ್ದರು. ಕಾಂಗ್ರೆಸ್ ಪಕ್ಷದ ಎಲ್ಲಾ ರಾಜ್ಯಸಭಾ ಸದಸ್ಯರು ಉಪಸ್ಥಿತರಿದ್ದರು‌. ಲೋಕಸಭಾ ಸದಸ್ಯ ಡಿ.ಕೆ. ಸುರೇಶ್ ಗೈರಾಗಿದ್ದರು. ಜೆಡಿಎಸ್ ಪಕ್ಷದ ಲೋಕಸಭಾ ಸದಸ್ಯ ಪ್ರಜ್ವಲ್ ರೇವಣ್ಣ ಮತ್ತು ರಾಜ್ಯಸಭಾ ಸದಸ್ಯ ಕುಪ್ಪೇಂದ್ರ ರೆಡ್ಡಿ ಕೂಡ ಗೈರಾಗಿದ್ದರು.
 

Read More