Home> Karnataka
Advertisement

ಅಶ್ವತ್ಥ ನಾರಾಯಣ ಭ್ರಷ್ಟಾಚಾರಕ್ಕೇ ವಿಶ್ವಮಾನವ: ಡಿ.ಕೆ.ಶಿವಕುಮಾರ್

ಪಿಎಸ್ಐ ನೇಮಕಾತಿ ಹಗರಣದ ಆರೋಪಿ ಅಭ್ಯರ್ಥಿ ರಕ್ಷಣೆಗೆ ಮುಂದಾಗಿರುವ ಉನ್ನತ ಶಿಕ್ಷಣ ಸಚಿವ ಅಶ್ವತ್ಥ ನಾರಾಯಣ ಅವರು ‘ಭ್ರಷ್ಟಾಚಾರಕ್ಕೇ ವಿಶ್ವಮಾನವ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ. 

ಅಶ್ವತ್ಥ ನಾರಾಯಣ ಭ್ರಷ್ಟಾಚಾರಕ್ಕೇ ವಿಶ್ವಮಾನವ: ಡಿ.ಕೆ.ಶಿವಕುಮಾರ್

ಬೆಂಗಳೂರು: ಪಿಎಸ್ಐ ನೇಮಕಾತಿ ಹಗರಣದ ಆರೋಪಿ ಅಭ್ಯರ್ಥಿ ರಕ್ಷಣೆಗೆ ಮುಂದಾಗಿರುವ ಉನ್ನತ ಶಿಕ್ಷಣ ಸಚಿವ ಅಶ್ವತ್ಥ ನಾರಾಯಣ ಅವರು ‘ಭ್ರಷ್ಟಾಚಾರಕ್ಕೇ ವಿಶ್ವಮಾನವ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ.

ಸದಾಶಿವನಗರ ನಿವಾಸದ ಬಳಿ ಗುರುವಾರ ಮಾಧ್ಯಮಗಳ ಜತೆ ಮಾತನಾಡಿದ ಡಿ.ಕೆ.ಶಿವಕುಮಾರ್, ಅಶ್ವತ್ಥ ನಾರಾಯಣ ಅವರು ರಾಮನಗರ ಜಿಲ್ಲಾ ಉಸ್ತುವಾರಿ ಸಚಿವ. ಅವರು ರಾಮನಗರವನ್ನು ಕ್ಲೀನ್ ಮಾಡುತ್ತೇವೆ ಎಂದಿದ್ದರು. ಈ ಹಿಂದೆ ರಾಜೀವ್ ಗಾಂಧಿ ಆರೋಗ್ಯ ಇಲಾಖೆ ಕುಲಸಚಿವರ ನೇಮಕ ವಿಚಾರವಾಗಿ ಗೊಂದಲ ಸೃಷ್ಟಿಸಿದ್ದರು. ಅವರ ನೇಮಕ ಮಾಡಿದ್ದು ಯಾರು? ಇನ್ನು ಸಹಾಯಕ ಪ್ರಾಧ್ಯಾಪಕರ ಹುದ್ದೆ ನೇಮಕಾತಿ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ ವಿಚಾರದ ಬಗ್ಗೆ ಶಿಕ್ಷಣ ಇಲಾಖೆಯೇ ದೂರು ನೀಡಿದೆ. ಆ ಕುಲಸಚಿವರು ಯಾರ ಮನೆಗೆ, ಎಷ್ಟು ಬಾರಿ ಹೋಗಿದ್ದಾರೆ? ಅವರ ಸಚಿವರ ಒಡನಾಟ ಏನು? ಅವರ ನೇತೃತ್ವ ಇರುವ ಸಂಸ್ಥೆಗಳಲ್ಲಿ ಯಾವ ರೀತಿ ಅಕ್ರಮ ನಡೆಯುತ್ತಿದೆ? ಅಲ್ಲೆಲ್ಲ ವಿಶ್ವದ ನಂಟಿದೆ ಎಂದು ಅವರೇ ಹೇಳುವುದಾದರೆ ಎಲ್ಲ ಅಕ್ರಮಗಳಿಗೂ ಅವರೇ ಪಿತಾಮಹಾ ಅಲ್ಲವೇ? ಎಲ್ಲ ಭ್ರಷ್ಟಾಚಾರಗಳಿಗೆ ವಿಶ್ವಮಾನವ ಅವರೇ ಅಲ್ಲವೇ? ಎನ್ಇಪಿ ನಾನೇ ಮೊದಲು ಜಾರಿಗೆ ತರುತ್ತೇನೆ ಎಂದು ಹೆಗಲು ತಟ್ಟಿಕೊಂಡವರು ಈಗೇನು ಮಾಡಿದ್ದಾರೆ? ಎಂದು ತಿರುಗೇಟು ನೀಡಿದರು.

ಇದನ್ನೂ ಓದಿ: ನರ್ಸ್‌ಗಳಿಗೆ ಸರ್ಟಿಫಿಕೇಟ್ ಕೊಡೋದರಲ್ಲಿ ಅಶ್ವತ್ಥ ನಾರಾಯಣ ಅವರಿಗೆ ದೊಡ್ಡ ಇತಿಹಾಸವಿದೆ: ಹೆಚ್‌ಡಿಕೆ ಹೊಸ ಬಾಂಬ್

ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಸಿಒಡಿ ಅಧಿಕಾರಿಗಳು ಮತ್ತೆ ನೊಟಸ್ ಜಾರಿಗೊಳಿಸಿರುವ ಬಗ್ಗೆ ಕೇಳಿದ ಪ್ರಶ್ನೆಗೆ, ‘ಪೊಲೀಸ್ ಇಲಾಖೆ ಬಹಳ ಒಳ್ಳೆಯ ಕೆಲಸ ಮಾಡುತ್ತಿದೆ. ಬಿಜೆಪಿ ಸರ್ಕಾರದ ವಿರುದ್ಧ ಮಾತನಾಡುವ ವಿರೋಧ ಪಕ್ಷದ ನಾಯಕರು, ವಕ್ತಾರರಿಗೆ ನೊಟೀಸ್ ಜಾರಿ ಮಾಡುತ್ತಿದ್ದಾರೆ. ಈ ನೊಟೀಸ್ ಕೊಡುವ ಮೂಲಕ ಪೊಲೀಸ್ ಅಧಿಕಾರಿಗಳು ಉತ್ತಮ ಸಂಪ್ರದಾಯಕ್ಕೆ ನಾಂದಿ ಹಾಡಿದ್ದಾರೆ. ಆದರೆ ಅದೇ ನೋಟಿಸ್ ಅನ್ನು ಬಿಜೆಪಿ ನಾಯಕರಿಗೂ ನೀಡಬೇಕಲ್ಲವೇ? ಅವರಿಗೆ ಯಾಕೆ ಕೊಟ್ಟಿಲ್ಲ? ಎಂದರು.

ಯತ್ನಾಳ್ ಅವರು ಕೆಪಿಎಸ್‌ಸಿ ಸದಸ್ಯರು ಹಾಗೂ ಅಧ್ಯಕ್ಷರು ನೇಮಕಕ್ಕೆ ಹಣ ನೀಡಿದ್ದಾರೆ ಎಂದೆಲ್ಲಾ ಹೇಳಿದ್ದಾರೆ. ವಿಶ್ವನಾಥ್ ಅವರು ಟೆಂಡರ್ ನೀಡುವ ಮೊದಲು ಕಮಿಷನ್ ಪರ್ಸೆಂಟೇಜ್ ನಿಗದಿಯಾಗಿದೆ ಎಂದು ಹೇಳಿದ್ದಾರೆ. ಬೇರೆ ನಾಯಕರು ಭ್ರಷ್ಟಚಾರ ಸಂಬಂಧ ಬೇರೆ, ಬೇರೆ ಹೇಳಿಕೆ ನೀಡಿದ್ದು, ಅವರಿಗೂ ನೊಟೀಸ್ ನೀಡಲಿ. ಯತ್ನಾಳ್ ಹಾಗೂ ವಿಶ್ವನಾಥ್ ಅವರು ಹೇಗೆ ವಿಧಾನ ಮಂಡಲದ ಗೌರವಾನ್ವಿತ ಸದಸ್ಯರೋ ಅದೇ ರೀತಿ ಪ್ರಿಯಾಂಕ್ ಖರ್ಗೆ ಅವರೂ ಕೂಡ ಸದಸ್ಯರೇ. ಅವರಿಗೆ ನೊಟೀಸ್ ನೀಡದವರು, ಇವರಿಗೆ ಮಾತ್ರ ಯಾಕೆ ನೀಡುತ್ತಿದ್ದಾರೆ? ಎಂದು ಪ್ರಶ್ನಿಸಿದರು.

ಪ್ರಿಯಾಂಕ್ ಖರ್ಗೆ ನಮ್ಮ ಪಕ್ಷದ ವಕ್ತಾರರು. ಇಂತಿಂತಹ ವಿಚಾರಗಳನ್ನು ಮಾಧ್ಯಮದ ಮುಂದೆ ಪ್ರಸ್ತಾಪ ಮಾಡಿ ಎಂದು ಪಕ್ಷ ಅವರಿಗೆ ಅಧಿಕಾರ ಕೊಟ್ಟಿದೆ. ಅವರು ಪೊಲೀಸ್ ಅಧಿಕಾರಿಗಳ ನೊಟೀಸ್ ಗೆ ಗೌರವಯತವಾಗಿ ಉತ್ತರ ನೀಡಿದ್ದಾರೆ. ಸರ್ಕಾರ ಮೊದಲು ತನ್ನ ಮುಖಕ್ಕೆ ಅಂಟಿರುವ ಕೊಳಕು, ತಮ್ಮ ತಟ್ಟೆಯಲ್ಲಿ ಬಿದ್ದಿರುವ ಹೆಗ್ಗಣವನ್ನು ಸ್ವಚ್ಛ ಮಾಡಿಕೊಳ್ಳಲಿ. ಪ್ರಿಯಾಂಕ್ ಖರ್ಗೆ ಅವರಿಗೆ ನೊಟೀಸ್ ಜಾರಿ ಮಾಡಿರುವವರು ಮೊದಲು ಗೃಹ ಸಚಿವ ಅರಗ ಜ್ಞಾನೇಂದ್ರ ಅವರಿಗೆ ನೊಟೀಸ್ ನೀಡಬೇಕು. ಸದನದಲ್ಲಿ ಬೇರೆ ಬೇರೆ ಪಕ್ಷದ ನಾಯಕರು ಈ ನೇಮಕಾತಿ ಅಕ್ರಮ ವಿಚಾರವಾಗಿ ಪ್ರಶ್ನೆಗಳನ್ನು ಕೇಳಿದಾಗ ಯಾವುದೇ ಅಕ್ರಮ ನಡೆದಿಲ್ಲ ಎಂದು ಐದು ಬಾರಿ ಉತ್ತರಿಸಿದ್ದಾರೆ. ಆದರೂ ಆರೋಪಿಗಳನ್ನು ಬಂಧಿಸಿ, ಜೈಲಿಗೆ ಹಾಕಿ, ಎಫ್ಐಆರ್ ದಾಖಲಿಸಲಾಗುತ್ತಿದೆ? ಹಾಗಾದರೆ ಗೃಹ ಸಚಿವರು ಹೇಳಿದ್ದು ಸುಳ್ಳಲ್ಲವೇ? ಎಂದು ಕಿಡಿಕಾಡಿದರು.

ಇಲ್ಲಿಯವರೆಗೂ ತನಿಖಾಧಿಕಾರಿಗಳು, ಯಾರಿಗೆಲ್ಲ ನೊಟೀಸ್ ನೀಡಿದ್ದಾರೆ. ಯಾರು ಏನು ಉತ್ತರ ಕೊಟ್ಟಿದ್ದಾರೆ. ಯಾರನ್ನು ಬಿಟ್ಟು ಕಳುಹಿಸಿದ್ದಾರೆ, ಯಾವ ಪರೀಕ್ಷಾ ಕೇಂದ್ರದವರನ್ನು ಹಿಡಿದಿದ್ದೀರಿ. ಮಲ್ಲೇಶ್ವರಂನಲ್ಲಿ ಎಫ್ಐಆರ್ ಆಗಿದೆ. ಉನ್ನತ ಶಿಕ್ಷಣ ಇಲಾಖೆ, ಪಿಡ್ಲ್ಯೂಡಿ, ಎಫ್ ಡಿಎ ನೇಮಕಾತಿ ಅಕ್ರಮ ಎಲ್ಲವೂ ಬಯಲಾಗಿದೆ. ಈ ಪ್ರಕರಣಗಳಲ್ಲಿ ಯಾರ ವಿಚಾರಣೆ ಮಾಡಿದ್ದೀರಿ ಎಂದು ಇದುವರೆಗೂ ಸಾರ್ವಜನಿಕರಿಗೆ ಯಾವುದೇ ಮಾಹಿತಿ ನೀಡಿಲ್ಲ. ಎಲ್ಲ ಮಾಹಿತಿಗಳನ್ನು ಬಹಳ ಗೌಪ್ಯವಾಗಿ ಇಡಲಾಗುತ್ತಿದೆ ಎಂದು ಹೇಳಿದರು.

ಇದನ್ನೂ ಓದಿ: ‘ಸಿದ್ದರಾಮಯ್ಯ ಸಿಎಂ ಆಗುವುದೂ ಇಲ್ಲ, ಕಾಂಗ್ರೆಸ್ ಅಧಿಕಾರಕ್ಕೆ ಬರುವುದೂ ಇಲ್ಲ’

ಪ್ರಿಯಾಂಕ್ ಖರ್ಗೆ ಅವರು ಹೇಳಿರುವ ಎಲ್ಲ ದಾಖಲೆಗಳು ಸಾರ್ವಜನಿಕ ವಲಯದಲ್ಲಿದ್ದು, ಅಧಿಕಾರಿಗಳು ಕೇಳಿದ ಎಲ್ಲ ಸಾಕ್ಷ್ಯಗಳನ್ನು ನೀಡಲಾಗಿದೆ. ಈ ಎಲ್ಲ ದಾಖಲೆಗಳು ಮಾಧ್ಯಮಗಳಲ್ಲಿ ಪ್ರಕಟವಾಗಿದ್ದು, ತನಿಖಾಧಿಕಾರಿಗಳು ಮಾಧ್ಯಮಗಳಿಗೆ ಈ ವಿಚಾರವಾಗಿ ಯಾಕೆ ನೊಟೀಸ್ ಜಾರಿ ಮಾಡಿಲ್ಲ. ಪ್ರಜಾಪ್ರಭುತ್ವದ ವಕ್ತಾರರಾದ ಮಾಧ್ಯಮಗಳು ಸಾಕಷ್ಟು ವಿಚಾರ ಬಯಲಿಗೆಳೆದಿವೆ. ದಲಿತ ನಾಯಕನ ಮೇಲೆ ದೌರ್ಜನ ಮಾಡಿ, ನಮ್ಮ ಬಾಯಿ ಮುಚ್ಚಿಸಲು ಪ್ರಯತ್ನಿಸುತ್ತಿದ್ದೀರಾ? ಪ್ರಿಯಾಂಕ್ ಖರ್ಗೆ ಅವರು ಪಕ್ಷದ ಪ್ರತಿನಿಧಿಯಾಗಿದ್ದು, ಅವರನ್ನು ಯಾವಾಗ ವಿಚಾರಣೆಗೆ ಕಳುಹಿಸಬೇಕು ಎಂದು ನಮಗೆ ಗೊತ್ತಿದೆ. ಆ ಬಗ್ಗೆ ನಾವು ಪಕ್ಷದ ವೇದಿಕೆಯಲ್ಲಿ ಚರ್ಚೆ ಮಾಡುತ್ತೇವೆ ಎಂದರು.

ಸಚಿವ ಅಶ್ವತ್ಥ ನಾರಾಯಣ ಅವರು ಏಕವಚನದಲ್ಲಿ ದಾಳಿ ಮಾಡಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ನನ್ನ ವಿರುದ್ಧ ಏಕವಚನದಲ್ಲಾದರೂ ಮಾತನಾಡಲಿ, ಬಹುವಚನದಲ್ಲಾದರೂ ಮಾತನಾಡಲಿ. ಆದರೆ ರಾಜ್ಯದ ಯುವಕರು, ಕಷ್ಟಪಟ್ಟು ಓದಿ ಪ್ರಾಮಾಣಿಕವಾಗಿ ಕೆಲಸ ಪಡೆಯಲು ಮುಂದಾದವರಿಗೆ ಭ್ರಷ್ಟಾಚಾರದ ವಿಶ್ವಮಾನವನಿಂದ ಅನ್ಯಾಯ ಆಗುತ್ತಿರುವುದಕ್ಕೆ ಬೇಸರವಾಗುತ್ತಿದೆ ಎಂದು ತಿರುಗೇಟು ನೀಡಿದರು.

ಅಶ್ವತ್ಥ ನಾರಾಯಣ ಅವರ ವಿರುದ್ಧ ಬಿಜೆಪಿ ನಾಯಕರೇ ಷಡ್ಯಂತ್ರ ಮಾಡುತ್ತಿದ್ದಾರೆ ಎಂಬ ಕುಮಾರಸ್ವಾಮಿ ಅವರ ಹೇಳಿಕೆ ವಿಚಾರವಾಗಿ ಕೇಳಿದ ಪ್ರಶ್ನೆಗೆ, ಕುಮಾರಸ್ವಾಮಿ ಅವರು ಆ ರೀತಿ ಹೇಳಿದ್ದರೆ, ನೀವು ಕುಮಾರಸ್ವಾಮಿ ಅವರ ಬಳಿ ಪ್ರಶ್ನೆ ಕೇಳಬೇಕು. ನಾನು ಕುಮಾರಸ್ವಾಮಿ ಅವರಿಗೆ ವಕ್ತಾರನಾಗಲು ಸಾಧ್ಯವಿಲ್ಲ ಎಂದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More