Home> Karnataka
Advertisement

Cauvery water dispute: ಕಾಂಗ್ರೆಸ್ ಗೋಸುಂಬೆ ರೀತಿ ಬಣ್ಣ ಬದಲಿಸುವ ಪಕ್ಷ- ಬಿಜೆಪಿ

Cauvery Water Sharing Dispute: ಕಾಂಗ್ರೆಸ್‌ನ INDI Allianceನ ಪ್ರಮುಖ ಸದಸ್ಯ ಪಕ್ಷವಾದ ಡಿಎಂಕೆಯ ಸ್ಟಾಲಿನ್‌ ಅವರ ಹೆಗಲ ಮೇಲೆ ಕೈ ಹಾಕಿ ಮಾತನಾಡುವ ಡಿಸಿಎಂ ಡಿಕೆಶಿ ಈಗೇಕೆ ಮೇಕೆದಾಟು ಯೋಜನೆಗೆ ಸಹಕಾರ ಕೇಳುತ್ತಿಲ್ಲ? ಮಾತುಕತೆಯಲ್ಲಿ ಮುಗಿಯುವ ಸಮಸ್ಯೆಗೆ ಊರು ತುಂಬಾ ಪಾದಯಾತ್ರೆ ಮಾಡಿದ್ದು ಏಕೆ? ಎಂದು BJP ಪ್ರಶ್ನಿಸಿದೆ.

Cauvery water dispute: ಕಾಂಗ್ರೆಸ್ ಗೋಸುಂಬೆ ರೀತಿ ಬಣ್ಣ ಬದಲಿಸುವ ಪಕ್ಷ- ಬಿಜೆಪಿ

ಬೆಂಗಳೂರು: ತಮಿಳುನಾಡಿಗೆ ಕಾವೇರಿ ನದಿ ನೀರು ಬಿಡುಗಡೆ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಕಿಡಿಕಾರಿರುವ ಬಿಜೆಪಿ, ‘ಗೋಸುಂಬೆ ರೀತಿ ಆಗಾಗ ಬಣ್ಣ ಬದಲಿಸುವ ಪಕ್ಷವೇ ಕಾಂಗ್ರೆಸ್. ತಾನು ವಿಪಕ್ಷದಲ್ಲಿದ್ದಾಗ ಒಂದು ಬಣ್ಣ, ಅಧಿಕಾರ ಸಿಕ್ಕರೆ ಮತ್ತೊಂದು ಬಣ್ಣ. ವಿಪಕ್ಷದಲ್ಲಿದ್ದಾಗ ನೀರಾವರಿ ವಿಷಯಗಳನ್ನು ಅನವಶ್ಯಕವಾಗಿ ರಾಜಕೀಯಗೊಳಿಸಿ, ವಿವಾದ ಎಬ್ಬಿಸುವ ಕಾಂಗ್ರೆಸ್‌, ಆಡಳಿತ ಸಿಕ್ಕಾಗ ನೀರಿನ ಬಗ್ಗೆ ದನಿಯೇ ಎತ್ತುವುದಿಲ್ಲ’ವೆಂದು ಟೀಕಿಸಿದೆ.

‘ಹಿಂದೆ ತಾನೇ ಅರಚಾಡಿದ್ದರ ಬಗ್ಗೆ ತುಟಿಕ್‌ ಪಿಟಿಕ್‌ ಎನ್ನುವುದಿಲ್ಲ. ಒಂದು ವೇಳೆ ಕಾಂಗ್ರೆಸ್ ನೀರಾವರಿ ಯೋಜನೆಗಳ ಬಗ್ಗೆ ಮಾತನಾಡಿದೆ ಎಂದರೆ, ಸಮೀಪದಲ್ಲಿಯೇ ಚುನಾವಣೆ ಇದೆ ಎಂದರ್ಥ. ವಿಧಾನಸಭಾ ಚುನಾವಣೆಗೂ ಮೊದಲು ಕಾಂಗ್ರೆಸ್ಸಿಗರು ಇದೇ ಕಾವೇರಿ ಕೊಳ್ಳದಲ್ಲಿ, ಕೋವಿಡ್‌ನ ಅಪಾಯಗಳನ್ನೂ ಧಿಕ್ಕರಿಸಿ, “ನಮ್ಮ ನೀರು-ನಮ್ಮ ಹಕ್ಕು” ಅಂತ ಕಿರುಚಾಡುತ್ತಾ ವಾಕಿಂಗ್‌ ಮಾಡಿ, ಬೊಂಡಾ, ಬಜ್ಜಿ ತಿಂದು ಮಜಾ ಮಾಡಿದ್ದರು’ ಎಂದು ಬಿಜೆಪಿ ವ್ಯಂಗ್ಯವಾಡಿದೆ.

‘ಅಸಲಿಗೆ ಅದು ಹಾಲಿ ಡಿಸಿಎಂ ಡಿ.ಕೆ.ಶಿವಕುಮಾರ್‌ರವರು ಕಾಂಗ್ರೆಸ್‌ ಹೈಕಮಾಂಡ್‌ಗೆ ತಮ್ಮ ಅಸ್ತಿತ್ವ ಸಾಬೀತು ಪಡಿಸುವುದಕ್ಕೆ ಮಾಡಿದ ಗಿಮಿಕ್ ಆಗಿತ್ತೇ ವಿನಃ ನೀರಾವರಿಯ ಕಾಳಜಿ, ಯೋಜನೆಯ ಅನುಷ್ಠಾನ ಎಂಬುದೆಲ್ಲಾ ಬರೀ ಮಣ್ಣಂಗಟ್ಟಿ. ಕಾಂಗ್ರೆಸ್‌ನ I.N.D.I. Allianceನ ಪ್ರಮುಖ ಸದಸ್ಯ ಪಕ್ಷವಾದ ಡಿಎಂಕೆಯ ಎಂ.ಕೆ.ಸ್ಟಾಲಿನ್‌ ಅವರ ಹೆಗಲ ಮೇಲೆ ಕೈ ಹಾಕಿ ಮಾತನಾಡುವ ಡಿಸಿಎಂ ಡಿಕೆಶಿ ಅವರು ಈಗೇಕೆ ಮೇಕೆದಾಟು ಯೋಜನೆಗೆ ಸಹಕಾರ ಕೇಳುತ್ತಿಲ್ಲ? ಮಾತುಕತೆಯಲ್ಲಿ ಮುಗಿಯುವ ಸಮಸ್ಯೆಗೆ ಊರು ತುಂಬಾ ಪಾದಯಾತ್ರೆ ಮಾಡಿದ್ದು ಏಕೆ..?’ ಎಂದು ಪ್ರಶ್ನಿಸಿದೆ.

ಇದನ್ನೂ ಓದಿ: ಕೇಂದ್ರ ನೌಕರರು, ಪಿಂಚಣಿದಾರರಿಗೆ ಗುಡ್‌ ನ್ಯೂಸ್

‘ಅಂದು ಅಷ್ಟೆಲ್ಲಾ ಚಪ್ಪಲಿ ಸವೆಸಿದ ನಾಟಕವಾಡಿದ ಕಾಂಗ್ರೆಸ್ ಈಗ ನ್ಯಾಯಾಲಯ ಹೇಳುವ ಮೊದಲೇ ತಾನೇ ಮುಂದಾಗಿ ತಮಿಳುನಾಡಿಗೆ ದಂಡಿಯಾಗಿ ನೀರು ಹರಿಸಿದೆ. ಆದರೆ ತೀವ್ರ ಜನಾಕ್ರೋಶ ವ್ಯಕ್ತವಾದ ಮೇಲೆ ಸರ್ವಪಕ್ಷ ಸಭೆ, ದೆಹಲಿಗೆ ನಿಯೋಗ, ನ್ಯಾಯಾಲಯಕ್ಕೆ ಮೇಲ್ಮನವಿ, ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸಲಿ ಎಂಬೆಲ್ಲಾ ರಂಗ್ಬಿರಂಗಿ ಕಥೆಗಳನ್ನು ಹೆಣೆಯುತ್ತಿದೆ. ರಾಜ್ಯದ ರೈತರ ಹಿತದೃಷ್ಟಿಗಿಂತ, ತಾವು ಮಾಡಿಕೊಂಡಿದ್ದ  I.N.D.I.Alliance ನ ಹಿತ ಕಾಯುವುದೇ ಕಾಂಗ್ರೆಸ್‌ ಸರ್ಕಾರಕ್ಕೆ ಮುಖ್ಯವಾಗಿದೆ’ ಎಂದು ಬಿಜೆಪಿ ಕುಟುಕಿದೆ.

‘ರಾಜ್ಯದ ರೈತರ ಮನಸ್ಸಿಗೆ ನೋವಾದರೂ ಪರವಾಗಿಲ್ಲ, ರಾಜ್ಯದ ರೈತರು ಸರ್ಕಾರದ ವಿರುದ್ದ ಮುನಿಸಿಕೊಂಡರೂ ತೊಂದರೆಯಿಲ್ಲ, ಆದರೆ ತಮಿಳುನಾಡಿನ ಸಿಎಂ ಎಂ.ಕೆ.ಸ್ಟಾಲಿನ್‌ ಮುನಿಸಿಕೊಂಡರೆ ತಮಗೆ ಉಳಿಗಾಲವಿಲ್ಲ ಎಂಬ ಕಾರಣಕ್ಕೆ ತಮಿಳುನಾಡಿಗೆ ನೀರು ಹರಿಸುವುದಕ್ಕೆ ಕಾಂಗ್ರೆಸ್ ಸರ್ಕಾರ ಪ್ರಥಮ ಆದ್ಯತೆ ನೀಡಿದೆ’ ಎಂದು ಬಿಜೆಪಿ ಕಿಡಿಕಾರಿದೆ.

‘ನೀರಾವರಿ ಯೋಜನೆಗಳ ವಿಷಯದಲ್ಲಿ ಕಾಂಗ್ರೆಸ್‌ ರಾಜ್ಯದ ಜನತೆಗೆ ಧೋಖಾ ಮಾಡುತ್ತಿರುವುದು ಇದೇ ಮೊದಲಲ್ಲ. 2013ರ ವಿಧಾನಸಭಾ ಚುನಾವಣೆಗೂ ಮುನ್ನ “ಕಾಂಗ್ರೆಸ್‌ ನಡಿಗೆ-ಕೃಷ್ಣೆಯ ಕಡೆಗೆ” ಎಂದು ಕೃಷ್ಣಾ ಕೊಳ್ಳದಲ್ಲಿ ಟೈಂಪಾಸ್‌ ಮಾಡಿದ್ದರು. ಆದರೆ 2013ರಿಂದ 2018ರವರೆಗಿನ ತಮ್ಮ ಅಧಿಕಾರಾರವಧಿಯಲ್ಲಿ ಕೃಷ್ಣಾ ಕೊಳ್ಳದ ಕಡೆ ತಿರುಗಿ ಸಹ ನೋಡಲಿಲ್ಲ. 2016ರಲ್ಲಿ ಅಧಿಕಾರದ ಮದದಿಂದ ಮಹಾದಾಯಿ ಹೋರಾಟಗಾರರ ಮೇಲೆ ಪೊಲೀಸ್‌ ಪಡೆ ಬಿಟ್ಟು ಅಮಾನವೀಯವಾಗಿ ಕಾಂಗ್ರೆಸ್‌ ಸರ್ಕಾರ ಹಲ್ಲೆ ಮಾಡಿಸಿತ್ತು. 2017ರಲ್ಲಿ ತಾನೇ ಆಡಳಿತ ಪಕ್ಷವಾಗಿದ್ದರೂ ಜನರ ದಿಕ್ಕು ತಪ್ಪಿಸಲು ಮಹಾದಾಯಿಯ ಕೆಲವು ಹೋರಾಟಗಾರರನ್ನು ಬಿಜೆಪಿ ಕಚೇರಿ ಮುಂದೆ ಪ್ರತಿಭಟನೆಗೆ ಕೂರಿಸಿತ್ತು’ ಎಂದು ಬಿಜೆಪಿ ಟೀಕಿಸಿದೆ.

ಇದನ್ನೂ ಓದಿ: ರಾಜ್ಯದ 3ನೇ ಒಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲು ಚಾಲನೆ ಫಿಕ್ಸ್‌

‘ನೀರಾವರಿ ಯೋಜನೆಗಳಿಗೆ ಪ್ರತಿ ವರ್ಷ ₹30,000 ಕೋಟಿ ಮೀಸಲಿರಿಸುತ್ತೇವೆ ಎಂದು ಕಾಂಗ್ರೆಸ್‌ ಪ್ರಣಾಳಿಕೆಯಲ್ಲಿ ಘೋಷಿಸಿತ್ತು. ಆದರೆ ಸಿಎಂ ಸಿದ್ದರಾಮಯ್ಯರವರು ಮಂಡಿಸಿದ ಈ ಬಾರಿಯ ಬಜೆಟ್‌ನಲ್ಲಿ ನೀರಾವರಿಗೆ ನೀಡಿದ್ದು ₹940 ಕೋಟಿ ಮಾತ್ರ. ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ನೀರಾವರಿ ಯೋಜನೆ ಎಂದು ಪರಿಗಣಿಸಿ, ಈ ಬಾರಿ ₹5000 ಕೋಟಿ ಅನುದಾನವನ್ನು ಸಹ ಬಿಜೆಪಿ ಸರ್ಕಾರ ಒದಗಿಸಿದೆ. ಸಿಂಗಾಟಲ್ಲೂರು ಏತ ನೀರಾವರಿ ಯೋಜನೆ, ದೇವತ್ಕಲ್‌ ಏತ ನೀರಾವರಿ ಯೋಜನೆ, ಬೂದಿಹಾಳ-ಪೀರಾಪೂರ ಏತ ನೀರಾವರಿ ಯೋಜನೆ, ಕಲ್ಲಮರಡಿ ಏತ ನೀರಾವರಿ ಯೋಜನೆ ಸೇರಿದಂತೆ ಅನೇಕ ನೀರಾವರಿ ಯೋಜನೆಗಳನ್ನು ಕಾರ್ಯರೂಪಕ್ಕೆ ತಂದು ರೈತರ ಬಾಳನ್ನು ಹಸನುಗೊಳಿಸಿದ್ದು ಬಿಜೆಪಿ ಸರ್ಕಾರ. ಆದರೆ ತಮ್ಮ ವೈಯುಕ್ತಿಕ ಹಿತಾಸಕ್ತಿಗಾಗಿ ತಮಿಳುನಾಡಿಗೆ ನೀರು ಹರಿಸಿ, ರಾಜ್ಯದ ರೈತರ ಬದುಕನ್ನು ಹದಗೆಡಿಸುತ್ತಿರುವುದು ಮಾತ್ರ ಕಾಂಗ್ರೆಸ್‌ ಸರ್ಕಾರ’ವೆಂದು ಬಿಜೆಪಿ ಕುಟುಕಿದೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Read More