Home> Karnataka
Advertisement

ಸಿದ್ದರಾಮಯ್ಯರಂತಹ ನೂರಾರು 'ಗಿಣಿ'ಗಳನ್ನು ನಮ್ಮಪ್ಪ ಬೆಳೆಸಿದ್ದಾರೆ : ಹೆಚ್ಡಿಕೆ ತಿರುಗೇಟು

ನಾನು ಸಿದ್ದರಾಮಯ್ಯ ಸಾಕಿರುವ ಗಿಣಿಯಲ್ಲ. ನನ್ನನ್ನು ರಾಮನಗರ ಜಿಲ್ಲೆಯ ಜನರು ಸಾಕಿದ್ದಾರೆ. ಈ ಜಿಲ್ಲೆಯ ಜನ ಕೊಟ್ಟಿರುವಂತಹ ಶಕ್ತಿ ಉಪಯೋಗಿಸಿಕೊಂಡು ಈ ರಾಜ್ಯದ ರಾಜಕಾರಣದಲ್ಲಿ ಬೆಳೆದಿದ್ದೇನೆ ಎಂದು ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಸಿದ್ದರಾಮಯ್ಯರಂತಹ ನೂರಾರು 'ಗಿಣಿ'ಗಳನ್ನು ನಮ್ಮಪ್ಪ ಬೆಳೆಸಿದ್ದಾರೆ : ಹೆಚ್ಡಿಕೆ ತಿರುಗೇಟು

ರಾಮನಗರ: ರಾಜ್ಯದಲ್ಲಿ ವಿಧಾನಸಭೆ ಉಪಚುನಾವಣೆಗೆ ದಿನಾಂಕ ಘೋಷಣೆಯಾದ ಬೆನ್ನಲ್ಲೇ ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ನಡುವೆ ಟ್ವೀಟ್ ವಾರ್ ಆರಂಭವಾಗಿದೆ. 

ಇಂದು ಬೆಳಿಗ್ಗೆಯಷ್ಟೇ ಸಿದ್ದರಾಮಯ್ಯ ಅವರು, ನಾನೇ ನಂಬಿದ ಗಿಣಿಗಳು ಹದ್ದಾಗಿ ಕಾಡಿದ್ದು ನಿಜ. ಹದ್ದನ್ನು ಗಿಣಿಯೆಂದು ಭ್ರಮಿಸಿ ಮೈತ್ರಿ ಮಾಡಿಕೊಂಡಿದ್ದು ನನ್ನದೇ ತಪ್ಪು" ಎಂದು ಟ್ವೀಟ್ ಮಾಡಿದ್ದರು. ಅದಕ್ಕೀಗ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.

ಈ ಬಗ್ಗೆ ರಾಮನಗರದಲ್ಲಿ ಪ್ರತಿಕ್ರಿಯೆ ನೀಡಿದ ಕುಮಾರಸ್ವಾಮಿ ಅವರು, ನಾನು ಸಿದ್ದರಾಮಯ್ಯ ಸಾಕಿರುವ ಗಿಣಿಯಲ್ಲ. ನನ್ನನ್ನು ರಾಮನಗರ ಜಿಲ್ಲೆಯ ಜನರು ಸಾಕಿದ್ದಾರೆ. ಈ ಜಿಲ್ಲೆಯ ಜನ ಕೊಟ್ಟಿರುವಂತಹ ಶಕ್ತಿ ಉಪಯೋಗಿಸಿಕೊಂಡು ಈ ರಾಜ್ಯದ ರಾಜಕಾರಣದಲ್ಲಿ ಬೆಳೆದಿದ್ದೇನೆ. ಅಲ್ಲದೆ, ನಮ್ಮಪ್ಪ ದೇವೇಗೌಡರು ಸಿದ್ದರಾಮಯ್ಯ ಅವರಂತಹ ಅನೇಕ ಗಿಣಿಗಳನ್ನು ಸಾಕಿ ಬೆಳೆಸಿದ್ದಾರೆ. ಅವುಗಳು ನಮ್ಮನ್ನು ಯಾವ ರೀತಿಯಲ್ಲಿ ಕುಕ್ಕುತ್ತಿವೆ ಎಂಬುದು ನನಗೆ ಚೆನ್ನಾಗಿ ಗೊತ್ತಿದೆ.  ಆ ಬಗ್ಗೆ ಇತಿಹಾಸ ಬರೆಯುವವರು ಒಂದು ದಿನ ಬರೆಯುತ್ತಾರೆ ಎಂದು ಹೇಳುವ ಮೂಲಕ ತಿರುಗೇಟು ನೀಡಿದ್ದಾರೆ.

ಮುಂದುವರೆದು ಮಾತನಾಡಿದ ಅವರು, ಸಮ್ಮಿಶ್ರ ಸರ್ಕಾರದಲ್ಲಿ ನಾನು ಮುಖ್ಯಮಂತ್ರಿ ಆಗಿದ್ದನ್ನು ಸಿದ್ದರಾಮಯ್ಯ ಎಷ್ಟರಮಟ್ಟಿಗೆ ಸಹಿಸಿಕೊಂಡಿದ್ದಾರೆ ಎನ್ನುವುದು ನನಗೆ ಗೊತ್ತು. ಲೋಕಸಭೆ ಚುನಾವಣೆಯ ಬಳಿಕ ಮೈತ್ರಿ ಸರ್ಕಾರ ಇರಲು ಬಿಡಲ್ಲ ಎಂದು ಅವರೇ ಹೇಳಿಕೊಂಡಿದ್ದರು. ಅದರಂತೆಯೇ ನಡೆದಿದೆ ಎಂದು ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

Read More