Home> Karnataka
Advertisement

ಹಿಜಾಬ್, ಕೇಸರಿ ಶಾಲು & ಶಿವಮೊಗ್ಗ ಘಟನೆ.. ರಾಜ್ಯಪಾಲರ ಮಧ್ಯಪ್ರವೇಶಕ್ಕೆ ಹೆಚ್.ಡಿ.ಕುಮಾರಸ್ವಾಮಿ ಆಗ್ರಹ

HD Kumaraswamy: ರಾಜ್ಯದಲ್ಲಿ ಸರಕಾರ ವಜಾ ಆಗುವಂತಹ ಪರಿಸ್ಥಿತಿ ಇದೆ. ಕಲಾಪವನ್ನು ಹಾಳು ಮಾಡಿದ ಕಾಂಗ್ರೆಸ್ ನೈತಿಕ ಅಧಃಪತನಕ್ಕೆ ಜಾರಿದೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಕಿಡಿಕಾರಿದ್ದಾರೆ.

ಹಿಜಾಬ್, ಕೇಸರಿ ಶಾಲು & ಶಿವಮೊಗ್ಗ ಘಟನೆ.. ರಾಜ್ಯಪಾಲರ ಮಧ್ಯಪ್ರವೇಶಕ್ಕೆ ಹೆಚ್.ಡಿ.ಕುಮಾರಸ್ವಾಮಿ ಆಗ್ರಹ

ಬೆಂಗಳೂರು: ರಾಜ್ಯದಲ್ಲಿ ಶಾಂತಿ ಭದ್ರತೆಗೆ ದೊಡ್ಡ ಅಪಾಯ ಎದುರಾಗಿದೆ. ಕೂಡಲೇ ರಾಜ್ಯಪಾಲರು (Governor) ಮಧ್ಯಪ್ರವೇಶ ಮಾಡಬೇಕು. ಶಾಂತಿಯುತವಾಗಿದ್ದ ರಾಜ್ಯ ಹಿಜಾಬ್, ಕೇಸರಿ ಶಾಲು ಹಾಗೂ ಈಗ ಶಿವಮೊಗ್ಗದಲ್ಲಿ ಯುವಕನೊಬ್ಬನ ಕೊಲೆ ಕಾರಣದಿಂದ ಕುದಿಯುವ ಕುಲುಮೆಯಾಗಿದೆ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಹೇಳಿದರು.

ಪಕ್ಷದ ರಾಜ್ಯ ಕಚೇರಿ ಜೆ.ಪಿ ಭವನದಲ್ಲಿ (JP Bhavan) ಮಾಧ್ಯಮಗಳ ಜತೆ ಮಾತನಾಡಿದ ಅವರು, ಇಂಥ ಸೂಕ್ಷ್ಮ ಸಮಯದಲ್ಲಿ ರಾಜ್ಯಪಾಲರು ಮೌನವಾಗಿರುವುದು ಸರಿಯಲ್ಲ. ಅವರು ಯಾರ ಕೈಗೊಂಬೆಯೂ ಅಲ್ಲ, ಕೈಗೊಂಬೆ ಆಗಲೂ ಬಾರದು. ಹೀಗಾಗಿ ರಾಜ್ಯಪಾಲರು ಕೂಡಲೇ ಮಧ್ಯಪ್ರವೇಶ ಮಾಡಿ ಸರಕಾರದಿಂದ ಮಾಹಿತಿ ಪಡೆದು ಕೇಂದ್ರ ಸರಕಾರಕ್ಕೆ ವರದಿ ಸಲ್ಲಿಸಬೇಕು ಎಂದು ಒತ್ತಾಯಿಸಿದರು.

ಇದನ್ನೂ ಓದಿ: ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ಶಂಖದಿಂದಲೇ ತೀರ್ಥ ಬರಬೇಕೇ?: ಡಿಕೆಶಿ

ಅಲ್ಲದೆ, ಶೀಘ್ರವೇ ತಾವು ಕೂಡ ಖುದ್ದು ರಾಜ್ಯಪಾಲರನ್ನು ಭೇಟಿಯಾಗಿ ರಾಜ್ಯದಲ್ಲಿ ನಡೆಯುತ್ತಿರುವ ಅಹಿತಕರ ಘಟನೆಗಳು ಹಾಗೂ ವಿಧಾನ ಮಂಡಲ ಕಲಾಪವನ್ನು (Session) ಸರಕಾರ ಸಮರ್ಪಕವಾಗಿ ನಡೆಸದ ಬಗ್ಗೆ ನಮ್ಮ ಪಕ್ಷದ ವತಿಯಿಂದ ದೂರು ನೀಡಲಾಗುವುದು ಎಂದು ಹೆಚ್ ಡಿಕೆ (HDK) ತಿಳಿಸಿದರು.

ಯಾವ ಪುರುಷಾರ್ಥಕ್ಕೆ ರಾಜ್ಯಪಾಲರ ಭೇಟಿ?:

ಸದನದ ಕಲಾಪವನ್ನು ಹಾಳು ಮಾಡಿದ ಅಧಿಕೃತ ಪ್ರತಿಪಕ್ಷವೇ ಸರಕಾರದ ವಿರುದ್ಧ ರಾಜ್ಯಪಾಲರಿಗೆ ದೂರು ಕೊಡಲು ಹೊರಟಿದೆ. ಅದೂ ರಾಜಭವನದ (Rajbhavan) ತನಕ ನಡೆದುಕೊಂಡು ಹೋಗಿ ಮನವಿ ಕೊಟ್ಟು ಪ್ರಚಾರ ಪಡೆಯುವ ಹುನ್ನಾರ ನಡೆಸಿದೆ. ಯಾವ ಮುಖ ಇಟ್ಟುಕೊಂಡು ಆ ಪಕ್ಷದ ನಾಯಕರು ರಾಜ್ಯಪಾಲರನ್ನು ಭೇಟಿಯಾಗುತ್ತಾರೆ? ಈ ನಾಟಕವನ್ನು ಬೇರೆ ರಾಜ್ಯದ ಜನರು ನೋಡಬೇಕೆ ಎಂದು ಪ್ರಶ್ನಿಸಿದರು. 

ಸರಕಾರ ವಜಾ ಆಗುವಂತಹ ಪರಿಸ್ಥಿತಿ:

ರಾಜ್ಯದಲ್ಲಿ ಇಂಥ ಕೆಟ್ಟ ವಾತಾವರಣ ಉಂಟಾಗಲು ರಾಜ್ಯ ಸರಕಾರವೇ ಕಾರಣ. ಅವರ ಅಸಮರ್ಪಕ ಕಾರ್ಯ ವೈಖರಿಯಿಂದ ಇಡೀ ಶಿಕ್ಷಣ ಕ್ಷೇತ್ರ ಬಂದ್ ಮಾಡಿ‌ ಕೂರಿಸಿದ್ದಾರೆ. ಶಾಲೆ-ಕಾಲೇಜುಗಳಲ್ಲಿ ಸಂಘರ್ಷದ ವಾತಾವರಣ ಸೃಷ್ಟಿ ಆಗಿದೆ. ಇನ್ನು ಹೈಕೋರ್ಟ್ ಅಂತೂ  ಬಿಬಿಎಂಪಿಗೆ (BBMP) ನಿತ್ಯವೂ ಛೀಮಾರಿ ಹಾಕುತ್ತಿದೆ. ಅಧಿಕಾರಿಗಳನ್ನು ಜೈಲಿಗೆ ಕಲಿಸುವ ಎಚ್ಚರಿಕೆಯನ್ನು ನೀಡಿದೆ. ನಿಮ್ಮನ್ನು ಜೈಲಿಗೆ ಹಾಕಬೇಕಿತ್ತು ಎಂದು ಆಕ್ರೋಶ ವ್ಯಕ್ತಪಡಿಸಿದರು. 

ಇದನ್ನೂ ಓದಿ: #ಜನವಿರೋಧಿಕಾಂಗ್ರೆಸ್; “ಸದನದಲ್ಲಿ ನಿಮ್ಮ ಶಾಸಕರು ಮಾಡಿದ್ದೇನು, ಸಾಧಿಸಿದ್ದೇನು?”

ಕೇಂದ್ರ ಸರಕಾರವೇ ರಾಜ್ಯ ಸರಕಾರವನ್ನು ವಜಾ ಮಾಡುವಂಥ ಪರಿಸ್ಥಿತಿ ರಾಜ್ಯದಲ್ಲಿ ಸೃಷ್ಟಿ ಆಗಿದೆ. ಬಿಜೆಪಿ (BJP) ಪಕ್ಷದ ಲೋಕಸಭಾ ಸದಸ್ಯರೊಬ್ಬರೇ ಸರಕಾರದ ಅಸಮರ್ಥತೆ ನಮಗೆ ನಾಚಿಕೆ ಉಂಟು ಮಾಡುತ್ತಿದೆ ಎಂದು ಹೇಳಿದ್ದಾರೆ. ಜನರು ಕೂಡ ರೋಸಿ ಹೋಗಿದ್ದಾರೆ. ಹೀಗಾಗಿ ರಾಜ್ಯಪಾಲರು ತಕ್ಷಣ ಮಧ್ಯಪ್ರವೇಶ ಮಾಡಲೇಬೇಕು ಎಂದು ಒತ್ತಾಯಿಸಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More