Home> Karnataka
Advertisement

NEET ಪರೀಕ್ಷೆ ವಿದ್ಯಾರ್ಥಿಗಳು & ಪೋಷಕರ ಪಾಲಿಗೆ ಮರಣಶಾಸನವಾಗಿದೆ: ಎಚ್​ಡಿಕೆ

‘ಉಕ್ರೇನ್ʼಗೆ ಮೆಡಿಕಲ್ ಓದಲು ಹೋಗಿ ರಷ್ಯಾ ದಾಳಿಗೆ ತುತ್ತಾದ ವಿದ್ಯಾರ್ಥಿ ನವೀನ್ ದುರಂತ ಸಾವು ನೀಟ್ ವ್ಯವಸ್ಥೆಯ ನಿರ್ಲಜ್ಜ ಮುಖವನ್ನು ಇಡೀ ದೇಶಕ್ಕೆ ದರ್ಶನ ಮಾಡಿಸಿದೆ ಅಂತಾ ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದ್ದಾರೆ.

NEET ಪರೀಕ್ಷೆ ವಿದ್ಯಾರ್ಥಿಗಳು & ಪೋಷಕರ ಪಾಲಿಗೆ ಮರಣಶಾಸನವಾಗಿದೆ: ಎಚ್​ಡಿಕೆ

ಬೆಂಗಳೂರು: ನೀಟ್ ಪರೀಕ್ಷೆ ವಿದ್ಯಾರ್ಥಿಗಳು & ಪೋಷಕರ ಪಾಲಿಗೆ ಮರಣಶಾಸನವಾಗಿದೆ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ(HD Kumaraswamy) ಕಿಡಿಕಾರಿದ್ದಾರೆ. ಈ ಬಗ್ಗೆ ಬುಧವಾರ ಸರಣಿ ಟ್ವೀಟ್ ಮಾಡಿರುವ ಅವರು, ‘ವೈದ್ಯಶಿಕ್ಷಣದ ಕನಸು ಕಾಣುವ ಬಡ, ಮಧ್ಯಮ ವರ್ಗದ ಬದುಕನ್ನು ಛಿದ್ರಗೊಳಿಸುತ್ತಿರುವ ನೀಟ್ (ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ- NEET) ವಿದ್ಯಾರ್ಥಿಗಳು & ಪೋಷಕರ ಪಾಲಿಗೆ ಮರಣಶಾಸನವಾಗಿದೆ. ಉನ್ನತ ಶಿಕ್ಷಣವನ್ನು ಉಳ್ಳವರಿಗೆ ಮೀಸಲಿಟ್ಟು ಉಳಿದವರಿಗೆ ವ್ಯವಸ್ಥಿತವಾಗಿ ನಿರಾಕರಿಸಲಾಗುತ್ತಿದೆ’ ಅಂತಾ ಹೇಳಿದ್ದಾರೆ.

‘ಉಕ್ರೇನ್ʼಗೆ(Russia Ukraine War) ಮೆಡಿಕಲ್ ಓದಲು ಹೋಗಿ ರಷ್ಯಾ ದಾಳಿಗೆ ತುತ್ತಾದ ವಿದ್ಯಾರ್ಥಿ ನವೀನ್ ದುರಂತ ಸಾವು ನೀಟ್ ವ್ಯವಸ್ಥೆಯ ನಿರ್ಲಜ್ಜ ಮುಖವನ್ನು ಇಡೀ ದೇಶಕ್ಕೆ ದರ್ಶನ ಮಾಡಿಸಿದೆ. ‘ಅರ್ಹತೆʼ ನೆಪದಲ್ಲಿ ಪ್ರತಿಭಾವಂತ ಆರ್ಥಿಕ ದುರ್ಬಲ & ಗ್ರಾಮೀಣ ವಿದ್ಯಾರ್ಥಿಗಳಿಗೆ ಮಾಡಲಾಗುತ್ತಿರುವ ‘ಅನ್ಯಾಯʼಕ್ಕೆ ಅಂತ್ಯ ಹಾಡಬೇಕಿದೆ. 10ನೇ ತರಗತಿಯಲ್ಲಿ ಶೇ.96ರಷ್ಟು, 2ನೇ ಪಿಯುಸಿಯಲ್ಲಿ ಶೇ.97ರಷ್ಟು ಅಂಕ ಗಳಿಸಿದ್ದರೂ ನವೀನ್ʼಗೆ ‘ಜಗತ್ತಿನ ಶಿಕ್ಷಣ ಕಾಶಿʼ ಭಾರತದಲ್ಲಿ ವೈದ್ಯಸೀಟು ಸಿಗಲಿಲ್ಲ. ಗ್ರಾಮೀಣ ವಿದ್ಯಾರ್ಥಿಯೊಬ್ಬ ಇಷ್ಟು ಉತ್ತಮ ಅಂಕ ಗಳಿಸುವುದು ಸುಲಭವಲ್ಲ. ಆದರೂ ಆತನಿಗೆ ನಮ್ಮ ದೇಶದಲ್ಲಿ ವೈದ್ಯಶಿಕ್ಷಣವನ್ನು ನಿರಾಕರಿಸಲಾಗಿದೆ’ ಅಂತಾ ಎಚ್​ಡಿಕೆ ಬೇಸರ ವ್ಯಕ್ತಪಡಿಸಿದರು.

ಇದನ್ನೂ ಓದಿ: Russia Ukraine War: ಒಳ್ಳೆಯ ಡಾಕ್ಟರ್ ಆಗುವ ಕನಸು ಕಂಡಿದ್ದ ರ‍್ಯಾಂಕ್ ಸ್ಟೂಡೆಂಟ್ ನವೀನ್

‘ಭಾರತದಲ್ಲಿ ನಿರಾಕರಿಸಲ್ಪಟ್ಟ ಶಿಕ್ಷಣವನ್ನು ಹುಡುಕಿಕೊಂಡು ಉಕ್ರೇನ್ʼಗೆ ಹೋಗಿ, ಅಲ್ಲಿ ಕಲಿತು ಇನ್ನೊಬ್ಬರ ಜೀವ ಉಳಿಸಲು ನೂರುಕಾಲ ಬಾಳಿ ಬದುಕಬೇಕಿದ್ದ ನವೀನ್(Naveen Ganagowder) ಇಂದು ಜೀವ ಕಳೆದುಕೊಂಡು ‘ವಿಶ್ವಗುರುʼ ಆಗಬೇಕೆಂದು ಹಾತೊರೆಯುತ್ತಿರುವ ‘ಭಾರತದ ಆತ್ಮಸಾಕ್ಷಿʼಗೆ ಪ್ರಶ್ನೆಯಾಗಿದ್ದಾನೆ. ಇದಕ್ಕೆ ಯಾರು ಹೊಣೆ?’ ಅಂತಾ ಪ್ರಶ್ನಿಸಿದ್ದಾರೆ.

‘ನೀಟ್(NEET Exam) ಭಾರತದ ಮಧ್ಯಮ, ಬಡವರ್ಗದ ಮಕ್ಕಳ ಮೆಡಿಕಲ್ ಕನಸನ್ನು ಮರೀಚಿಕೆಯನ್ನಾಗಿಸಿದೆ. ಅದು ವಕ್ಕರಿಸಿದ ಮೇಲೆ ‘ಟ್ಯೂಷನ್ ಅಂಗಡಿʼಗಳು ನಾಯಿಕೊಡೆಗಳಂತೆ ಮೇಲೆದ್ದಿವೆ. ಕೋಟಿ ಕೋಟಿ ವ್ಯಾಪಾರ ಆಗುತ್ತಿದೆ. ಅವು ವಿದ್ಯಾರ್ಥಿಗಳಿಂದ ಲಕ್ಷ ಲಕ್ಷ ಪೀಕುತ್ತಿವೆ ಮತ್ತೂ ಶೇ.99ರಷ್ಟು ಕೋಚಿಂಗ್ ಪಡೆದ ವಿದ್ಯಾರ್ಥಿಗಳೇ ನೀಟ್ ಪಾಸ್ ಮಾಡುತ್ತಿದ್ದಾರೆ!’ ಅಂತಾ ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.

‘ಸರ್ಕಾರಿ ಶಾಲೆ-ಕಾಲೇಜು ವಿದ್ಯಾರ್ಥಿಗಳಿಗೆ ನೀಟ್ ತೇರ್ಗಡೆ ಕಷ್ಟಸಾಧ್ಯ. ಈ ದೌರ್ಬಲ್ಯವನ್ನರಿತೇ ‘ಟ್ಯೂಷನ್ ಅಂಗಡಿʼಗಳು ಮಾರುಕಟ್ಟೆ ವಿಸ್ತರಿಸಿ ನವೀನ್ʼರಂಥ ವಿದ್ಯಾರ್ಥಿಗಳ ಶವಗಳ ಮೇಲೆ ರಣಕೇಕೆ ಹಾಕುತ್ತಿವೆ. ನೀಟ್(NEET) ಹೆಸರಿನಲ್ಲಿ ನೀಟಾಗಿ ಉಳ್ಳವರಿಗೆ ವೈದ್ಯ ಶಿಕ್ಷಣವನ್ನು ‘ದಾಸೋಹʼ ಮಾಡುವ ದಂಧೆ ವಿರುದ್ಧ ಎಲ್ಲರೂ ದನಿ ಎತ್ತಬೇಕಿದೆ’ ಅಂತಾ ಒತ್ತಾಯಿಸಿದ್ದಾರೆ.

ಇದನ್ನೂ ಓದಿ: Russia Ukraine War: ಯುದ್ಧವು ನವೀನ್ ಕನಸನ್ನು ನುಚ್ಚುನೂರು ಮಾಡಿದೆ- ಎಚ್​ಡಿಕೆ

‘ಕೇಂದ್ರ ಸಚಿವ ಪ್ರಹ್ಲಾದ ಜೋಷಿ(Pralhad Joshi) ಹೇಳಿಕೆ ನನಗೆ ಅಚ್ಚರಿ ತಂದಿದೆ. ವಿದೇಶದಲ್ಲಿ ವೈದ್ಯಪದವಿ ಪಡೆಯುವ ಶೇ.90ರಷ್ಟು ವಿದ್ಯಾರ್ಥಿಗಳು ಭಾರತದಲ್ಲಿ ಅಗತ್ಯ ಅರ್ಹತಾ ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದಿಲ್ಲ. ವಿದೇಶ & ಭಾರತದಲ್ಲಿ ವೈದ್ಯಶಿಕ್ಷಣಕ್ಕೆ ಆಗುವ ವೆಚ್ಚದ ಬಗ್ಗೆ ಚರ್ಚೆ ಬೇಡ. ಆ ಚರ್ಚೆಗೆ ಇದು ಸಮಯವೂ ಅಲ್ಲ ಎಂದಿದ್ದಾರೆ ಅವರು. ಕೇಂದ್ರದ ಕಾನೂನು & ಸಂಸದೀಯ ವ್ಯವಹಾರ ಖಾತೆ ಮಂತ್ರಿಗಳೇ, ‘ವೆಚ್ಚದ ಹೋಲಿಕೆ ಮಾಡಲು ನಾನು ಬಯಸುವುದಿಲ್ಲ. ಯಾವುದೇ ವಿವಾದ ಅಥವಾ ಚರ್ಚೆಗೆ ನಾನೀಗ ಕಾರಣನಾಗುವುದಿಲ್ಲ’ ಎಂದು ಹೇಳುವುದರ ಹಿಂದಿನ ಮರ್ಮವೇನು? ಅವರ ಹೇಳಿಕೆ ಅನೇಕ ಗುಮಾನಿಗಳಿಗೆ ಕಾರಣವಾಗಿದೆ’ ಅಂತಾ ಕುಮಾರಸ್ವಾಮಿ ಹೇಳಿದ್ದಾರೆ.

‘ಟ್ಯೂಷನ್ ಅಂಗಡಿʼಗಳ ಹಿಂದೆ ಯಾರಿದ್ದಾರೆ? ಯಾರಿಗೂ ಕಾಣದಂತೆ ಕೇಂದ್ರ ಸರ್ಕಾರ(Central Government)ವೇ ಅವಿತು ಕೂತಿದೆಯಾ? ನೀಟ್‌ ಸೃಷ್ಟಿಸಿದ ‘ಶೈಕ್ಷಣಿಕ ಅರಾಜಕತೆʼಗೆ ಇನ್ನೆಷ್ಟು ವಿದ್ಯಾರ್ಥಿಗಳು ಬಲಿಯಾಗಬೇಕು? ನವೀನ್‌ ಸಾವು ನೀಟ್‌ ಸಾಚಾತನವನ್ನೇ ಪ್ರಶ್ನಿಸಿದೆ. ಬಡಮಕ್ಕಳ ರಕ್ತವನ್ನು ಹೀರುವ, ಶ್ರೀಮಂತರಿಗಷ್ಟೇ ಮೀಸಲಾಗಿರುವ ವೈದ್ಯಶಿಕ್ಷಣದ ‘ವ್ಯಾಪಾರೀಕರಣʼ ದೇಶಕ್ಕೆ ಅಪಮಾನಕರ. ವಿಶ್ವಗುರು, ರಾಷ್ಟ್ರೀಯ ಶಿಕ್ಷಣ ನೀತಿ ಎಂದೆಲ್ಲಾ ಬೊಬ್ಬೆ ಹೊಡೆಯುವ ಕೇಂದ್ರವು ಒಮ್ಮೆ ಶುದ್ಧ ಅಂತಃಕರಣದಿಂದ ಆಲೋಚಿಸಲಿ’ ಅಂತಾ ಎಚ್​ಡಿಕೆ ಸಲಹೆ ನೀಡಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More