Home> Karnataka
Advertisement

ಡಿಕೆಶಿ ತಾಯಿ ಗೌರಮ್ಮ, ಪತ್ನಿ ಉಷಾ ಅರ್ಜಿಗಳ ವಿಚಾರಣೆ ಮುಂದೂಡಿಕೆ

ಡಿ.ಕೆ. ಶಿವಕುಮಾರ್ ತಾಯಿ ಗೌರಮ್ಮ ಮತ್ತು ಪತ್ನಿ ಉಷಾ ಸಲ್ಲಿಸಿರುವ ಅರ್ಜಿಗಳ ವಿಚಾರಣೆಯನ್ನು ದೆಹಲಿ ಹೈಕೋರ್ಟ್ ನವೆಂಬರ್ 4ಕ್ಕೆ ಮುಂದೂಡಿದೆ.
 

ಡಿಕೆಶಿ ತಾಯಿ ಗೌರಮ್ಮ, ಪತ್ನಿ ಉಷಾ ಅರ್ಜಿಗಳ ವಿಚಾರಣೆ ಮುಂದೂಡಿಕೆ

ನವದೆಹಲಿ: ಡಿ.ಕೆ. ಶಿವಕುಮಾರ್ ಅವರ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಮಗೆ ವಿಚಾರಣೆಗೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯ ನೀಡಿರುವ ಸಮನ್ಸ್ ರದ್ದುಗೊಳಿಸುವಂತೆ ಮತ್ತು ವಿಚಾರಣೆ ಮಾಡಲೇಬೇಕಿದ್ದರೆ ಬೆಂಗಳೂರಿನಲ್ಲಿ ನಡೆಸುವಂತೆ ಡಿ.ಕೆ. ಶಿವಕುಮಾರ್ ತಾಯಿ ಗೌರಮ್ಮ ಮತ್ತು ಪತ್ನಿ ಉಷಾ ಸಲ್ಲಿಸಿರುವ ಅರ್ಜಿಗಳ ವಿಚಾರಣೆಯನ್ನು ದೆಹಲಿ ಹೈಕೋರ್ಟ್ ನವೆಂಬರ್ 4ಕ್ಕೆ ಮುಂದೂಡಿದೆ.

ಬುಧವಾರ ಪ್ರಕರಣದ ವಿಚಾರಣೆ ಆರಂಭಿಸಿದ ದೆಹಲಿ ಹೈಕೋರ್ಟ್ ನ್ಯಾಯಾಧೀಶ ಬ್ರಿಜೇಶ್ ಸೇಥಿ ನೇತೃತ್ವದ ಏಕಸದಸ್ಯ ಪೀಠದ‌ ಎದುರು ಗೌರಮ್ಮ ಮತ್ತು ಉಷಾ ಪರ ವಕೀಲರು 'ತಮಗೆ ವಿಚಾರಣೆಗೆ‌ ಹೇಳಲಾಗುತ್ತಿದೆ. ಆದರೆ ಜಾರಿ ನಿರ್ದೇಶನಾಲಯದ ಸಮನ್ಸ್ ನಮ್ಮ ಕೈಗೆ ಸೇರಿಯೇ ಇಲ್ಲ. ನಿನ್ನೆ ರಾತ್ರಿ 10ಗಂಟೆವರೆಗೆ‌ ನಮ್ಮ ಕನಕಪುರ ಅಥವಾ ಬೆಂಗಳೂರು ಮನೆಗೆ‌ ಸಮನ್ಸ್ ಬಂದಿಲ್ಲ'‌ ಎಂದು ಹೇಳಿದರು.

ಆಗ ಮಧ್ಯಪ್ರವೇಶಿಸಿದ ನ್ಯಾಯಾಧೀಶ ಬ್ರಿಜೇಶ್ ಸೇಥಿ, 'ಹೊಸ ಸಮನ್ಸ್ ನೀಡಿ' ಎಂದು ಜಾರಿ ನಿರ್ದೇಶನಾಲಯದ ವಕೀಲರಿಗೆ ಹೇಳಿದರು.‌ ಇಡಿ ಪರ ವಕೀಲರು 'ಈಗಾಗಲೇ ಸಮನ್ಸ್ ನೀಡಲಾಗಿದ್ದು ಹೊಸ ಸಮನ್ಸ್ ಅವಶ್ಯಕತೆ ಇಲ್ಲ' ಎಂದರು.‌‌ ಆಗ ಮತ್ತೆ ಮಧ್ಯಪ್ರವೇಶಿದ ನ್ಯಾಯಾಧೀಶ ಬ್ರಿಜೇಶ್ ಸೇಥಿ, 'ಹಾಗಾದರೆ ಸ್ವಲ್ಪ ಕಾಯಿರಿ' ಎಂದು ಹೇಳಿ ವಿಚಾರಣೆಯನ್ನು ನವೆಂಬರ್ 4 ಕ್ಕೆ ಮುಂದೂಡಿದರು.

ವಿಚಾರಣೆ ಬಳಿಕ ದೆಹಲಿ ಹೈಕೋರ್ಟ್ ಹೊರಾಂಗಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ. ಶಿವಕುಮಾರ್ ಅವರ ಸಹೋದರ ಮತ್ತು ಸಂಸದ ಡಿ.ಕೆ. ಸುರೇಶ್,  ಜಾರಿ ನಿರ್ದೇಶನಾಲಯದ ಸಮನ್ಸ್ ನಮ್ಮ ಕೈಗೆ ಸೇರಿಯೇ ಇಲ್ಲ. ನಿನ್ನೆ ರಾತ್ರಿ 10ಗಂಟೆವರೆಗೆ‌ ನಮ್ಮ ಕನಕಪುರ ಅಥವಾ ಬೆಂಗಳೂರು ಮನೆಗೆ‌ ಸಮನ್ಸ್ ಬಂದಿಲ್ಲ. ಇದೇ ಮಾಹಿತಿಯನ್ನು ನ್ಯಾಯಾಲಯಕ್ಕೆ ತಿಳಿಸಿದ್ದೇವೆ. ಸಮನ್ಸ್ ತಲುಪದ ಕಾರಣ ನವೆಂಬರ್ 4ಕ್ಕೆ ವಿಚಾರಣೆ ಮುಂದೂಡಲಾಗಿದೆ. ಹಾಗಾಗಿ ನವೆಂಬರ್ 4ರವರೆಗೆ ಜಾರಿ ನಿರ್ದೇಶನಾಲಯದ ವಿಚಾರಣೆಗೆ ಹಾಜರಾಗಬೇಕಾದ ಅಗತ್ಯ ಇಲ್ಲ' ಎಂದು ಹೇಳಿದರು.

ಇದಲ್ಲದೆ ಡಿ.ಕೆ. ಶಿವಕುಮಾರ್ ಅವರಿಗೆ ಇದೇ ದೆಹಲಿ ಹೈಕೋರ್ಟ್ ನೀಡಿರುವ ಜಾಮೀನಿಗೆ ತಡೆ ನೀಡುವಂತೆ ಜಾರಿ ನಿರ್ದೇಶನಾಲಯ ಸುಪ್ರೀಂ ಕೋರ್ಟಿನಲ್ಲಿ ಮನವಿ ಮಾಡಿರುವ ಬಗ್ಗೆ ಪ್ರತಿಕ್ರಿಯಿಸಿದ ಡಿ.ಕೆ. ಸುರೇಶ್, ನವೆಂಬರ್ 4ರಂದು ಈ ಪ್ರಕರಣವನ್ನು ಇಡಿ ಪರ ವಕೀಲರು ಸುಪ್ರೀಂ ಕೋರ್ಟಿನಲ್ಲಿ ಮೆನ್ಷನ್ ಮಾಡಬಹುದು. ನಾವು ಕೂಡ ಕೆವಿಯಟ್ ಸಲ್ಲಿಸಲಿದ್ದೇವೆ' ಎಂದು‌ ತಿಳಿಸಿದರು.

Read More