Home> Karnataka
Advertisement

ಮೂಲ ಕಾಂಗ್ರೆಸಿಗರ ಸರ್ವನಾಶವೇ ‘ಸಿದ್ದರಾಮೋತ್ಸವ’ದ ಉದ್ದೇಶ: ಬಿಜೆಪಿ ಆರೋಪ

ರಾಹುಲ್ ಗಾಂಧಿ ಸಮ್ಮುಖದಲ್ಲಿ ತಮ್ಮನ್ನು ಮುಂದಿನ ಸಿಎಂ ಎಂದು ಬಿಂಬಿಸಿಕೊಳ್ಳುವುದು ಸಿದ್ದರಾಮಯ್ಯ ಉದ್ದೇಶ. ಇದಕ್ಕಾಗಿಯೇ ರಾಹುಲ್‌ಗೆ ಅಧಿಕೃತ ಆಹ್ವಾನ ನೀಡಲಾಗಿದೆ ಎಂದು ಬಿಜೆಪಿ ಟ್ವೀಟ್ ಮಾಡಿದೆ.

ಮೂಲ ಕಾಂಗ್ರೆಸಿಗರ ಸರ್ವನಾಶವೇ ‘ಸಿದ್ದರಾಮೋತ್ಸವ’ದ ಉದ್ದೇಶ: ಬಿಜೆಪಿ ಆರೋಪ

ಬೆಂಗಳೂರು: ‘ಸಿದ್ದರಾಮೋತ್ಸವ ಎನ್ನುವುದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅವರ ಬಣದ ಪೊಲಿಟಿಕಲ್ ಟೂಲ್ ಕಿಟ್!’ ಎಂದು ಬಿಜೆಪಿ ಆರೋಪಿಸಿದೆ. #SidduPoliticalToolKit ಹ್ಯಾಶ್ ಟ್ಯಾಗ್ ಬಳಸಿ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ‘ಇದೊಂದು ವ್ಯವಸ್ಥಿತವಾದ ರಾಜಕೀಯ ಗುಪ್ತಮಾರ್ಗಸೂಚಿಯ ಭಾಗ, ಮೂಲ ಕಾಂಗ್ರೆಸಿಗರ ಸರ್ವನಾಶವೇ ಇದರ ಉದ್ದೇಶ’ವೆಂದು ಟೀಕಿಸಿದೆ.

‘ಇಷ್ಟು ವರ್ಷಗಳ‌ ಕಾಲ ಅಧಿಕೃತವಾಗಿ ಜನ್ಮದಿನಾಚರಣೆಯನ್ನೇ ಆಚರಿಸಿಕೊಳ್ಳದ ಸಿದ್ದರಾಮಯ್ಯ ಹೇಗೆ ಅಮೃತಮಹೋತ್ಸವದ ಪ್ರಸ್ತಾವನೆ ಒಪ್ಪಿಕೊಂಡರು? ಪ್ರಯೋಜನ ಅಥವಾ ಲಾಭಾಕಾಂಕ್ಷೆ ಇಲ್ಲದೇ ದಡ್ಡನೂ ಹೆಜ್ಜೆ ಬದಲಾಯಿಸಲಾರ. ಅಂಥದರಲ್ಲಿ ಸಿದ್ದರಾಮಯ್ಯ ತಮ್ಮ ಉತ್ಸವದ ಮೂಲಕ ರಾಜಕೀಯ ಲಾಭ ಪಡೆಯದೇ ಬಿಡುತ್ತಾರೆಯೇ?’ ಎಂದು ಬಿಜೆಪಿ ಪ್ರಶ್ನಿಸಿದೆ.

ಇದನ್ನೂ ಓದಿ: ಡಾ.ಬಿ.ಆರ್ ಅಂಬೇಡ್ಕರ್ ಪ್ರಶಸ್ತಿಗೆ ಸಿದ್ದರಾಮಯ್ಯ ಆಯ್ಕೆ

‘ಸಿದ್ದರಾಮಯ್ಯರಿಗೆ 75 ತುಂಬುವುದು ಹಾಗೂ ರಾಜ್ಯ ವಿಧಾನಸಭಾ ಚುನಾವಣೆಗೆ ಎದುರಾಗುತ್ತಿರುವುದು ಕಾಕತಾಳೀಯವಲ್ಲ. ಇದೊಂದು ವ್ಯವಸ್ಥಿತ ಪೊಲಿಟಿಕಲ್ ಟೂಲ್ ಕಿಟ್. ಮಲ್ಲಿಕಾರ್ಜುನ್ ಖರ್ಗೆ, ಡಾ.ಜಿ.ಪರಮೇಶ್ವರ್, ಡಿ.ಕೆ.ಶಿವಕುಮಾರ್, ಎಂ.ಬಿ.ಪಾಟೀಲ್ ಸೇರಿದಂತೆ ಮೂಲ ಕಾಂಗ್ರೆಸ್ಸಿಗರನ್ನು ಹೇಗೆ ಮಟ್ಟ ಹಾಕಬೇಕೆಂಬುದೇ ಇದರ ರಹಸ್ಯ ಕಾರ್ಯಸೂಚಿ’ ಎಂದು ಬಿಜೆಪಿ ಟ್ವೀಟ್ ಮಾಡಿದೆ.

‘ರಾಹುಲ್ ಗಾಂಧಿ ಸಮ್ಮುಖದಲ್ಲಿ ತಮ್ಮನ್ನು ಮುಂದಿನ ಸಿಎಂ ಎಂದು ಬಿಂಬಿಸಿಕೊಳ್ಳುವುದು ಸಿದ್ದರಾಮಯ್ಯ ಉದ್ದೇಶ. ಇದಕ್ಕಾಗಿಯೇ ರಾಹುಲ್‌ಗೆ ಅಧಿಕೃತ ಆಹ್ವಾನ ನೀಡಲಾಗಿದೆ. ಲಕ್ಷಾಂತರ ಜನ‌ರ ಮೂಲಕ ಹೌದು ಹುಲಿಯಾ ಎಂದು ಬೊಬ್ಬೆ ಹಾಕಿಸಿ, ಪಪ್ಪುವನ್ನು ಬೆಚ್ಚಿ ಬೀಳಿಸುವುದು ಸಿದ್ದು ಬಣದ ಲೆಕ್ಕಾಚಾರ! ಪಕ್ಷತ್ಯಾಗ ಸಿದ್ದರಾಮಯ್ಯಗೆ ಹೊಸದಲ್ಲ. 5 ಬಾರಿ ಪಕ್ಷ ಬಿಟ್ಟ ಖ್ಯಾತಿ ಅವರದು. ಸಿದ್ದರಾಮೋತ್ಸವದಲ್ಲಿ ಸಿಎಂ ಅಭ್ಯರ್ಥಿ ಎಂದು ಘೋಷಣೆ ಮಾಡದೇ ಇದ್ದರೆ ಸಿದ್ದರಾಮಯ್ಯ ಮತ್ತೆ ವಲಸೆ ಹೋಗುವುದು ನಿಶ್ಚಿತ. ಕಟ್ಟಿರುವ ಪಕ್ಷದಲ್ಲಿ ಸಿದ್ದರಾಮಯ್ಯ ಗೂಡು ಕಟ್ಟುತ್ತಾರೆಯೇ ವಿನಃ, ಪಕ್ಷ ಕಟ್ಟಿ ಅಭ್ಯಾಸವೇ ಇಲ್ಲ’ವೆಂದು ಬಿಜೆಪಿ ಕುಟುಕಿದೆ.

ಇದನ್ನೂ ಓದಿ: 'ಬಿಜೆಪಿ ಸರ್ಕಾರ ಪಾಲಿಸ್ಟರ್ ಧ್ವಜಗಳ ಬಳಕೆಯ ಆದೇಶವನ್ನು ತಕ್ಷಣ ಹಿಂದಕ್ಕೆ ಪಡೆಯಬೇಕು'

‘ರಾಜಕೀಯ ಚದುರಂಗದಾಟದಲ್ಲಿ ಸಿದ್ದರಾಮಯ್ಯ ನಿಸ್ಸೀಮರು. ಸಿದ್ದರಾಮೋತ್ಸವ ಏಕಾಏಕಿ ಆಯೋಜನೆಗೊಂಡಿದ್ದಲ್ಲ. ಯಾವ ದಾಳವನ್ನು ಯಾವಾಗ ಯಾರ ಮುಂದೆ ಉರುಳಿಸಬೇಕೆಂಬ ಅನುಭವ ಸಿದ್ದರಾಮಯ್ಯಗಿದೆ. ಸಿದ್ದರಾಮೋತ್ಸವದ ಮೂಲಕ ಮುಂದೆ ಡಿಕೆಶಿ, ಪರಮೇಶ್ವರ್‌ ಹಾಗೂ ಖರ್ಗೆ ಅವರನ್ನು ಮಕಾಡೆ ಮಲಗಿಸುವ ಉದ್ದೇಶವಿದೆಯೇ? ಕೆಪಿಸಿಸಿ ಕಚೇರಿಯಲ್ಲಿ ಪಿಸು ಮಾತು ಬಂದಾಗಲೇ ಡಿಕೆಶಿ ಎಚ್ಚೆತ್ತುಕೊಳ್ಳಬೇಕಿತ್ತು. ಸಿದ್ದರಾಮಯ್ಯ ಟೂಲ್ ಕಿಟ್ ಆಟ ಅದಾಗಲೇ ಶುರುವಾಗಿತ್ತು, ಅಮಾಯಕರ ತಲೆದಂಡವಾಯಿತಷ್ಟೇ. ಈಗ ಸಿದ್ದರಾಮಯ್ಯ ಮತ್ತೊಂದು ಸುತ್ತಿನ ಟೂಲ್‌ಕಿಟ್‌ ಪ್ರಹಸನ ಆರಂಭಿಸಿದ್ದಾರೆ, ಈ ಬಾರಿ ದೊಡ್ಡ ಬೇಟೆಯಾಡುವುದು ಖಚಿತ!’ವೆಂದು ಬಿಜೆಪಿ ಟೀಕಿಸಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More