Home> Karnataka
Advertisement

21 ಸಚಿವರ ರಾಜೀನಾಮೆ, ಅತೃಪ್ತರಿಗೆ ಮಣೆ: ಸಿದ್ದರಾಮಯ್ಯ ಘೋಷಣೆ

ತುರ್ತು ಸುದ್ದಿಗೋಷ್ಠಿ ನಡೆಸಿ ಪಕ್ಷದ ತೀರ್ಮಾನ ಪ್ರಕಟಿಸಿದ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಕೆ.ಸಿ. ವೇಣುಗೋಪಾಲ್.

21 ಸಚಿವರ ರಾಜೀನಾಮೆ, ಅತೃಪ್ತರಿಗೆ ಮಣೆ: ಸಿದ್ದರಾಮಯ್ಯ ಘೋಷಣೆ

ಬೆಂಗಳೂರು: ಸಮ್ಮಿಶ್ರ ಸರ್ಕಾರವನ್ನು ಉಳಿಸಿಕೊಳ್ಳಲು ಭಾರೀ ಕಸರತ್ತು ನದೆಸಿರುವ ಕಾಂಗ್ರೆಸ್ ನಾಯಕರು ಇದೀಗ ಹಾಲಿ ಸಚಿವರ ರಾಜೀನಾಮೆ ಪಡೆದು, ಅತೃಪ್ತ ಶಾಸಕರಿಗೆ ಮಂತ್ರಿ ಸ್ಥಾನ ನೀಡಲು ಮುಂದಾಗಿದ್ದಾರೆ.

ಈ ಹಿನ್ನೆಲೆಯಲ್ಲಿ ತುರ್ತು ಸುದ್ದಿಗೋಷ್ಠಿ ನಡೆಸಿ ಪಕ್ಷದ ತೀರ್ಮಾನ ಪ್ರಕಟಿಸಿದ ಸಮನ್ವಯ ಸಮಿತಿ ಅಧ್ಯಕ್ಷ  ಸಿದ್ದರಾಮಯ್ಯ ಮತ್ತು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ್, ಕಳೆದ ಐದು ವರ್ಷಗಳಲ್ಲಿ ಬಿಜೆಪಿಯ ಪ್ರಜಾಪ್ರಭತ್ವ ವಿರೋಧಿ ಕೆಲಸಗಳನ್ನು ನಾವು ನೋಡಿಕೊಂಡು ಬಂದಿದ್ದೇವೆ. ಅಧಿಕಾರದಲ್ಲಿ ಇಲ್ಲದ ರಾಜ್ಯಗಳಲ್ಲಿ ಸರ್ಕಾರವನ್ನು ಅಸ್ಥಿರಗೊಳಿಸುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ ಎಂದು ಆರೋಪ ಮಾಡಿದರು.

ಬಿಜೆಪಿ  ಐಟಿ, ಇಡಿಯನ್ನು ದುರ್ಬಳಕೆ ಮಾಡಿಕೊಂಡು ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರನ್ನು ಹೆದರಿಸುತ್ತಿದೆ. ಅದರ ಕುತಂತ್ರವನ್ನು ತಡೆಗಟ್ಟಲು ಪಕ್ಷಕ್ಕೆ ನಿಷ್ಠಾವಂತರಾಗಿ ಕಾರ್ಯನಿರ್ವಹಿಸುತ್ತಿರುವ 21 ಸಚಿವರು ಸ್ವಇಚ್ಚೆಯಿಂದ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ಸಿದ್ದರಾಮಯ್ಯ ತಿಳಿಸಿದರು. 

ಪಕ್ಷದ ಕೆಲವು ಶಾಸಕರು ಸಚಿವ ಸ್ಥಾನ ಸಿಗದ ಕಾರಣ ಮುಂಬೈನಲ್ಲಿ ವಾಸ್ತವ್ಯ ಹೂಡಿದ್ದಾರೆ. ಅವರಿಗೆ ಸಚಿವ ಸ್ಥಾನ ನೀಡುವ ಮೂಲಕ ಮನವೊಲಿಸಲಾಗುವುದು. ಯಾವುದೇ ಕಾರಣಕ್ಕೂ ಬಿಜೆಪಿಯ ಆಪರೇಷನ್ ಕಮಲ ಯಶಸ್ವಿಯಾಗಲು ಬಿಡುವುದಿಲ್ಲ ಎಂದರು.

ಮೈತ್ರಿ ಸರ್ಕಾರ ರಚನೆಯಾದಾಗಿನಿಂದಲೂ ಬಿಜೆಪಿ ಆಪರೇಷನ್ ಕಮಲದ ಮೂಲಕ ರಾಜ್ಯ ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿದೆ. ಈ ಹಿಂದೆ ಕೂಡ 2008ರಲ್ಲಿ ಬಿ.ಎಸ್. ಯಡಿಯೂರಪ್ಪನವರು ಹೀಗೆ ಮಾಡಿದ್ದರು ಎಂದು ಬಿಎಸ್ ವೈ ವಿರುದ್ಧ ಕಿಡಿಕಾರಿದ ಸಿದ್ದರಾಮಯ್ಯ, ಅತೃಪ್ತ ಶಾಸಕರಿಗೆ ವಿಶೇಷ ವಿಮಾನ ಆಯೋಜನೆ ಮಾಡುವವರು  ಯಾರು ಎಂದು ಪ್ರಶ್ನಿಸಿದರರಲ್ಲದೆ, ಇದರ ಹಿಂದೆ ಬಿಜೆಪಿಯ ಕೇಂದ್ರ ನಾಯಕರ ಕೈವಾಡವಿದೆ ಎಂದು ಆರೋಪಿಸಿದರು.

Read More