Home> India
Advertisement

Weather Update: ಈ ರಾಜ್ಯಗಳಲ್ಲಿ ಇಂದಿನಿಂದ 2 ದಿನಗಳ ಕಾಲ ಮಳೆ ಅಬ್ಬರ! IMD ಎಚ್ಚರಿಕೆ

ಧಾರಾಕಾರ ಮಳೆಯಿಂದಾಗಿ ಹಲವು ರಾಜ್ಯಗಳಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ. ಮುಂದಿನ 48 ಗಂಟೆಗಳಲ್ಲಿ ಹಲವು ರಾಜ್ಯಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆಯು ಎಚ್ಚರಿಕೆ ನೀಡಿದೆ.

Weather Update: ಈ ರಾಜ್ಯಗಳಲ್ಲಿ ಇಂದಿನಿಂದ 2 ದಿನಗಳ ಕಾಲ ಮಳೆ ಅಬ್ಬರ! IMD ಎಚ್ಚರಿಕೆ

ನವದೆಹಲಿ: ಮಾನ್ಸೂನ್‌ನ 2ನೇ ಹಂತದಲ್ಲಿ ದೇಶದಾದ್ಯಂತ ಹಲವು ರಾಜ್ಯಗಳಲ್ಲಿ ಭಾರೀ ಮಳೆಯಾಗುತ್ತಿದೆ. ನಿರೀಕ್ಷೆಗಿಂತ ಹೆಚ್ಚು ಮಳೆಯಿಂದಾಗಿ ಒಡಿಶಾ, ಮಧ್ಯಪ್ರದೇಶ, ರಾಜಸ್ಥಾನದಲ್ಲಿ ಜನರ ಸಂಕಷ್ಟ ಹೆಚ್ಚಾಗಿದೆ. ಭಾರತೀಯ ಹವಾಮಾನ ಇಲಾಖೆ (IMD) ಮುಂದಿನ ಕೆಲವು ದಿನಗಳ ಕಾಲ ಭಾರೀ ಮಳೆಯ ಮುನ್ಸೂಚನೆ ಇರುವ ರಾಜ್ಯಗಳಿಗೆ ಎಚ್ಚರಿಕೆ ನೀಡಿದೆ.

ಹವಾಮಾನ ಇಲಾಖೆ ಮುನ್ಸೂಚನೆ

ಬಂಗಾಳಕೊಲ್ಲಿಯ ಉತ್ತರ ಭಾಗದಲ್ಲಿ ಚಂಡಮಾರುತದ ಪರಿಚಲನೆ ಪ್ರದೇಶ ರಚನೆಯಿಂದ ಪಶ್ಚಿಮ ಬಂಗಾಳದ ಗಂಗಾನದಿ ಪ್ರದೇಶದಲ್ಲಿ ಬುಧವಾರ ಭಾರೀ ಮಳೆಯಾಗಿದೆ. ಈ ಹವಾಮಾನ ವ್ಯವಸ್ಥೆಯಿಂದ ಕೋಲ್ಕತ್ತಾ ಸೇರಿದಂತೆ ದಕ್ಷಿಣ ಬಂಗಾಳದ ಜಿಲ್ಲೆಗಳಲ್ಲಿ ಮಂಗಳವಾರದಿಂದ ಧಾರಾಕಾರ ಮಳೆಯಾಗುತ್ತಿದೆ. ಬಂಗಾಳಕೊಲ್ಲಿಯ ಉತ್ತರ ಭಾಗದಲ್ಲಿ ಚಂಡಮಾರುತದ ಕಾರಣ ಗಂಗಾನದಿ ತುಂಬಿ ಹರಿಯುತ್ತಿದೆ. ಪಶ್ಚಿಮ ಬಂಗಾಳದಲ್ಲಿ ಗುರುವಾರ ಮಧ್ಯಾಹ್ನದವರೆಗೆ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತನ್ನ ಮುನ್ಸೂಚನೆಯಲ್ಲಿ ತಿಳಿಸಿದೆ.

ಮಧ್ಯಪ್ರದೇಶದಲ್ಲಿ ಸಂಕಷ್ಟ ಪರಿಸ್ಥಿತಿ

ದೇಶದ ಹೃದಯ ಭಾಗ ಎಂದೇ ಪರಿಗಣಿಸಲ್ಪಟ್ಟಿರುವ ಮಧ್ಯಪ್ರದೇಶದ ನರ್ಮದಾಪುರಂ, ವಿದಿಶಾ ಮತ್ತು ಗುಣಾ ಜಿಲ್ಲೆಗಳು ಪ್ರವಾಹದ ಹಿಡಿತದಲ್ಲಿವೆ. ರಾಜಸ್ಥಾನದ ಗಡಿಭಾಗದ ನೀಮುಚ್, ಮಂದಸೌರ್ ಮತ್ತು ರತ್ಲಾಂನಲ್ಲಿ ಕಡಿಮೆ ತೀವ್ರತೆಯೊಂದಿಗೆ ಸಾಧಾರಣದಿಂದ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಐಎಂಡಿ ತಿಳಿಸಿದೆ. ಮುಂದಿನ 3 ದಿನಗಳ ಕಾಲ ರಾಜ್ಯದ ಉಳಿದ ಭಾಗಗಳಲ್ಲಿ ಅಲ್ಪಸ್ವಲ್ಪ ಮಳೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಇದನ್ನೂ ಓದಿ: ಪ್ರವಾದಿ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ಬಿಜೆಪಿ ಶಾಸಕ: ಆಕ್ರೋಶ ಹೊರಹಾಕಿದ ಓವೈಸಿ

ದೆಹಲಿಯಲ್ಲಿ ಮಳೆ ಯಾವಾಗ?

ಆಗಸ್ಟ್ ಅಂತ್ಯದವರೆಗೆ ದೆಹಲಿಯಲ್ಲಿ ಉತ್ತಮ ಮಳೆಯಾಗುವ ಸಾಧ್ಯತೆ ಇಲ್ಲವೆಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. IMD ಪ್ರಕಾರ, ಮುಂದಿನ 5-6 ದಿನಗಳಲ್ಲಿ ದೆಹಲಿಯಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ಮತ್ತು ಹಗುರ ಮಳೆಯಾಗುವ ಸಾಧ್ಯತೆಯಿದೆ. ಬಂಗಾಳಕೊಲ್ಲಿಯ ಉತ್ತರ ಭಾಗದಲ್ಲಿ ಕಡಿಮೆ ಒತ್ತಡದ ಪ್ರದೇಶ ನಿರ್ಮಾಣವಾಗುತ್ತಿದೆ. ಇದು ಜಾರ್ಖಂಡ್, ಛತ್ತೀಸ್‌ಗಢ ಮತ್ತು ಉತ್ತರ ಪ್ರದೇಶದ ಮೇಲೆ ವಾಯುವ್ಯ ದಿಕ್ಕಿನಲ್ಲಿ ಚಲಿಸುವ ಸಾಧ್ಯತೆಯಿದೆ. ಇದರ ಪರಿಣಾಮದಿಂದ ದೆಹಲಿ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಳೆಯಾಗುವ ಸಾಧ್ಯತೆಯಿದೆ. ಸೆಪ್ಟೆಂಬರ್ ಮೊದಲ 15 ದಿನಗಳಲ್ಲಿ ಸ್ವಲ್ಪ ಮಳೆಯಾಗುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.

ರಾಜಸ್ಥಾನದಲ್ಲಿ ನದಿಯ ನೀರಿನ ಮಟ್ಟ ಏರಿಕೆ  

ರಾಜಸ್ಥಾನದಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದ ನದಿಗಳಲ್ಲಿ ನೀರಿನ ಮಟ್ಟ ಏರಿಕೆಯಾಗುತ್ತಿದೆ. ಪರಿಣಾಮ ಕೋಟಾ ಜಿಲ್ಲೆಯ ಹಲವು ಪ್ರದೇಶಗಳಲ್ಲಿ ಪ್ರವಾಹದಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಜಲಾವರ್ ಮತ್ತು ಧೋಲ್ಪುರ್ ಜಿಲ್ಲೆಗಳಲ್ಲಿ ರಕ್ಷಣಾ ಕಾರ್ಯಾಚರಣೆಗೆ ಸೇನೆಯನ್ನು ಕರೆಸಲಾಗಿದೆ. ಭಾರೀ ಮಳೆಯಿಂದಾಗಿ ಬರಾನ್ ಮತ್ತು ಬುಂದಿ ಜಿಲ್ಲೆಗಳಲ್ಲಿ ಸಂಭವಿಸಿದ ಪ್ರವಾಹದಲ್ಲಿ ಇಬ್ಬರು ಕೊಚ್ಚಿಕೊಂಡು ಹೋಗಿದ್ದು, ಇಬ್ಬರು ನಾಪತ್ತೆಯಾಗಿದ್ದಾರೆ. ಈ ಜಿಲ್ಲೆಗಳಲ್ಲಿ ಸುಮಾರು 1100 ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.

ಒಡಿಶಾದಲ್ಲಿ 6.4 ಲಕ್ಷ ಜನರಿಗೆ ಸಂಕಷ್ಟ!

ಒಡಿಶಾದಲ್ಲಿ ಇತ್ತೀಚಿನ ದಿನಗಳಲ್ಲಿ ಪ್ರವಾಹಕ್ಕೆ ಕಾರಣವಾದ ಹೆಚ್ಚಿನ ನದಿಗಳ ನೀರಿನ ಮಟ್ಟವು ಬುಧವಾರ ಅಪಾಯದ ಮಟ್ಟಕ್ಕಿಂತ ಕಡಿಮೆಯಾಗಿದೆ. ಆದರೆ 902 ಹಳ್ಳಿಗಳಲ್ಲಿ 6.4 ಲಕ್ಷ ಜನರು ಇನ್ನೂ ಪ್ರವಾಹದಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂದು ಕೂಡ ಒಡಿಶಾದ ಕೆಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ನಿರೀಕ್ಷೆ ಇದೆ.

ಇದನ್ನೂ ಓದಿ: ರಾಜಾಗೆ ‘ಸಜಾ’: ಪ್ರವಾದಿ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ಶಾಸಕ ಬಿಜೆಪಿಯಿಂದ ಅಮಾನತು!

ಕರ್ನಾಟಕದಲ್ಲಿಯೂ ಮಳೆಯ ಎಚ್ಚರಿಕೆ

ಸಿಲಿಕಾನ್ ಸಿಟಿ ಬೆಂಗಳೂರು ಸೇರಿದಂತೆ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಭಾರೀ ಮಳೆಯ ಎಚ್ಚರಿಕೆ ನೀಡಲಾಗಿದೆ. ಈಗಾಗಲೇ ಮಳೆಯಿಂದಾಗಿ ಬಹುತೇಕ ನದಿಗಳು ಭರ್ತಿಯಾಗಿದ್ದು, ಮತ್ತೆ ಮಳೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Read More