Home> India
Advertisement

ಪೌರತ್ವ ತಿದ್ದುಪಡಿ ಮಸೂದೆ ವಿರುದ್ಧ ವಿದ್ಯಾರ್ಥಿ ಸಂಘಟನೆಗಳಿಂದ ಬಂದ್‌ಗೆ ಕರೆ

ಈ ಮಸೂದೆಯನ್ನು ವಿರೋಧಿಸಿ ಅಸ್ಸಾಂನಲ್ಲಿ ಹಲವಾರು ವಿದ್ಯಾರ್ಥಿ ಸಂಘಟನೆಗಳು ಇಂದು ರಾಜ್ಯವ್ಯಾಪಿ ಬಂದ್ ಘೋಷಿಸಿವೆ.

ಪೌರತ್ವ ತಿದ್ದುಪಡಿ ಮಸೂದೆ ವಿರುದ್ಧ ವಿದ್ಯಾರ್ಥಿ ಸಂಘಟನೆಗಳಿಂದ  ಬಂದ್‌ಗೆ ಕರೆ

ನವದೆಹಲಿ:  ಲೋಕಸಭೆಯಲ್ಲಿ ಸೋಮವಾರ ಪೌರತ್ವ ತಿದ್ದುಪಡಿ ಮಸೂದೆ (Citizenship Amendment Bill) ಅಂಗೀಕಾರಗೊಂಡಿದೆ. ಈಶಾನ್ಯ ರಾಜ್ಯಗಳಲ್ಲಿ ಈ ಮಸೂದೆ ಬಗ್ಗೆ ಈಗಾಗಲೇ ವಿರೋಧ ಕೇಳಿಬಂದಿತ್ತು. ಮಸೂದೆಯಲ್ಲಿ ಈಶಾನ್ಯ ರಾಜ್ಯಗಳ ಆತಂಕಗಳನ್ನು ಪರಿಹರಿಸಲು ಸರ್ಕಾರ ಪ್ರಯತ್ನಿಸಿದೆ ಎಂದು ಸರ್ಕಾರ ತಿಳಿಸಿದೆ. ಆದರೆ ಇದರ ಹೊರತಾಗಿಯೂ, ಈ ಮಸೂದೆಯ ವಿರುದ್ಧ ಹಲವಾರು ವಿದ್ಯಾರ್ಥಿ ಸಂಘಟನೆಗಳು ಇಂದು ಅಸ್ಸಾಂನಲ್ಲಿ ರಾಜ್ಯವ್ಯಾಪಿ  ಬಂದ್‌ಗೆ ಕರೆ ನೀಡಿವೆ. ಈಶಾನ್ಯ ವಿದ್ಯಾರ್ಥಿ ಸಂಘ (NESO) ಮತ್ತು ಅಖಿಲ ಭಾರತ ವಿದ್ಯಾರ್ಥಿ ಸಂಘ (AASU) ಇಂದು ಅಸ್ಸಾಂನಲ್ಲಿ 12 ಗಂಟೆಗಳ ಬಂದ್ ಅನ್ನು ಪ್ರಕಟಿಸಿದೆ. ಈ ಕಾರಣದಿಂದಾಗಿ, ಇಂದು ಬೆಳಗ್ಗೆ ಗುವಾಹಟಿಯ ರಸ್ತೆಗಳಲ್ಲಿ ಮೌನ ಆವರಿಸಿತ್ತು. ಅಂಗಡಿ ಮುಂಗಟ್ಟುಗಳು ಮುಚ್ಚಲ್ಪಟ್ಟಿದ್ದವು. ಪ್ರತಿಭಟನಾಕಾರರು ಅಸ್ಸಾಂನ ಅನೇಕ ಸ್ಥಳಗಳಲ್ಲಿ ಪ್ರತಿಭಟನೆ ನಡೆಸಿದರು. ದಿಬ್ರುಗಡ ಮತ್ತು ಜೋರ್ಹತ್‌ನಲ್ಲಿ ಪ್ರತಿಭಟನಾಕಾರರು ಟೈರ್‌ಗಳಿಗೆ ಬೆಂಕಿ ಹಚ್ಚಿದ್ದಾರೆ.

ಕೇಂದ್ರ ಸರ್ಕಾರ ಲೋಕಸಭೆಯಲ್ಲಿ ಸೋಮವಾರ ಪೌರತ್ವ ತಿದ್ದುಪಡಿ ಮಸೂದೆ 2019(Citizenship Amendment Bill 2019) ಅನ್ನು ಮಂಡಿಸಿತು. ದೀರ್ಘ ಚರ್ಚೆಯ ಬಳಿಕ ಈ ಮಸೂದೆ ಲೋಕಸಭೆಯಲ್ಲಿ ಅಂಗೀಕಾರಗೊಂಡಿದೆ. ಮಸೂದೆ ಕುರಿತಂತೆ ಸೋಮವಾರ ವಿರೋಧ ಪಕ್ಷಗಳು ಎತ್ತಿದ ಪ್ರಶ್ನೆಗಳಿಗೆ ಗೃಹ ಸಚಿವ ಅಮಿತ್ ಶಾ(Amit Shah) ಉತ್ತರಿಸಿದರು. ಮಸೂದೆ ಬಗೆಗಿನ ಪ್ರಶ್ನೆಗಳಿಗೆ ಗೃಹಸಚಿವರಿಂದ ಸ್ಪಷ್ಟನೆ ಸಿಕ್ಕ ಬಳಿಕ ಲೋಕಸಭಾ ಸ್ಪೀಕರ್ ಮತಕ್ಕೆ ಹಾಕುವ ಮೂಲಕ ಮಸೂದೆಯನ್ನು ಅಂಗೀಕರಿಸಿದರು.

ಲೋಕಸಭೆಯಲ್ಲಿ ಈ ಮಸೂದೆಯನ್ನು ಮಂಡಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, ಈ ಮಸೂದೆ ದೇಶದ ಅಲ್ಪಸಂಖ್ಯಾತ ವಿರೋಧ ಮಸೂದೆ ಅಲ್ಲ. ಸ್ವಾತಂತ್ರ್ಯ ನಂತರದ ದಿನಗಳಲ್ಲಿ ಧರ್ಮಗಳ ಆಧಾರದ ಮೇಲೆ ದೇಶ ವಿಭಜಿಸದೆ ಇದ್ದಿದ್ದರೆ ಈ ಮಸೂದೆಯ ಅವಶ್ಯಕತೆಯೇ ಇರಲಿಲ್ಲ ಎಂದು ಹೇಳಿದ್ದಾರೆ. ಪ್ರಸ್ತಾವಿತ ಕಾನೂನು ಸಂವಿಧಾನದ ಯಾವುದೇ ಅನುಚ್ಛೇದವನ್ನು ಉಲ್ಲಂಘಿಸುವುದಿಲ್ಲ ಎಂದು ಹೇಳಿದ ಗೃಹ ಸಚಿವರು, "ಸಮಂಜಸವಾದ ವರ್ಗೀಕರಣ"ವನ್ನು ಮಾಡಿ, ಇದು ಭಾರತದ ಅಲ್ಪಸಂಖ್ಯಾತರ ವಿರುದ್ಧ "ಶೇಕಡಾ 0.001 ಸಹ ಇಲ್ಲ" ಎಂದು ಒತ್ತಿ ಹೇಳಿದ್ದಾರೆ. ಈ ವೇಳೆ ಸದನದಲ್ಲಿ ತೀವ್ರ ಕೋಲಾಹಲವೇ ಸೃಷ್ಟಿಯಾಗಿದ್ದು, ಮಸೂದೆ ಪರವಾಗಿ 293 ಮತಗಳು ಬಿದ್ದರೆ, ಮಸೂದೆಗೆ ವಿರುದ್ಧವಾಗಿ 82 ಮತಗಳು ಬಿದ್ದಿವೆ. ವಿಶೇಷವೆಂದರೆ ಶಿವಸೇನೆ ಕೂಡ ಈ ಮಸೂದೆಯ ಪರವಾಗಿ ಬಿಜೆಪಿಯ ಹಳೆಯ ಸ್ನೇಹಿತನನ್ನು ಬೆಂಬಲಿಸಿತು.

ಮಸೂದೆ ಮಂಡನೆಯಾಗುವ ವೇಳೆ ಗೃಹ ಸಚಿವ ಅಮಿತ್ ಶಾ ಹಾಗೂ ಪ್ರತಿಪಕ್ಷಗಳ ನಡುವೆ ನಡೆದ ತೀವ್ರ ಮಾತಿನ ಚಕಮಕಿಗೆ ಲೋಕಸಭೆ ಸಾಕ್ಷಿಯಾಗಿದೆ. ಮಸೂದೆಯನ್ನು 'ದೇಶದ ಅಲ್ಪಸಂಖ್ಯಾತರ ಮೇಲಿನ ಶಾಸನವಲ್ಲದೆ ಬೇರೇನಲ್ಲ' ಎಂದು ಕರೆದ ಕಾಂಗ್ರೆಸ್ ನಾಯಕ ಅಧಿರ್ ರಂಜನ್ ಚೌಧರಿ, " ಇದು ಸಂವಿಧಾನದ ಮುನ್ನುಡಿಗೆ ವಿರುದ್ಧವಾಗಿದ್ದು, ಸಂವಿಧಾನದ ಮೂಲಭೂತ ಸಿದ್ಧಾಂತಗಳನ್ನು ಉಲ್ಲಂಘಿಸುತ್ತದೆ" ಎಂದು ಆರೋಪಿಸಿದ್ದಾರೆ.

ಅಮಿತ್ ಶಾರನ್ನು ಹೊಗಳಿದ ಪ್ರಧಾನಿ ನರೇಂದ್ರ ಮೋದಿ :
ಪೌರತ್ವ ತಿದ್ದುಪಡಿ ಮಸೂದೆ ಕುರಿತಂತೆ ಗೃಹ ಸಚಿವ ಅಮಿತ್ ಶಾ ಅವರನ್ನು ಪ್ರಧಾನಿ ನರೇಂದ್ರ ಮೋದಿ(Narendra Modi) ಶ್ಲಾಘಿಸಿದ್ದಾರೆ. “ಸಮೃದ್ಧ ಮತ್ತು ವ್ಯಾಪಕ ಚರ್ಚೆಯ ನಂತರ ಲೋಕಸಭೆ 2019 ರ ಪೌರತ್ವ (ತಿದ್ದುಪಡಿ) ಮಸೂದೆಯನ್ನು ಅಂಗೀಕರಿಸಿದೆ ಎಂದು ಖುಷಿಯಾಗಿದೆ. ಮಸೂದೆಯನ್ನು ಬೆಂಬಲಿಸಿದ ಎಲ್ಲ ಸಂಸದರು ಮತ್ತು ಪಕ್ಷಗಳಿಗೆ ನಾನು ಧನ್ಯವಾದ ಅರ್ಪಿಸುತ್ತೇನೆ. ಈ ಮಸೂದೆ ಭಾರತದ ಹಳೆಯ ನೀತಿಗಳು ಮತ್ತು ಮಾನವೀಯ ಮೌಲ್ಯಗಳ ಮೇಲಿನ ನಂಬಿಕೆಗೆ ಅನುಗುಣವಾಗಿದೆ'' ಎಂದು ಪ್ರಧಾನಿ ಮೋದಿ ತಮ್ಮ ಟ್ವಿಟ್ಟರ್ ಹ್ಯಾಂಡಲ್‌ನಲ್ಲಿ ಬರೆದಿದ್ದಾರೆ.

ಮತ್ತೊಂದು ಟ್ವೀಟ್‌ನಲ್ಲಿ, "2019 ರ ಪೌರತ್ವ (ತಿದ್ದುಪಡಿ) ಮಸೂದೆಯ ಎಲ್ಲಾ ಅಂಶಗಳನ್ನು ಸ್ಪಷ್ಟವಾಗಿ ವಿವರಿಸಿದ್ದಕ್ಕಾಗಿ ಗೃಹ ಸಚಿವ ಅಮಿತ್ ಷಾ ಅವರನ್ನು  ನಾನು ಶ್ಲಾಘಿಸಲು ಬಯಸುತ್ತೇನೆ. ಲೋಕಸಭೆಯಲ್ಲಿ ಚರ್ಚೆಯ ಸಂದರ್ಭದಲ್ಲಿ ಸಂಬಂಧಪಟ್ಟ ಸಂಸದರು ಎತ್ತಿದ ವಿವಿಧ ಅಂಶಗಳಿಗೆ ಅವರು ವಿವರವಾದ ಉತ್ತರ ನೀಡಿದರು" ಎಂದವರು ಉಲ್ಲೇಖಿಸಿದ್ದಾರೆ.
 

Read More