Home> India
Advertisement

ಪರಾಕ್ರಮ ದಿನದಂದು ನೇತಾಜಿ ಸುಭಾಷ್ ಚಂದ್ರ ಬೋಸ್ ಸ್ಮರಣೆ

Parakram Diwas 2023: ಭಾರತದ ಸ್ವಾತಂತ್ರ್ಯ ಚಳುವಳಿಯನ್ನು ಹತ್ತಿಕ್ಕಲು ಬ್ರಿಟಿಷರ ದಮನಕಾರಿ ನೀತಿ ಹೆಚ್ಚಾಗುತ್ತಿದ್ದಂತೆ ಸುಭಾಷ್ ಚಂದ್ರ ಬೋಸ್ ಬ್ರಿಟಿಷರ ವಿರುದ್ಧ ಮಿಲಿಟರಿ ಕಾರ್ಯಾಚರಣೆಯೇ ಸರಿ ಎಂಬ ಅಭಿಪ್ರಾಯ ಹೊಂದಿದರು. ಅವರು ಶಸ್ತ್ರ ಸಜ್ಜಿತ ಹೋರಾಟದಿಂದ ಮಾತ್ರವೇ ಭಾರತ ಬ್ರಿಟಿಷರಿಂದ ಮುಕ್ತಿ ಹೊಂದಲು ಸಾಧ್ಯ ಎಂದು ದೃಢವಾಗಿ ನಂಬಿದ್ದರು.

ಪರಾಕ್ರಮ ದಿನದಂದು ನೇತಾಜಿ ಸುಭಾಷ್ ಚಂದ್ರ ಬೋಸ್ ಸ್ಮರಣೆ

Parakram Diwas 2023: ನೇತಾಜಿ ಎಂದೇ ಪ್ರಸಿದ್ಧರಾದ ಸುಭಾಷ್ ಚಂದ್ರ ಬೋಸ್ ಅವರು ಭಾರತದ ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ವಿರುದ್ಧ ಹೋರಾಡಿದ ಪ್ರಮುಖ ಕ್ರಾಂತಿಕಾರಿ ಹೋರಾಟಗಾರರಾಗಿದ್ದರು. ಅವರು ಜನವರಿ 23, 1897ರಂದು ಒರಿಸ್ಸಾದ ಕಟಕ್‌ನಲ್ಲಿ ಜನಿಸಿದರು.

ಸುಭಾಷ್ ಚಂದ್ರ ಬೋಸರ ಶಿಕ್ಷಣ ಇಂಗ್ಲೆಂಡ್‌ನಲ್ಲಿ ನಡೆಯಿತು. ಅಲ್ಲಿ ಅವರು ಕೇಂಬ್ರಿಜ್‌ ವಿಶ್ವವಿದ್ಯಾನಿಲಯದಲ್ಲಿ ವ್ಯಾಸಂಗ ನಡೆಸಿ, ಇಂಡಿಯನ್ ಸಿವಿಲ್ ಸರ್ವಿಸಸ್ ಪರೀಕ್ಷೆಯಲ್ಲಿ ಉತ್ತೀರ್ಣರಾದರು. ಆದರೆ ಅವರು ಆ‌ ಉನ್ನತ ಹುದ್ದೆಯನ್ನು ತಿರಸ್ಕರಿಸಿ, ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಲು ಭಾರತಕ್ಕೆ ಮರಳಿದರು.

ಸುಭಾಷ್ ಚಂದ್ರ ಬೋಸ್ ತನ್ನ ರಾಜಕೀಯ ಜೀವನದ ಆರಂಭದಲ್ಲಿ ಅಹಿಂಸೆ ಮತ್ತು ಶಾಂತಿಯುತ ಪ್ರತಿಭಟನೆಗಳ ಮೇಲೆ ಅಪಾರ ನಂಬಿಕೆ ಇಟ್ಟಿದ್ದರು. ಆದರೆ ಭಾರತದ ಸ್ವಾತಂತ್ರ್ಯ ಚಳುವಳಿಯನ್ನು ಹತ್ತಿಕ್ಕಲು ಬ್ರಿಟಿಷರ ದಮನಕಾರಿ ನೀತಿ ಹೆಚ್ಚಾಗುತ್ತಿದ್ದಂತೆ ಸುಭಾಷ್ ಚಂದ್ರ ಬೋಸ್ ಬ್ರಿಟಿಷರ ವಿರುದ್ಧ ಮಿಲಿಟರಿ ಕಾರ್ಯಾಚರಣೆಯೇ ಸರಿ ಎಂಬ ಅಭಿಪ್ರಾಯ ಹೊಂದಿದರು. ಅವರು ಶಸ್ತ್ರ ಸಜ್ಜಿತ ಹೋರಾಟದಿಂದ ಮಾತ್ರವೇ ಭಾರತ ಬ್ರಿಟಿಷರಿಂದ ಮುಕ್ತಿ ಹೊಂದಲು ಸಾಧ್ಯ ಎಂದು ದೃಢವಾಗಿ ನಂಬಿದ್ದರು.

1920ರ ದಶಕದ ಕೊನೆಯಲ್ಲಿ ಬೋಸ್ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ನಾಯಕರಾದರು. ಆಗ ಕಾಂಗ್ರೆಸ್ ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿದ್ದ ಪ್ರಮುಖ ರಾಜಕೀಯ ಪಕ್ಷವಾಗಿತ್ತು. ಸುಭಾಷರು ಕ್ಷಿಪ್ರವಾಗಿ ಪಕ್ಷದಲ್ಲಿ ಹಂತ ಹಂತವಾಗಿ ಮೇಲೆ ಬೆಳೆಯುತ್ತಾ ಸಾಗಿದರು. 1938ರಲ್ಲಿ ಅವರು ಕಾಂಗ್ರೆಸ್ ಅಧ್ಯಕ್ಷರಾಗಿ ಚುನಾಯಿತರಾದರು. ಆದರೆ ಸ್ವಾತಂತ್ರ್ಯಕ್ಕಾಗಿ ಮಿಲಿಟರಿ ಹೋರಾಟ ನಡೆಸಬೇಕೆಂಬ ಅವರ ವಾದ ಕಾಂಗ್ರೆಸ್ ಒಳಗೇ ಭಿನ್ನಾಭಿಪ್ರಾಯ ಮೂಡಿಸಿತು. ಅವರು ಮರುವರ್ಷವೇ ಒತ್ತಾಯಪೂರ್ವಕವಾಗಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವಂತಾಯಿತು.

ಆದರೆ ಇದಾವುದರಿಂದಲೂ ವಿಚಲಿತರಾಗದ ಸುಭಾಷ್ ಚಂದ್ರ ಬೋಸ್ ಭಾರತದ ಸ್ವಾತಂತ್ರ್ಯಕ್ಕಾಗಿ ತನ್ನ ಪ್ರಯತ್ನ ಮುಂದುವರಿಸಿದರು. ಅವರು ಫಾರ್ವರ್ಡ್ ಬ್ಲಾಕ್ ಎಂಬ ಸಂಘಟನೆಯನ್ನು ಅದಕ್ಕಾಗಿ ಸ್ಥಾಪಿಸಿದರು. ಫಾರ್ವರ್ಡ್‌ ಬ್ಲಾಕ್ ಭಾರತದಲ್ಲಿದ್ದ ಎಲ್ಲ ಬ್ರಿಟಿಷ್ ವಿರೋಧಿ ಪಡೆಗಳನ್ನು ಒಂದುಗೂಡಿಸುವ ಉದ್ದೇಶ ಹೊಂದಿತ್ತು. ಅದರೊಡನೆ ಸುಭಾಷರು ಬ್ರಿಟಿಷರ ವಿರುದ್ಧ ಹೋರಾಡಲು ಇಂಡಿಯನ್ ನ್ಯಾಷನಲ್ ಆರ್ಮಿ (ಎನ್ಐಎ) ಎಂದೇ ಹೆಸರಾದ ಒಂದು ಮಿಲಿಟರಿ ಪಡೆಯನ್ನು ನಿರ್ಮಿಸಲಾರಂಭಿಸಿದರು.

1941ರಲ್ಲಿ, ಸುಭಾಷ್ ಜರ್ಮನಿಗೆ ತೆರಳಿ, ಅಡಾಲ್ಫ್ ಹಿಟ್ಲರ್ ಮತ್ತು ಇತರ ಉನ್ನತ ಮಟ್ಟದ ಅಧಿಕಾರಿಗಳನ್ನು ಭೇಟಿಯಾದರು. ಅಲ್ಲಿ ಭಾರತದ ಸ್ವಾತಂತ್ರ್ಯಕ್ಕಾಗಿ ಜರ್ಮನಿಯ ಸಹಕಾರ ಕೇಳಿದ ಸುಭಾಷರಿಗೆ ಜರ್ಮನಿಯಿಂದ ಹಣಕಾಸಿನ ಸಹಾಯ ಮತ್ತು ಮಿಲಿಟರಿ ಸಹಕಾರ ದೊರೆಯಿತು. ಅವರು ಬರ್ಲಿನ್‌ನಲ್ಲಿ ಫ್ರೀ ಇಂಡಿಯಾ ಸೆಂಟರ್ ಮತ್ತು ಇಂಡಿಯನ್ ಲೀಜನ್ ಸ್ಥಾಪಿಸಿದರು. ಇದು ಜರ್ಮನ್ ಸೇನೆಯ ಜೊತೆಗೂಡಿ ಹೋರಾಡುತ್ತಿದ್ದ ಭಾರತೀಯ ಯೋಧರ ಒಂದು ಪಡೆಯಾಗಿತ್ತು.

1942ರಲ್ಲಿ ಅವರು ಜರ್ಮನಿಯಿಂದ ಹೊರಟು, ಜಪಾನ್‌ಗೆ ತೆರಳಿದರು. ಅಲ್ಲಿ ಅವರು ಗಡಿಯಾಚೆಗಿನ ಭಾರತ ಸರ್ಕಾರವನ್ನು ಸ್ಥಾಪಿಸಿದರು. ಅದನ್ನು 'ಮುಕ್ತ ಭಾರತದ ತಾತ್ಕಾಲಿಕ ಸರ್ಕಾರ' ಎಂದು ಕರೆದರು. ಅವರು ಜಪಾನಿನಲ್ಲಿ ಐಎನ್ಎಯ ಮರುಸ್ಥಾಪನೆಗಾಗಿ ಪ್ರಯತ್ನ ನಡೆಸಿ, ಅದರ ಸೈನಿಕರಿಗೆ ತರಬೇತಿ ನೀಡಿದರು.

1944ರಲ್ಲಿ ಸುಭಾಷ್ ಚಂದ್ರ ಬೋಸ್ ಮತ್ತು ಐಎನ್ಎ ಬ್ರಿಟಿಷ್ ಆಡಳಿತದ ಭಾರತದ ಮೇಲೆ ದಾಳಿ ನಡೆಸಿದರು. ಆದರೆ ಆ ದಾಳಿ ವಿಫಲವಾಯಿತು. ಐಎನ್ಎ ಸೋಲು ಅನುಭವಿಸಿತು. ಸುಭಾಷ್ ಚಂದ್ರ ಬೋಸ್ ಅವರು 1945ರಲ್ಲಿ ನಡೆದ ವಿಮಾನ ಅಪಘಾತದಲ್ಲಿ ಅಸುನೀಗಿದರು ಎಂದು ನಂಬಲಾಗಿದೆ. ಆದರೆ ಅವರ ಸಾವಿನ ಸುತ್ತಲಿನ ವಿಚಾರಗಳು ಇಂದಿಗೂ ವಿವಾದಾತ್ಮಕ ವಿಚಾರಗಳಾಗಿವೆ.

ಐಎನ್ಎ ಸೋಲು ಅನುಭವಿಸಿದ್ದರೂ, ಸುಭಾಷ್ ಚಂದ್ರ ಬೋಸ್ ಅವರ ಹಿರಿಮೆ ಇಂದಿಗೂ ಜೀವಂತವಾಗಿದೆ. ಅವರ ಯೋಚನೆಗಳು, ಅವರ ಕಾರ್ಯತಂತ್ರಗಳು ನಂತರದ ತಲೆಮಾರಿನ, ಭಾರತದ ಸ್ವಾತಂತ್ರ್ಯ ಹೋರಾಟವನ್ನು ಮುಂದುವರಿಸಿದ ರಾಷ್ಟ್ರೀಯವಾದಿಗಳಿಗೆ ಸ್ಫೂರ್ತಿ ನೀಡಿದ್ದವು. ಸುಭಾಷರನ್ನು ಇಂದಿಗೂ ಸ್ವಾತಂತ್ರ್ಯ ಹೋರಾಟದ ಹೀರೋ ಮತ್ತು ಹುತಾತ್ಮ ಎಂದು ನೆನಪಿಸಲಾಗುತ್ತದೆ.

ಸುಭಾಷ್ ಚಂದ್ರ ಬೋಸ್ ಅವರ ವಿಚಾರಗಳು ಸಂಕೀರ್ಣವಾದವು ಮತ್ತು ಬಹುಮುಖವನ್ನು ಹೊಂದಿದ್ದವು. ಅವರನ್ನು ಸ್ವಾತಂತ್ರ್ಯಕ್ಕಾಗಿ ದಣಿವರಿಯದೆ ಹೋರಾಡಿದ ವರ್ಚಸ್ವಿ, ಧೈರ್ಯಶಾಲಿ ನಾಯಕ ಎಂದು ನೆನೆಯಲಾಗುತ್ತದೆ. ಆದರೆ ಅದರೊಡನೆ ಅವರೊಬ್ಬ ವಿವಾದಾತ್ಮಕ ವ್ಯಕ್ತಿಯೂ ಆಗಿದ್ದರು. ಅವರ ವಿಚಾರಗಳು ಹಲವು ಬಾರಿ ವಿಭಜಕವೂ ಆಗಿದ್ದವು. ಆದರೆ ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಅವರ ಪಾತ್ರ ಅತ್ಯಂತ ಮಹತ್ವದ್ದಾಗಿದ್ದು, ಅವರನ್ನು ಇಂದಿಗೂ ಭಾರತೀಯರು ರಾಷ್ಟ್ರೀಯ ನಾಯಕ ಎಂದೇ ಆರಾಧಿಸುತ್ತಾರೆ.

ಇತ್ತೀಚಿನ ವರ್ಷಗಳಲ್ಲಿ, ಭಾರತ ಸರ್ಕಾರದ ಮೇಲೆ ಸುಭಾಷ್ ಚಂದ್ರ ಬೋಸ್ ಅವರ ಸಾವಿನ ಸುತ್ತಲಿನ ವಿವಾದ ಬಯಲಾಗುವಂತೆ ಆ ವಿಚಾರದ ಕುರಿತಾದ ದಾಖಲೆಗಳನ್ನು ಸಾರ್ವಜನಿಕರ ಮುಂದಿಡುವಂತೆ ಒತ್ತಾಯಗಳೂ ನಡೆದಿವೆ. ಅದರೊಡನೆ ಅವರ ಸಾವಿನ ಕುರಿತು ಪೂರ್ಣ ಪ್ರಮಾಣದ ವಿಚಾರಣೆ ನಡೆಸುವಂತೆ ಆಗ್ರಹಿಸಲಾಗಿದೆ. ಹಲವು ಜನರು ವಿಮಾನ ಅಪಘಾತದ ಕತೆಯ ಕುರಿತಾಗಿ ಅನುಮಾನಗಳನ್ನು ವ್ಯಕ್ತಪಡಿಸಿದ್ದಾರೆ. ಆದರೆ ಈ ಕುರಿತು ಭಾರತ ಸರ್ಕಾರ ಇನ್ನೂ ಯಾವುದೇ ಕ್ರಮ ಕೈಗೊಂಡಿಲ್ಲ.

ಒಟ್ಟಾರೆಯಾಗಿ, ಸುಭಾಷ್ ಚಂದ್ರ ಬೋಸ್ ಅವರ ಜೀವನ, ಹಿರಿಮೆ ಭಾರತೀಯರಿಗೆ ಇಂದಿಗೂ ಸ್ಫೂರ್ತಿದಾಯಕವಾಗಿದೆ. ಅವರ ಕುರಿತಾಗಿ ಇಂದಿಗೂ ಭಾರತದಲ್ಲಿ ವಾದಗಳು ನಡೆಯುತ್ತಿರುತ್ತವೆ. ಭಾರತದ ಸ್ವಾತಂತ್ರ್ಯ ಹೋರಾಟಕ್ಕಾಗಿ ಅವರ ತ್ಯಾಗ, ನಿಷ್ಠೆ ಎಂದಿಗೂ ಸ್ಮರಣೀಯವಾಗಿದೆ.

ಇಂದು ಭವ್ಯ ಭಾರತದ ವೀರ ಪುತ್ರ ಸುಭಾಷ್ ಚಂದ್ರ ಬೋಸ್ ಅವರ ಜನ್ಮದಿನ. ನೇತಾಜಿ ಅವರ ಜೀವನ, ಕಾರ್ಯವೈಖರಿ, ಅವರು ಕೈಗೊಳ್ಳುತ್ತಿದ್ದ ನಿರ್ಧಾರಗಳು ಸದಾ ಪ್ರೇರಣಾದಾಯಿಯಾಗಿವೆ. ಅವರ ತ್ಯಾಗವನ್ನು ಮುಂದಿನ ಪೀಳಿಗೆಗೆ ತಲುಪಿಸುವ ಉದ್ದೇಶದಿಂದ ಸರ್ಕಾರ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜನ್ಮದಿನವನ್ನು ಪರಾಕ್ರಮ ದಿನವನ್ನಾಗಿ ಆಚರಿಸುತ್ತಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More