Home> India
Advertisement

ಜಮ್ಮು ಮತ್ತು ಕಾಶ್ಮೀರ ಮರುವಿಂಗಡಣೆ ಮಸೂದೆಗೆ ರಾಷ್ಟ್ರಪತಿ ಅಂಕಿತ

ಜಮ್ಮು ಮತ್ತು ಕಾಶ್ಮೀರ ಮರುವಿಂಗಡಣೆ ಮಸೂದೆಯನ್ನು ಸಂಸತ್ತು ಅಂಗೀಕರಿಸಿದ ಕೆಲದಿನಗಳ ನಂತರ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರು ಈ ಶಾಸನಕ್ಕೆ ತಮ್ಮ ಅಂಕಿತವನ್ನು ಹಾಕಿದ್ದಾರೆ. 

ಜಮ್ಮು ಮತ್ತು ಕಾಶ್ಮೀರ ಮರುವಿಂಗಡಣೆ ಮಸೂದೆಗೆ  ರಾಷ್ಟ್ರಪತಿ ಅಂಕಿತ

ನವದೆಹಲಿ : ಜಮ್ಮು ಮತ್ತು ಕಾಶ್ಮೀರ ಮರುವಿಂಗಡಣೆ ಮಸೂದೆಯನ್ನು ಸಂಸತ್ತು ಅಂಗೀಕರಿಸಿದ ಕೆಲದಿನಗಳ ನಂತರ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರು ಈ ಶಾಸನಕ್ಕೆ ತಮ್ಮ ಅಂಕಿತವನ್ನು ಹಾಕಿದ್ದಾರೆ. ಈ ಕಾಯ್ದೆಯು ಈಗ ಲಡಾಖ್ ಮತ್ತು ಜಮ್ಮು ಕಾಶ್ಮೀರವನ್ನು ಪ್ರತ್ಯೇಕ ಕೇಂದ್ರಾಡಳಿತವಾಗಿ ವಿಭಜಿಸಲು ಅವಕಾಶ ನೀಡುತ್ತದೆ. ಈಗ ರಾಷ್ಟ್ರಪತಿಯವರ ಅಂಕಿತ ಸಿಕ್ಕಿರುವುದರಿಂದ ಅಕ್ಟೋಬರ್ 31 ರಿಂದ ಎರಡು ಹೊಸ ಕೇಂದ್ರಾಡಳಿತ ಪ್ರದೇಶಗಳು ಅಸ್ತಿತ್ವಕ್ಕೆ ಬರಲಿವೆ ಎಂದು ಗೃಹ ಸಚಿವಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ಮಸೂದೆ ವಿಶೇಷವಾಗಿ ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಂಗಡಿಸುತ್ತದೆ. ಅದರಲ್ಲಿ ಪುದುಚೇರಿಯಂತೆಯೇ ಶಾಸಕಾಂಗವನ್ನು ಹೊಂದಿರುವ ಜಮ್ಮು ಮತ್ತು ಕಾಶ್ಮೀರ, ಮತ್ತು ಚಂಡೀಗಡದಂತೆ ಲಡಾಕ್ ಗೆ ಕೇಂದ್ರಾಡಳಿತ ಸ್ಥಾನಮಾನವನ್ನು ನೀಡಲಾಯಿತು. ಈ ಮಸೂದೆ ರಾಜ್ಯಸಭೆಯಲ್ಲಿ ಮೂರನೇ ಎರಡು ಭಾಗದಷ್ಟು ಸದಸ್ಯರೊಂದಿಗೆ ಅಂಗೀಕರಿಸಲ್ಪಟ್ಟರೆ, ಲೋಕಸಭೆಯಲ್ಲಿ ಅದು ಧ್ವನಿ ಮತದಿಂದ ಅಂಗೀಕರಿಸಲಾಯಿತು. ಇದರ ಜೊತೆಗೆ ಹಲವಾರು ದಶಕಗಳಿಂದ ಇದ್ದ 370 ನೇ ವಿಧಿಯನ್ನು ವಾಪಾಸ್ ಪಡೆಯಲಾಯಿತು. ಇದರಿಂದಾಗಿ ಈಗ ದೇಶದ ಉಳಿದ ಭಾಗಗಳಿಗೆ ಅನ್ವಯವಾಗುವ ನಿಯಮಗಳು ಹೊಸದಾಗಿ ರಚಿಸಲಾದ ಕೇಂದ್ರಾಡಳಿತ ಪ್ರದೇಶಗಳಿಗೆ ಅನ್ವಯವಾಗುತ್ತವೆ ಎನ್ನಲಾಗಿದೆ.

ಮಸೂದೆಗೆ ರಾಷ್ಟ್ರಪತಿಗಳು ತಮ್ಮ ಒಪ್ಪಿಗೆಯನ್ನು ನೀಡುತ್ತಿದ್ದಂತೆ, ಆಗಸ್ಟ್ 5 ರಿಂದ ಜಮ್ಮು ಮತ್ತು ಕಾಶ್ಮೀರ ಆಡಳಿತವು ರಾಜ್ಯದಲ್ಲಿ ವಿಧಿಸಲಾಗಿದ್ದ ನಿರ್ಬಂಧವನ್ನು ಸಡಿಲಗೊಳಿಸಿತು. ಆಡಳಿತವು ಜಮ್ಮುವಿನಿಂದ ಸೆಕ್ಷನ್ 144 ಅನ್ನು ಹಿಂತೆಗೆದುಕೊಂಡಿತು ಮತ್ತು ಶನಿವಾರ ಶಾಲೆಗಳು ತೆರೆಯುವುದಾಗಿ ಘೋಷಿಸಿತು.ಗುರುವಾರದಂದು ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ನಡೆಯಿಂದಾಗಿ ಈ ಪ್ರದೇಶದಲ್ಲಿ ಉದ್ಯೋಗಗಳು, ಸರ್ವಾಂಗೀಣ ಅಭಿವೃದ್ಧಿ, ಪಾರದರ್ಶಕ ಚುನಾವಣೆ ನಡೆಯಲಿದೆ ಎಂದು ಭರವಸೆ ನೀಡಿದರು. 
 

Read More