Home> India
Advertisement

ಉತ್ತರಪ್ರದೇಶ: ಶಾಲಾ ಛಾವಣಿಯ ಮೇಲೆ ಹೈಟೆನ್ಷನ್ ತಂತಿ ಬಿದ್ದು, 55 ಮಕ್ಕಳಿಗೆ ಗಂಭೀರ ಗಾಯ

ಎಲ್ಲಾ ಮಕ್ಕಳು ಕೊಠಡಿಯ ಹೊರಗೆ ಚಪ್ಪಲಿ ಬಿಟ್ಟು ನೆಲದ ಮೇಲೆ ಕುಳಿತು ಪಾಠ ಕಲಿಯುತ್ತಿದ್ದರು ಎನ್ನಲಾಗಿದೆ.

ಉತ್ತರಪ್ರದೇಶ: ಶಾಲಾ ಛಾವಣಿಯ ಮೇಲೆ ಹೈಟೆನ್ಷನ್ ತಂತಿ ಬಿದ್ದು, 55 ಮಕ್ಕಳಿಗೆ ಗಂಭೀರ ಗಾಯ

ಬಲರಾಂಪುರ್: ಉತ್ತರ ಪ್ರದೇಶದ ಬಲರಾಂಪುರ ಜಿಲ್ಲೆಯ ಉಟ್ರೌಲಾದ ವಿಷ್ಣುಪುರ ಸರ್ಕಾರಿ ಪ್ರಾಥಮಿಕ ಕಟ್ಟಡದ ಛಾವಣಿಯ ಮೇಲೆ 11,000 ಕೆವಿ ಅಧಿಕ ಒತ್ತಡದ ತಂತಿ(ಹೈಟೆನ್ಷನ್ ವೈರ್) ಬಿದ್ದ ಘಟನೆ ಸೋಮವಾರ ಸಂಭವಿಸಿದೆ. ಆ ಸಂದರ್ಭದಲ್ಲಿ ಶಾಲೆಯಲ್ಲಿ ಸುಮಾರು 100 ಮಕ್ಕಳಿದ್ದರು ಎನ್ನಲಾಗಿದೆ.

ಶಾಲೆಯ ಛಾವಣಿ ಮೇಲೆ ಅಧಿಕ ಒತ್ತಡದ ತಂತಿ(ಹೈಟೆನ್ಷನ್ ವೈರ್) ಬಿದ್ದ ಪರಿಣಾಮ 55 ಶಾಲಾ ಮಕ್ಕಳಿಗೆ ಸುಟ್ಟ ಗಾಯಗಳಾಗಿದೆ. ಗಾಯಾಳುಗಳನ್ನು ಖಾಸಗಿ ಆಸ್ಪತ್ರೆಗೂ ಮತ್ತು ಕೆಲವರನ್ನು ಬಲರಾಂಪುರದ ಜಿಲ್ಲಾ ಆಸ್ಪತ್ರೆಗೆ ಸಾಗಿಸಲಾಗಿದೆ. ಅವರಲ್ಲಿ ನಾಲ್ವರ ಸ್ಥಿತಿ  ಗಂಭೀರವಾಗಿದೆ ಎಂದು ಹೇಳಲಾಗಿದೆ.

ಶಾಲಾ ಕಟ್ಟಡದ ಛಾವಣಿಯ ಮೇಲೆ 11,000 ಕೆವಿ ಹೈ ಟೆನ್ಷನ್ ತಂತಿ ಬಿದ್ದ ಕಾರಣ ಈ ಅನಾಹುತ ಸಂಭವಿಸಿದೆ. ತಕ್ಷಣವೇ ವಿದ್ಯುತ್ ಕಡಿತಗೊಳಿಸಿದ್ದರಿಂದ ಹೆಚ್ಚಿನ ಸಾವುನೋವುಗಳನ್ನು ತಪ್ಪಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆ ಕೋಪಗೊಂಡ ಶಾಲೆಗೆ ಧಾವಿಸಿದ ವಿದ್ಯಾರ್ಥಿಗಳ ಪೋಷಕರು ಆಡಳಿತ ಮಂಡಳಿಯ ಮೇಲೆ ಕ್ರಿಮಿನಲ್ ನಿರ್ಲಕ್ಷ್ಯದ ಆರೋಪ ಹೊರಿಸಿದ್ದಾರೆ.

ಬಲರಾಂಪುರ ಜಿಲ್ಲಾ ಮ್ಯಾಜಿಸ್ಟ್ರೇಟ್ ಕೃಷ್ಣ ಕರುಣೇಶ್ ಅವರು ಒಬ್ಬ ಗುತ್ತಿಗೆದಾರರನ್ನು ಸೇವೆಯಿಂದ ತಕ್ಷಣವೇ ವಜಾಗೊಳಿಸಿದ್ದಾರೆ. ಅಲ್ಲದೆ ಸಂಬಂಧಪಟ್ಟ ಕಿರಿಯ ಎಂಜಿನಿಯರ್ ವಿರುದ್ಧ ಇಲಾಖಾ ತನಿಖೆಗೆ ಆದೇಶಿಸಿದ್ದಾರೆ.

ಎತನ್ಮಧ್ಯೆ, ಶಾಲಾ ಮಕ್ಕಳಿಗೆ ಉತ್ತಮ ಚಿಕಿತ್ಸೆ ನೀಡುವಂತೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಬಲರಾಂಪುರ ಜಿಲ್ಲಾಧಿಕಾರಿಗೆ ಸೂಚನೆ ನೀಡಿದ್ದಾರೆ. 

ಅಪಘಾತದ ಕಾರಣವನ್ನು ಕಂಡುಹಿಡಿಯಲು ಮತ್ತು 24 ಗಂಟೆಗಳ ಒಳಗೆ ತನ್ನ ವರದಿಯನ್ನು ಸಲ್ಲಿಸುವಂತೆ ಮಧ್ಯಾಂಚಲ್ ವಿದ್ಯಾತ್ ವಿತ್ರಾನ್ ನಿಗಮ್ ಅವರ ಯೋಜನಾ ನಿರ್ದೇಶಕರಿಗೆ ನಿರ್ದೇಶನ ನೀಡಿರುವ ಸಿಎಂ ಯೋಗಿ ಆದಿತ್ಯನಾಥ್, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.

ಹೈಟೆನ್ಷನ್ ತಂತಿಗಳ ಸುರಕ್ಷತೆಯ ಬಗ್ಗೆ ಜಾಗೃತಿ ಮೂಡಿಸಲು ಮತ್ತು ರಾಜ್ಯದಲ್ಲಿ ಇಂತಹ ಘಟನೆಗಳು ಪುನರಾವರ್ತನೆಯಾಗದಂತೆ  ರಾಜ್ಯವ್ಯಾಪಿ ಅಭಿಯಾನ ಪ್ರಾರಂಭಿಸುವಂತೆ ಸಿಎಂ ಯೋಗಿ ಆದಿತ್ಯ ನಾಥ್ ಉತ್ತರ ಪ್ರದೇಶ ವಿದ್ಯುತ್ ನಿಗಮದ ಪ್ರಧಾನ ಕಾರ್ಯದರ್ಶಿ ಮತ್ತು ವ್ಯವಸ್ಥಾಪಕ ನಿರ್ದೇಶಕರಿಗೆ ಸೂಚನೆ ನೀಡಿದ್ದಾರೆ.

Read More