Home> India
Advertisement

ಮಾನವ ದೇಹದ ಮೇಲೆ ಬಾಹ್ಯಾಕಾಶದ ಪರಿಣಾಮಗಳು: ಗಿರೀಶ್ ಲಿಂಗಣ್ಣ

International Space Station: ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ (ಇಂಟರ್ನ್ಯಾಷನಲ್ ಸ್ಪೇಸ್ ಸ್ಟೇಷನ್) ವಾತಾವರಣದಲ್ಲಾಗಲಿ ಅಥವಾ ಬಾಹ್ಯಾಕಾಶಕ್ಕೆ ತೆರಳುವ ಯಾವುದೇ ಬಾಹ್ಯಾಕಾಶ ನೌಕೆಯಲ್ಲಾಗಲಿ, ಗುರುತ್ವಾಕರ್ಷಣಾ ಬಲ ಭೂಮಿಯ ಗುರುತ್ವಾಕರ್ಷಣಾ ಬಲಕ್ಕೆ ಹೋಲಿಸಿದರೆ ಬಹಳಷ್ಟು ಕಡಿಮೆ ಇರುತ್ತದೆ. ​

ಮಾನವ ದೇಹದ ಮೇಲೆ ಬಾಹ್ಯಾಕಾಶದ ಪರಿಣಾಮಗಳು: ಗಿರೀಶ್ ಲಿಂಗಣ್ಣ

International Space Station: ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ (International Space Station) ವಾತಾವರಣದಲ್ಲಾಗಲಿ ಅಥವಾ ಬಾಹ್ಯಾಕಾಶಕ್ಕೆ ತೆರಳುವ ಯಾವುದೇ ಬಾಹ್ಯಾಕಾಶ ನೌಕೆಯಲ್ಲಾಗಲಿ, ಗುರುತ್ವಾಕರ್ಷಣಾ ಬಲ ಭೂಮಿಯ ಗುರುತ್ವಾಕರ್ಷಣಾ ಬಲಕ್ಕೆ ಹೋಲಿಸಿದರೆ ಬಹಳಷ್ಟು ಕಡಿಮೆ ಇರುತ್ತದೆ. ಇದರ ಪರಿಣಾಮ ಬಹಳಷ್ಟು ಜನರು ತಲೆನೋವು, ಅಸ್ಥಿರತೆ, ವಾಂತಿ ಸೇರಿದಂತೆ, ಬಾಹ್ಯಾಕಾಶ ಅಸೌಖ್ಯದ (ಸ್ಪೇಸ್ ಸಿಕ್‌ನೆಸ್) ವಿವಿಧ ಲಕ್ಷಣಗಳನ್ನು ಹೊಂದುತ್ತಾರೆ. ನಮ್ಮ ಮನೆಯಾದ ಭೂಮಿಯಲ್ಲಿ ಗುರುತ್ವಾಕರ್ಷಣಾ ಬಲ ನಮ್ಮ ಮೇಲೆ ಬಹಳಷ್ಟು ಪರಿಣಾಮ ಬೀರುತ್ತದೆ. ನಮ್ಮ ದೇಹದ ಸಮತೋಲನವನ್ನು ಕಾಪಾಡಿಕೊಳ್ಳುವ ಸಲುವಾಗಿ, ನಾವು ವೆಸ್ಟಿಬುಲಾರ್ ಆರ್ಗಾನ್ ಎಂದು ಕರೆಯಲಾಗುವ ಸಣ್ಣದಾದ ಅಂಗದ ಮೇಲೆ ಅವಲಂಬಿಸಿರುತ್ತೇವೆ. ಈ ಅಂಗ ನಮ್ಮ ಕಿವಿಯ ಒಳಭಾಗದಲ್ಲಿ, ಅದರಲ್ಲೂ ಒಳಗಿವಿಯ ಭಾಗದಲ್ಲಿ ಇರುತ್ತದೆ.

ವೆಸ್ಟಿಬುಲಾರ್ ಅಂಗ ಎಂದು ಕರೆಯಲಾಗುವ, ನಮ್ಮ ಒಳಗಿವಿಯ ಒಳಭಾಗದಲ್ಲಿರುವ ಈ ಅಂಗ ನಮ್ಮ ದೇಹದಿಂದ ಗುರುತ್ವಾಕರ್ಷಣೆ ಮತ್ತು ವೇಗವರ್ಧನೆಯ ಸಂಕೇತಗಳನ್ನು ಸ್ವೀಕರಿಸಿ, ಅವುಗಳನ್ನು ವಿದ್ಯುತ್ ಸಂಕೇತಗಳನ್ನಾಗಿ ಪರಿವರ್ತಿಸುತ್ತದೆ. ಬಳಿಕ ಈ ಸಂಕೇತಗಳು ಮೆದುಳಿಗೆ ರವಾನೆಯಾಗುತ್ತವೆ. ಭೂಮಿಯಲ್ಲಿ ಮೆದುಳು ವೆಸ್ಟಿಬುಲಾರ್ ಅಂಗದಿಂದ ನಿರಂತರವಾಗಿ ಗುರುತ್ವಾಕರ್ಷಣೆಯ ಮಾಹಿತಿಗಳನ್ನು ಸ್ವೀಕರಿಸುತ್ತಿರುತ್ತದೆ. ಬಳಿಕ ಅದನ್ನು ದೇಹದ ಸಮತೋಲನಕ್ಕಾಗಿ ಬಳಸಿಕೊಳ್ಳುತ್ತದೆ.

ಬಾಹ್ಯಾಕಾಶದ ಕನಿಷ್ಠ ಗುರುತ್ವಾಕರ್ಷಣಾ ವಾತಾವರಣದಲ್ಲಿ, ವೆಸ್ಟಿಬುಲಾರ್ ಅಂಗ ಪಡೆದುಕೊಳ್ಳುವ ಮಾಹಿತಿಗಳಲ್ಲಿ ಬದಲಾವಣೆ ಉಂಟಾಗುತ್ತದೆ. ಇಂತಹ ಬದಲಾವಣೆಗಳು ಮೆದುಳಿನಲ್ಲಿ ಗೊಂದಲಗಳನ್ನು ಉಂಟುಮಾಡುತ್ತದೆ ಎಂದು ಭಾವಿಸಲಾಗಿದೆ. ಇದರ ಪರಿಣಾಮವಾಗಿ ಬಾಹ್ಯಾಕಾಶ ಅಸೌಖ್ಯಗಳು ಕಾಣಿಸಿಕೊಳ್ಳುತ್ತವೆ. ಆದರೆ ಈ ಸಮಸ್ಯೆ ನಿರಂತರವಾಗಿ ತಲೆದೋರುವುದಿಲ್ಲ. ಓರ್ವ ವ್ಯಕ್ತಿ ಏನಾದರೂ ಬಾಹ್ಯಾಕಾಶದಲ್ಲಿ ಕೆಲವು ದಿನಗಳನ್ನು ಕಳೆದರೆ, ಮೆದುಳು ವೆಸ್ಟಿಬುಲಾರ್ ಮಾಹಿತಿಗಳಿಗೆ ತನ್ನನ್ನು ತಾನು ಹೊಂದಿಸಿಕೊಳ್ಳುತ್ತದೆ. ಇದು ಬಾಹ್ಯಾಕಾಶ ಅಸೌಖ್ಯಕ್ಕೆ ಪರಿಹಾರ ಕಂಡುಕೊಳ್ಳಲು ನೆರವಾಗುತ್ತದೆ.

ಬಾಹ್ಯಾಕಾಶ ಅಸೌಖ್ಯಗಳ ಪ್ರತಿಕ್ರಿಯೆಗಳು, ತೀವ್ರತೆಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತವೆ. ಕೆಲವರಲ್ಲಿ ಇಂತಹ ಯಾವ ಅಸೌಖ್ಯದ ಲಕ್ಷಣಗಳೂ ಕಾಣಿಸಿಕೊಳ್ಳದಿರಬಹುದು. ಭೂಮಿಗೆ ಮರಳಿದ ಬಳಿಕ, ಭೂಮಿಯ ಗುರುತ್ವಾಕರ್ಷಣಾ ಸೆಳೆತಕ್ಕೆ ಮರಳಿ ಒಳಗಾಗುವುದರಿಂದ 'ಗುರುತ್ವಾಕರ್ಷಣಾ ಅಸೌಖ್ಯ' (Gravitational sickness) ಕಾಣಿಸಿಕೊಳ್ಳಬಹುದು. ಇದರಲ್ಲೂ ಬಾಹ್ಯಾಕಾಶ ಅಸೌಖ್ಯದ ಲಕ್ಷಣಗಳೇ ಕಾಣಿಸಿಕೊಳ್ಳುತ್ತವೆ.

ಬಾಹ್ಯಾಕಾಶದಲ್ಲಿ ಮುಖ ಊದಿಕೊಳ್ಳುವುದು

ನಾವು ಭೂಮಿಯಲ್ಲಿ ಇರುವಾಗ ಗುರುತ್ವಾಕರ್ಷಣೆ ದೇಹದಲ್ಲಿರುವ ರಕ್ತ ಮತ್ತು ಇತರ ದ್ರವಗಳನ್ನು ದೇಹದ ಕೆಳಭಾಗದ ಕಡೆಗೆ ಎಳೆಯುತ್ತದೆ. ಆದರೆ ಬಾಹ್ಯಾಕಾಶದಲ್ಲಿ ಗುರುತ್ವಾಕರ್ಷಣೆ ಅತ್ಯಂತ ದುರ್ಬಲವಾಗಿರುತ್ತದೆ. ಈ ಕಾರಣದಿಂದ ದೇಹದ ದ್ರವಗಳು ದೇಹದ ಕೆಳಭಾಗಕ್ಕೆ ಎಳೆಯಲ್ಪಡದೆ, ದೇಹದ ಮೇಲ್ಭಾಗದಲ್ಲೇ ಉಳಿಯುತ್ತವೆ. ಈ ಕಾರಣದಿಂದಲೇ ಬಾಹ್ಯಾಕಾಶದಲ್ಲಿ ಗಗನಯಾತ್ರಿಗಳ ಮುಖ ಊದಿಕೊಂಡಂತೆ ಕಂಡುಬರುತ್ತದೆ. ಅವರ ಮೂಗೂ ಸಹ ಊದಿಕೊಂಡು, ಉಸಿರು ಕಟ್ಟುವಂತಹ ಅನುಭವ ಉಂಟುಮಾಡುತ್ತದೆ. ಒಂದು ವೇಳೆ ಗಗನಯಾತ್ರಿಗಳು ಬಾಹ್ಯಾಕಾಶದಲ್ಲಿ ದೀರ್ಘ ಸಮಯ ಕಳೆದರೆ, ಅವರ ದೇಹ ಅಲ್ಲಿಗೆ ಹೊಂದಿಕೊಂಡು, ದೇಹದ ದ್ರವಗಳು ಹೆಚ್ಚು ಸಮಾನವಾಗಿ ಹಂಚಿಕೆಯಾಗುತ್ತವೆ. ಆ ಬಳಿಕ ಅವರ ಮುಖದ ಊದಿಕೊಳ್ಳುವಿಕೆ ಕೆಲವು ವಾರಗಳ ನಂತರ ಕಡಿಮೆಯಾಗುತ್ತದೆ.

ಗಗನಯಾತ್ರಿಗಳು ಭೂಮಿಗೆ ಮರಳಿ ಆಗಮಿಸುವಾಗ ಅವರಿಗೆ ಬಹಳಷ್ಟು ಸಂದರ್ಭಗಳಲ್ಲಿ ಎದ್ದು ನಿಲ್ಲುವಾಗ ತಲೆಸುತ್ತಿನ ಅನುಭವ ಉಂಟಾಗುತ್ತದೆ. ಈ ಸ್ಥಿತಿಯನ್ನು ಆರ್ಥೋಸ್ಟಾಟಿಕ್ ಹೈಪೋಟೆನ್ಷನ್ ಎಂದು ಕರೆಯಲಾಗುತ್ತದೆ. ಭೂಮಿಯ ಗುರುತ್ವಾಕರ್ಷಣಾ ಬಲ ಬಾಹ್ಯಾಕಾಶದಿಂದ ಹೆಚ್ಚಿರುವ ಕಾರಣ, ಮೆದುಳಿಗೆ ರಕ್ತವನ್ನು ಪಂಪ್ ಮಾಡಲು ಹೃದಯಕ್ಕೆ ಹೆಚ್ಚು ಶ್ರಮ ಹಾಕಬೇಕಾಗುವುದರಿಂದ ಈ ಪರಿಸ್ಥಿತಿ ಉಂಟಾಗುತ್ತದೆ. ಬಾಹ್ಯಾಕಾಶದಲ್ಲಿ ರಕ್ತವನ್ನು ಪಂಪ್ ಮಾಡಲು ಹೃದಯ ಹೆಚ್ಚು ಶ್ರಮ ವಹಿಸಿ ಕೆಲಸ ಮಾಡುವ ಅವಶ್ಯಕತೆ ಇರುವುದಿಲ್ಲ. ಆದ್ದರಿಂದ ಹೃದಯದ ಸ್ನಾಯುಗಳು ಕೊಂಚ ದುರ್ಬಲಗೊಳ್ಳುವ ಸಾಧ್ಯತೆಗಳಿವೆ. ಈ ದುರ್ಬಲಗೊಳ್ಳುವಿಕೆಯ ಕಾರಣದಿಂದಲೂ ಭೂಮಿಗೆ ಮರಳಿದ ಬಳಿಕ ಗಗನಯಾತ್ರಿಗಳಿಗೆ ಎದ್ದು ನಿಲ್ಲುವಾಗ ತಲೆ ಸುತ್ತುವ ಅನುಭವ ಉಂಟಾಗಬಹುದು.

ಮೂಳೆಗಳು ಮತ್ತು ಸ್ನಾಯುಗಳ ಬಲಹೀನತೆ

ನಾವೇನಾದರೂ ಬಾಹ್ಯಾಕಾಶದಲ್ಲಿ ಸುದೀರ್ಘ ಅವಧಿಯನ್ನು ಕಳೆದರೆ, ನಮ್ಮ ದೇಹದ ಸ್ನಾಯುಗಳು ಮತ್ತು ಮೂಳೆಗಳು, ಅದರಲ್ಲೂ ಕಾಲುಗಳು ಮತ್ತು ಬೆನ್ನಿನ ಕೆಳಭಾಗದ ಸ್ನಾಯುಗಳು ಮತ್ತು ಮೂಳೆಗಳು ಬಲ ಕಳೆದುಕೊಳ್ಳುತ್ತವೆ. ಭೂಮಿಯಲ್ಲಿ ಇರುವಾಗ ದೇಹದ ಮೇಲೆ ಗುರುತ್ವಾಕರ್ಷಣಾ ಪ್ರಭಾವ ಯಾವಗಲೂ ಇರುತ್ತದೆ. ಇದರಿಂದಾಗಿ ನಮಗೆ ತಿಳಿಯದೆಯೇ ನಾವು ದೇಹದ ಕೆಳಭಾಗದ ಸ್ನಾಯುಗಳನ್ನು ನಿರಂತರವಾಗಿ ಬಳಸುತ್ತಲೇ ಇರುತ್ತೇವೆ. ಆದರೆ ಬಹುತೇಕ ಗುರುತ್ವಾಕರ್ಷಣೆ ಇಲ್ಲದಿರುವ ವಾತಾವರಣವಿರುವ ಬಾಹ್ಯಾಕಾಶದಲ್ಲಿ, ಸುತ್ತಮುತ್ತ ಚಲಿಸುವ ಸಲುವಾಗಿ ನಾವು ಎದ್ದು ನಿಲ್ಲುವ ಅಥವಾ ಚಲಿಸಲು ಕಾಲುಗಳನ್ನು ಬಳಸುವ ಅವಶ್ಯಕತೆ ಇರುವುದಿಲ್ಲ. ಈ ಕಾರಣದಿಂದ ದೀರ್ಘಕಾಲದ ತನಕ ಬಾಹ್ಯಾಕಾಶದಲ್ಲಿದ್ದರೆ ನಮ್ಮ ಸ್ನಾಯುಗಳ ದುರ್ಬಲವಾಗುವ, ಮೂಳೆಗಳು ಭಾರ ಕಳೆದುಕೊಳ್ಳುವ ಅಪಾಯ ಎದುರಾಗುತ್ತದೆ.

ವಿಜ್ಞಾನಿಗಳು ಒಂದು ವೇಳೆ ಮೂಳೆ ದುರ್ಬಲಗೊಳ್ಳದಂತೆ ತಡೆಯುವ ಔಷಧಗಳು ಬಾಹ್ಯಾಕಾಶದಲ್ಲಿ ಕಾರ್ಯಾಚರಿಸಬಲ್ಲವೇ ಎಂಬುದನ್ನು ಪರಿಶೀಲಿಸುತ್ತಿದ್ದಾರೆ. ಅದಲ್ಲದೆ, ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ (ISS) ಗಗನಯಾತ್ರಿಗಳು ತಮ್ಮ ಮೂಳೆಗಳು ಮತ್ತು ಸ್ನಾಯುಗಳನ್ನು ಬಲಯುತವಾಗಿ ಇಟ್ಟುಕೊಳ್ಳಲು ಪ್ರತಿದಿನವೂ ಕನಿಷ್ಠ ಎರಡು ಗಂಟೆ ವ್ಯಾಯಾಮ ನಡೆಸುತ್ತಾರೆ.

ಬಾಹ್ಯಾಕಾಶದಲ್ಲಿ ವಿಕಿರಣಗಳು ಹೆಚ್ಚು ತೀವ್ರವಾಗಿರುತ್ತವೆಯೇ?

ಯಾವುದೇ ವಾತಾವರಣ ಇಲ್ಲದಿರುವ ಬಾಹ್ಯಾಕಾಶದ ನಿರ್ವಾತದಲ್ಲಿ ವಿಕಿರಣಗಳ ಮಟ್ಟ ಬಹಳಷ್ಟು ಹೆಚ್ಚಾಗಿದ್ದು, ಮಾನವರ ಆರೋಗ್ಯದ ಮೇಲೆ ಬಹಳಷ್ಟು ಪರಿಣಾಮ ಬೀರುತ್ತವೆ. ಭೂಮಿಯನ್ನು ಒಂದು ವಾತಾವರಣ ಸುತ್ತುವರಿದಿದ್ದು, ಅದು ನಾವು ಉಸಿರಾಡುವ ಆಮ್ಲಜನಕವನ್ನು ಒದಗಿಸುತ್ತದೆ ಮತ್ತು ಅಪಾಯಕಾರಿ ನೇರಳಾತೀತ ವಿಕಿರಣಗಳಿಂದ ಜೀವಿಗಳನ್ನು ರಕ್ಷಿಸುತ್ತದೆ. ಆದರೆ ಯಾವುದೇ ವಾತಾವರಣ ಇಲ್ಲದಿರುವ ಬಾಹ್ಯಾಕಾಶದಲ್ಲಿರುವ ಗಗನಯಾತ್ರಿಗಳು, ಭೂಮಿಯ ಮೇಲೆ ನಾವು ಎದುರಿಸುವುದಕ್ಕಿಂತ ಬಹಳಷ್ಟು ಹೆಚ್ಚಿನ ಪ್ರಮಾಣದಲ್ಲಿ ವಿಕಿರಣಗಳನ್ನು ಎದುರಿಸಬೇಕಾಗಿ ಬರುತ್ತದೆ. ಅತ್ಯಂತ ತೀಕ್ಷ್ಣವಾದ ವಿಕಿರಣಗಳಿಗೆ ದೀರ್ಘಕಾಲ ತೆರೆದುಕೊಳ್ಳುವುದರಿಂದ, ಕ್ಯಾನ್ಸರ್‌ನಂತಹ ಗಂಭೀರ ಖಾಯಿಲೆಗಳು ಉಂಟಾಗುವ ಸಾಧ್ಯತೆಗಳು ಹೆಚ್ಚಿರುತ್ತವೆ.

ಗಗನಯಾತ್ರಿಗಳನ್ನು ಸಂಭಾವ್ಯ ಆರೋಗ್ಯ ಸಮಸ್ಯೆಗಳಿಂದ ರಕ್ಷಿಸುವ ಸಲುವಾಗಿ, ಅವರು ಬಾಹ್ಯಾಕಾಶ ವಿಕಿರಣಗಳಿಗೆ ತೆರೆದುಕೊಳ್ಳುವುದು ನಿಗದಿತ ಪ್ರಮಾಣದಲ್ಲಿರುತ್ತದೆ ಎಂಬುದನ್ನು ಖಾತ್ರಿಪಡಿಸಲು ವಿಜ್ಞಾನಿಗಳು ಮತ್ತು ಸಂಶೋಧಕರು ಬಹಳಷ್ಟು ಪ್ರಯತ್ನ ಪಡುತ್ತಿದ್ದಾರೆ.

ಗಗನಯಾತ್ರಿಗಳ ಸಂಭಾವ್ಯ ಆರೋಗ್ಯ ಸಮಸ್ಯೆಗಳಿಂದ ರಕ್ಷಿಸಲು ಕ್ರಮ

ಬಾಹ್ಯಾಕಾಶ ಆಹಾರದ ಗುಣಮಟ್ಟ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುತ್ತಿದೆ

ವಿಜ್ಞಾನಿಗಳು ಮತ್ತು ಸಂಶೋಧಕರಿಂದ ಬಹಳಷ್ಟು ಪ್ರಯತ್ನಗಳು ನಡೆಯುತ್ತಿವೆ

ಅಪಾರ ಒತ್ತಡ ಹೇರುವ ಕನಿಷ್ಠ ಸ್ಥಳಾವಕಾಶ

ಈ ಹಿಂದಿನ ಬಾಹ್ಯಾಕಾಶ ನೌಕೆಗಳಿಗೆ ಹೋಲಿಸಿದರೆ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ಹೆಚ್ಚಿನ ಪ್ರದೇಶವನ್ನು ಒದಗಿಸುತ್ತದೆ. ಆದರೂ ಅಲ್ಲಿನ ಚಟುವಟಿಕೆಗಳು ಭೂಮಿಗೆ ಹೋಲಿಸಿದರೆ ಬಹಳಷ್ಟು ಸೀಮಿತವಾಗಿರುತ್ತವೆ. ಗಗನಯಾತ್ರಿಗಳು ತಿಂಗಳುಗಳ ಕಾಲ ಅತ್ಯಂತ ಕಡಿಮೆ ಪ್ರದೇಶದಲ್ಲಿ ಕಾರ್ಯಾಚರಿಸುವುದರಿಂದ, ಕೆಲವೊಂದು ಬಾರಿ ಅವರಿಗೇ ತಿಳಿದಿರದಂತೆ ಒತ್ತಡಕ್ಕೆ ಒಳಗಾಗಿರುತ್ತಾರೆ. ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ ಸಿಬ್ಬಂದಿಗಳು ರಷ್ಯಾ, ಅಮೆರಿಕಾ, ಕೆನಡಾ, ಯುರೋಪ್, ಮತ್ತು ಜಪಾನಿನಂತಹ ವಿವಿಧ ದೇಶಗಳಿಂದ ಆಗಮಿಸುವವರಾಗಿದ್ದು, ಪರಸ್ಪರ ಸಂವಹನ ನಡೆಸಲು ಭಾಷೆಯ ಅಡಚಣೆಯೂ ಎದುರಾಗಿ, ಭಾಷಾ ಮತ್ತು ಸಂಸ್ಕೃತಿಯ ಅಡಚಣೆ ಉಂಟುಮಾಡುತ್ತದೆ. ಗಗನಯಾತ್ರಿಗಳ ಮೇಲಿನ ಒತ್ತಡ ಕಡಿಮೆ ಮಾಡುವ ಸಲುವಾಗಿ, ಅವರು ಕುಟುಂಬಸ್ತರೊಡನೆ, ಸ್ನೇಹಿತರೊಡನೆ ಸಂವಹನ ನಡೆಸಲು ಅವಕಾಶ ಕಲ್ಪಿಸಲು, ಬಾಹ್ಯಾಕಾಶ ಆಹಾರದ ಗುಣಮಟ್ಟ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.

✍︎ ಗಿರೀಶ್ ಲಿಂಗಣ್ಣ, (ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Read More