Home> India
Advertisement

ಪ್ರಮೋದ್ ಸಾವಂತ್ ಗೋವಾದ ನೂತನ ಸಿಎಂ: ಮಧ್ಯರಾತ್ರಿ ಪ್ರಮಾಣವಚನ ಸ್ವೀಕಾರ

ಮೊದಲಿಗೆ ಸೋಮವಾರ ರಾತ್ರಿ 9 ಗಂಟೆಗೆ ಪ್ರಮಾಣವಚನ ಸಮಾರಂಭವನ್ನು ನಿಗದಿಗೊಳಿಸಲಾಗಿತ್ತು. ಆದರೆ, ಬಿಜೆಪಿ ಮೈತ್ರಿಕೂಟಗಳೊಂದಿಗೆ ಮಾತುಕತೆ ನಡೆಸಿ ಅಂತಿಮ ನಿರ್ಧಾರ ಕೈಗೊಳ್ಳುವುದು ವಿಳಂಬವಾದ ಕಾರಣ ತಡರಾತ್ರಿ ಪ್ರಮಾಣವಚನ ಸ್ವೀಕರಿಸಲಾಯಿತು.

ಪ್ರಮೋದ್ ಸಾವಂತ್ ಗೋವಾದ ನೂತನ ಸಿಎಂ: ಮಧ್ಯರಾತ್ರಿ ಪ್ರಮಾಣವಚನ ಸ್ವೀಕಾರ

ಪಣಜಿ: ಗೋವಾ ಮುಖ್ಯಮಂತ್ರಿ ಮನೋಹರ್ ಪರ್ರಿಕರ್ ಅವರ ನಿಧನದ ಬಳಿಕ, ಗೋವಾದ ರಾಜಕೀಯದಲ್ಲಿನ ಮಹತ್ವದ ಬೆಳವಣಿಗೆಯಲ್ಲಿ ಬಿಜೆಪಿ ಹೈಕಮಾಂಡ್ ಮನೋಹರ್ ಮನೋಹರ್ ಪರ್ರಿಕರ್ ಅವರ ಉತ್ತರಾಧಿಕಾರಿಯಾಗಿ ಪ್ರಮೋದ್ ಸಾವಂತ್ ಅವರನ್ನು ಆಯ್ಕೆ ಮಾಡಿತು.

ಸೋಮವಾರ ಸಂಜೆಯಷ್ಟೇ ಮನೋಹರ್ ಪರ್ರಿಕರ್ ಅವರ ಅಂತ್ಯಕ್ರಿಯೆ ನಡೆಯಿತು. ಅದರ ಬೆನ್ನಲ್ಲೇ ಪ್ರಮೋದ್ ಸಾವಂತ್ ಅವರನ್ನು ಗೋವಾ ನೂತನ ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಲಾಗಿದೆ. ಸಾವಂತ್ ಅವರ ಪ್ರಮಾಣ ವಚನ ಸ್ವೀಕಾರ ನಿನ್ನೆ ರಾತ್ರಿ 9 ಗಂಟೆಗೆ ನಿಗದಿಯಾಗಿತ್ತು. ಆದರೆ, ಬಿಜೆಪಿ ಮೈತ್ರಿಕೂಟಗಳೊಂದಿಗೆ ಮಾತುಕತೆ ನಡೆಸಿ ಅಂತಿಮ ನಿರ್ಧಾರ ಕೈಗೊಳ್ಳುವುದು ವಿಳಂಬವಾದ ಕಾರಣ ತಡರಾತ್ರಿ ಪ್ರಮಾಣವಚನ ಸ್ವೀಕರಿಸಲಾಯಿತು.

ಬಿಜೆಪಿ ಹೈಕಮಾಂಡ್ ಮತ್ತು ವಿಶೇಷವಾಗಿ ಕೇಂದ್ರ ಸಚಿವ ನಿತಿನ್ ಗಡ್ಕರಿ ತಮ್ಮ ಪಕ್ಷದ ಅಭ್ಯರ್ಥಿಯನ್ನು ಮುಖ್ಯಮಂತ್ರಿ ಗದ್ದುಗೆಗೇರಿಸಲು ಹರಸಾಹಸ ಪಟ್ಟರು. ತಡರಾತ್ರಿ 1:50 ರ ವೇಳೆಗೆ ಗವರ್ನರ್ ಮೃದುಲಾ ಸಿನ್ಹಾ ಅವರು ನೂತನ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರಿಗೆ ಪ್ರಮಾಣವಚನ ಬೋಧಿಸಿದರು.

ರಾತ್ರಿ 01:46ಕ್ಕೆ ರಾಜ್ಯಪಾಲರಾದ ಮೃದುಲಾ ಸಿನ್ಹಾ ದರ್ಬಾರ್ ಹಾಲ್ ತಲುಪಿದರು. ರಾಷ್ಟ್ರಗೀತೆ ನಂತರ, ಪ್ರಮಾಣವಚನ ಸಮಾರಂಭ ಪ್ರಾರಂಭವಾಯಿತು. ಪ್ರಮೋದ್ ಸಾವಂತ್ ಕೊಂಕಣಿ ಭಾಷೆಯಲ್ಲಿ ಪ್ರಮಾಣವಚನ ಸ್ವೀಕರಿಸಿದರು. ಬಳಿಕ ಮಹಾರಾಷ್ಟ್ರವಾದಿ ಗೋಮಾಂತಕ್ ಪಕ್ಷ(ಎಂಜಿಪಿ)ದ ಸುಬೇದಾರ್ ಧ್ವಾಲ್ಕರ್ ಮತ್ತು ಗೋವಾ ಫಾರ್ವರ್ಡ್ ಪಕ್ಷ(ಜಿಎಫ್ಪಿ)ದ ವಿಜಯ್ ಸರ್ ದೇಸಾಯ್ ರಾಜ್ಯದ ನೂತನ ಉಪ ಮುಖ್ಯಮಂತ್ರಿಗಳಾಗಿ ಪ್ರಮಾನವಷಣ ಸ್ವೀಕರಿಸಿದರು.

ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರಲ್ಲದೆ, ಈ ಪ್ರಮಾಣವಚನ ಸಮಾರಂಭದಲ್ಲಿ 11 ಶಾಸಕರು, ಮನೋಹರ್ ಅಜಗಾಂಕರ್, ರೋಹನ್ ಖ್ವಾಟೆ, ಜಯಶ್ ಸಲ್ಗೋನ್ಕರ್, ವಿಶ್ವಜಿತ್ ರಾನೆ, ಮಾವೆನ್ ಗುಡಿನೋ ಗೋವಾ ಫಾರ್ವರ್ಡ್ ಪಾರ್ಟಿಯ ಮೂವರು ಶಾಸಕರು ಅಧಿಕಾರ ಸ್ವೀಕರಿಸಿದರು. ಅವರಲ್ಲದೆ, ಗೋವಿಂದ್ ಗಾವ್ಡೆ, ವಿನೋದ್ ಪಾಲೇಕರ್, ಮಿಲಿಂದ್ ನಾಯ್ಕ್ ಮತ್ತು ನಿಲೇಶ್ ಕೊಬ್ರಲ್ ಅವರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು. 

ಗೋವಾದಲ್ಲಿ ಕಾಂಗ್ರೆಸ್ ಬಹುದೊಡ್ಡ ಪಕ್ಷವಾಗಿ ಹೊರ ಹೊಮ್ಮಿದ್ದರೂ, ಬಿಜೆಪಿ(12), ಜಿಎಫ್ ಪಿ(3), ಎಂಜಿಪಿ(3) ಹಾಗೂ ಮೂವರು ಪಕ್ಷೇತರರ ಬೆಂಬಲ ಪಡೆದು ಸರಳ ಬಹುಮತದೊಂದಿಗೆ ಅಧಿಕಾರದ ಚುಕ್ಕಾಣಿ ಹಿಡಿದಿದೆ.

ಭಾನುವಾರ ಸಂಜೆ ಮನೋಹರ್ ಪರ್ರಿಕರ್ ನಿಧನದ ಬಳಿಕ, ಅಂದು ರಾತ್ರಿಯಿಂದ ಬಿಜೆಪಿ ಮತ್ತು ಮಿತ್ರ ಪಕ್ಷಗಳ ನಡುವೆ ಮಾತುಕತೆ ನಡೆದಿತ್ತು. ಬಿಜೆಪಿ ಶಾಸಕರು ಹಾಗೂ ಮಿತ್ರ ಪಕ್ಷದೊಂದಿಗೆ ನಿತಿನ್ ಗಡ್ಕರಿ ರಾತ್ರಿಯಿಡೀ ಸಮಾಲೋಚನೆ ನಡೆಸಿದ್ದು, ಪ್ರತಿ ಶಾಸಕರೂ ಗಡ್ಕರಿ ಮತ್ತು ಪಕ್ಷದ ಮುಖಂಡ ಬಿ.ಎಲ್. ಸಂತೋಷ್ ಅವರ ಸಮ್ಮುಖದಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಆದರೆ ಸೋಮವಾರ ಮಧ್ಯಾಹ್ನದವರೆಗೂ ಒಮ್ಮತಕ್ಕೆ ಬರಲು ಸಾಧ್ಯವಾಗಿರಲಿಲ್ಲ. ಏತನ್ಮಧ್ಯೆ, ಮಿತ್ರಪಕ್ಷವಾದ ಮಹಾರಾಷ್ಟ್ರವಾದಿ ಗೋಮಾಂತಕ ಪಾರ್ಟಿ (ಎಂಜಿಪಿ) ಮುಖಂಡ ರಾಮಕೃಷ್ಣ ಧವ್ಳೀಕರ್ ಕೂಡಾ ಮುಖ್ಯಮಂತ್ರಿ ಹುದ್ದೆಗೆ ಪಟ್ಟು ಹಿಡಿದಿರುವುದಾಗಿ, ಉಪ ಸ್ಪೀಕರ್ ಮೈಕೆಲ್ ಲೋಬೊ ತಿಳಿಸಿದ್ದರು.

Read More