Home> India
Advertisement

ಬಹುಮತ ಇಲ್ಲದಿದ್ದರೂ ದೇವೇಂದ್ರ ಫಡ್ನವೀಸ್ 'ಮಹಾ' ಸಿಎಂ ಆಗಿದ್ದೇಕೆ? ಕಾರಣ ಬಿಚ್ಚಿಟ್ಟ ಹೆಗ್ಡೆ

ಸಂಸದ ಅನಂತ್ ಕುಮಾರ್ ಹೆಗ್ಡೆ ಅವರ ಹೇಳಿಕೆಯನ್ನು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ತಿರಸ್ಕರಿಸಿದ್ದಾರೆ.

ಬಹುಮತ ಇಲ್ಲದಿದ್ದರೂ ದೇವೇಂದ್ರ ಫಡ್ನವೀಸ್ 'ಮಹಾ' ಸಿಎಂ ಆಗಿದ್ದೇಕೆ? ಕಾರಣ ಬಿಚ್ಚಿಟ್ಟ ಹೆಗ್ಡೆ

ಉತ್ತರ ಕನ್ನಡ: ಬಿಜೆಪಿ ಸಂಸದ ಮತ್ತು ಮಾಜಿ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗ್ಡೆ ಅವರ ಹೇಳಿಕೆಯೊಂದು ಇದೀಗ ಮಹಾರಾಷ್ಟ್ರದ ರಾಜಕೀಯದಲ್ಲಿ ಕೋಲಾಹಲ ಸೃಷ್ಟಿಸಿದೆ. ದೇವೇಂದ್ರ ಫಡ್ನವಿಸ್(Devendra Fadnavis) 80 ಗಂಟೆಗಳ ಕಾಲ ಮುಖ್ಯಮಂತ್ರಿ ಆಗಿದ್ದರ ಬಗ್ಗೆ ಸಂಸದ ಅನಂತ್ ಕುಮಾರ್ ಹೆಗ್ಡೆ(Anant Kumar Hegde) ಕಾರಣ ಬಿಚ್ಚಿಟ್ಟಿದ್ದಾರೆ. ಕೇಂದ್ರ ಸರ್ಕಾರದ 40,000 ಕೋಟಿ ಉಳಿತಾಯಕ್ಕಾಗಿ ಫಡ್ನವೀಸ್ ತಮಗೆ ಬಹುಮತ ಇಲ್ಲದಿದ್ದರೂ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ್ದರು ಎಂದು ಅವರು ಸಭೆಯೊಂದರಲ್ಲಿ ಹೇಳಿದ್ದಾರೆ.

ಉತ್ತರ ಕನ್ನಡದಲ್ಲಿ ಮಾತನಾಡಿದ ಅನಂತ್ ಕುಮಾರ್ ಹೆಗ್ಡೆ, 'ನಮ್ಮ ವ್ಯಕ್ತಿ 80 ಗಂಟೆಗಳ ಕಾಲ ಮಹಾರಾಷ್ಟ್ರದ ಮುಖ್ಯಮಂತ್ರಿಯಾದರು ಎಂಬುದು ನಿಮಗೆಲ್ಲರಿಗೂ ತಿಳಿದಿದೆ, ನಂತರ ಫಡ್ನವೀಸ್ ರಾಜೀನಾಮೆ ನೀಡಿದರು. ಅವರು ಈ ನಾಟಕವನ್ನು ಏಕೆ ಮಾಡಿದರು? ಅವರಿಗೆ ಬಹುಮತವಿಲ್ಲ ಎಂದು ತಿಳಿದಿರಲಿಲ್ಲವೇ? ಆದರೂ ಅವರು ಸಿಎಂ ಆಗಿದ್ದೇಕೆ ಎಂದು ಎಲ್ಲರೂ ಪ್ರಶ್ನಿಸುತ್ತಿದ್ದಾರೆ. ಎನ್ನುತ್ತಾ ಇಲ್ಲಿ ಅನಂತ್ ಕುಮಾರ್ ಹೆಗ್ಡೆ ಅದರ ಹಿಂದಿನ ಗುಟ್ಟನ್ನು ಬಹಿರಂಗ ಪಡಿಸಿದ್ದಾರೆ.' 

ದೇವೇಂದ್ರ ಫಡ್ನವೀಸ್ ಈ ಮೊದಲು ಮಹಾರಾಷ್ಟ ಮುಖ್ಯಮಂತ್ರಿಯಾಗಿದ್ದಾಗ ಕೇಂದ್ರದ ನೆರವಿನಿಂದ ದೊರೆತಿದ್ದ 40 ಸಾವಿರ ಕೋಟಿ ರೂಪಾಯಿಗಳನ್ನು ಮುಖ್ಯಮಂತ್ರಿಯ ನಿಯಂತ್ರಣದಲ್ಲಿ ಹೊಂದಿತ್ತು. ಕಾಂಗ್ರೆಸ್-ಎನ್‌ಸಿಪಿ ಮತ್ತು ಶಿವಸೇನೆ ಸರ್ಕಾರಗಳು ಅಧಿಕಾರಕ್ಕೆ ಬಂದರೆ ಅಭಿವೃದ್ಧಿಯ ಬದಲು ಹಣವನ್ನು ದುರುಪಯೋಗಪಡಿಸಿಕೊಳ್ಳುತ್ತವೆ ಎಂದು ಅವರಿಗೆ ತಿಳಿದಿತ್ತು. ಈ ಕಾರಣದಿಂದಾಗಿ, ಈ ಸಂಪೂರ್ಣ ನಾಟಕವನ್ನು ಮಾಡಲು ನಿರ್ಧರಿಸಲಾಯಿತು. ಫಡ್ನವೀಸ್ ಮುಖ್ಯಮಂತ್ರಿಯಾದರು ಮತ್ತು ಈ ಅವಧಿಯಲ್ಲಿ 40 ಸಾವಿರ ಕೋಟಿ ರೂಪಾಯಿಗಳನ್ನು ಎಲ್ಲೆಲ್ಲಿಗೆ ಸೇರಿಸ ಬೇಕಿತ್ತೋ ಅಲ್ಲಿಗೆ ತಲುಪಿಸಲಾಯಿತು. ಕೇಂದ್ರಕ್ಕೆ ಹಿಂದಿರುಗಿಸಲಾಯಿತು ಎಂಬ ಮಾಹಿತಿಯನ್ನು ಅನಂತ್ ಕುಮಾರ್ ಹೆಗ್ಡೆ ಬಹಿರಂಗ ಪಡಿಸಿದ್ದಾರೆ.

ಹೆಗ್ಡೆ  ಹೇಳಿಕೆ ತಿರಸ್ಕರಿಸಿದ ಫಡ್ನವೀಸ್:
ದೇವೇಂದ್ರ ಫಡ್ನವಿಸ್ ಹೆಗ್ಡೆ ಅವರ ಈ ಹೇಳಿಕೆಯನ್ನು ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಸಂಪೂರ್ಣವಾಗಿ ತಿರಸ್ಕರಿಸಿದ್ದಾರೆ. ಹೆಗ್ಡೆ ಅವರು ನೀಡಿರುವ ಹೇಳಿಕೆಯಲ್ಲಿ ಯಾವುದೇ ಹುರುಳಿಲ್ಲ. ಅದು ಸುಳ್ಳು ಎಂದಿರುವ ಫಡ್ನವೀಸ್, ಕೇಂದ್ರ ಸರ್ಕಾರದ ಸಹಾಯದಿಂದ ಮಹಾರಾಷ್ಟ್ರ ಸರ್ಕಾರ ಬುಲೆಟ್ ರೈಲನ್ನು ಸಿದ್ಧಪಡಿಸಲಾಗುತ್ತಿದೆ. ಮಹಾರಾಷ್ಟ್ರ ಸರ್ಕಾರ ಭೂಸ್ವಾಧೀನಕ್ಕೆ ಮಾತ್ರ ಸೀಮಿತವಾಗಿದೆ" ಎಂದು ಅವರು ಸ್ಪಷ್ಟಪಡಿಸಿದರು.

ಕೇಂದ್ರವು ಮಹಾರಾಷ್ಟ್ರದಿಂದ ಅಥವಾ ಕೇಂದ್ರದಿಂದ ಮಹಾರಾಷ್ಟ್ರ ಯಾವುದೇ ಹಣವನ್ನು ಕೋರಿಲ್ಲ. ನಾನು ಮಹಾರಾಷ್ಟ್ರದ ಮುಖ್ಯಮಂತ್ರಿ ಆಗಿದ್ದಾಗ ಅಥವಾ ಉಸ್ತುವಾರಿ ಮುಖ್ಯಮಂತ್ರಿ ಆಗಿದ್ದ ಸಮಯದಲ್ಲಿ ಅಂತಹ ಯಾವುದೇ ನಿರ್ಧಾರವನ್ನು ತೆಗೆದುಕೊಂಡಿಲ್ಲ. ಸರ್ಕಾರದ ಹಣಕಾಸು ಇಲಾಖೆ ಈ ಬಗ್ಗೆ ತನಿಖೆ ನಡೆಸಿ ಸತ್ಯವನ್ನು ಸಾರ್ವಜನಿಕರ ಮುಂದೆ ತರಬೇಕು ಎಂದು ದೇವೇಂದ್ರ ಫಡ್ನವೀಸ್ ತಿಳಿಸಿದ್ದಾರೆ.

ಮತ್ತೊಂದೆಡೆ, ಶಿವಸೇನೆ ಸಂಸದ ಸಂಜಯ್ ರೌತ್ ಈ ವಿಷಯದಲ್ಲಿ ಫಡ್ನವೀಸ್ ಅವರನ್ನು ಗುರಿಯಾಗಿಸಿಕೊಂಡಿದ್ದಾರೆ. ಈ ಕುರಿತು  ಟ್ವೀಟ್ ಮಾಡಿರುವ ರೌತ್, 'ಬಿಜೆಪಿ ಸಂಸದ ಅನಂತ್ ಕುಮಾರ್ ಹೆಗ್ಡೆ 80 ಗಂಟೆಗಳ ಕಾಲ ಮುಖ್ಯಮಂತ್ರಿಯಾಗುವ ಮೂಲಕ ದೇವೇಂದ್ರ ಫಡ್ನವೀಸ್ ಅವರು ಮಹಾರಾಷ್ಟ್ರದ 40,000 ಕೋಟಿ ರೂ.ಗಳನ್ನು ಕೇಂದ್ರಕ್ಕೆ ನೀಡಿದ್ದಾರೆ ಎಂದು ಹೇಳಿದ್ದಾರೆ? ಇದು ಮಹಾರಾಷ್ಟ್ರಕ್ಕೆ ಮಾಡಿದ ದ್ರೋಹ' ಎಂದು ಅವರು ಬಣ್ಣಿಸಿದ್ದಾರೆ.

Read More