Home> Entertainment
Advertisement

33ನೇ ವಸಂತಕ್ಕೆ ಕಾಲಿಟ್ಟ ರಾಕಿಂಗ್ ಸ್ಟಾರ್ ಯಶ್!

ಈ ವರ್ಷ ಹುಟ್ಟುಹಬ್ಬ ಆಚರಿಸಿಕೊಳ್ಳುವುದಿಲ್ಲ ದಯವಿಟ್ಟು ಸಹಕರಿಸಿ ಎಂದು ತಮ್ಮ ಅಭಿಮಾನಿಗಳಿಗೆ ಮನವಿ ಮಾಡಿರುವ 'ರಾಕಿ ಭಾಯ್'

33ನೇ ವಸಂತಕ್ಕೆ ಕಾಲಿಟ್ಟ ರಾಕಿಂಗ್ ಸ್ಟಾರ್ ಯಶ್!

ಬೆಂಗಳೂರು: ಹಾಸನ ಜಿಲ್ಲೆಯ ಭುವನಹಳ್ಳಿಯಲ್ಲಿ ಜನವರಿ  8, 1986 ರಂದು ಜನಿಸಿದ ರಾಕಿಂಗ್ ಸ್ಟಾರ್ ಯಶ್'ಗಿಂದು ಹುಟ್ಟುಹಬ್ಬದ ಸಂಭ್ರಮ. ನವೀನ್ ಕುಮಾರ್ ಗೌಡ ಇವರ ಮೊದಲ ಹೆಸರು. ಈ ಟಿವಿ ಚಾನೆಲ್ನಲ್ಲಿ ಪ್ರಸಾರವಗುತ್ತಿದ್ದ 'ನಂದ ಗೋಕುಲ' ಧಾರಾವಾಹಿಯಲ್ಲಿ ಅಭಿನಯಿಸುವ ಮೂಲಕ ಮೊದಲ ಬಾರಿಗೆ ಅಭಿನಯಕ್ಕೆ ಪದಾರ್ಪಣೆ ಮಾಡಿದರು. ಚಂದನವನದಲ್ಲಿ ರಾಕಿಂಗ್ ಸ್ಟಾರ್ ಎಂದೇ ಖ್ಯಾತಿ ಹೊಂದಿರುವ ಯಶ್, ಈಗ 'ಯಶೋಮಾರ್ಗ ಫೌಂಡೇಶನ್' ಮೂಲಕ ಸಾಮಾಜಿಕ ಸೇವೆಯಲ್ಲೂ ಸಕ್ರಿಯರಾಗಿದ್ದಾರೆ.

33ನೇ ವಸಂತಕ್ಕೆ ಕಾಲಿಟ್ಟ 'ರಾಕಿ ಭಾಯ್':

2008ರಲ್ಲಿ 'ಮೊಗ್ಗಿನ ಮನಸ್ಸು' ಚಿತ್ರದ ಖ್ಯಾತ ನಟನಾಗಿ ಹೊರಹೊಮ್ಮಿದರು. ಆದರೆ ಇದಕ್ಕೂ ಮೊದಲು ಜಂಬದ ಹುಡುಗಿ ಎಂಬ ಚಿತ್ರದಲ್ಲಿ ಅಭಿನಯಿಸಿದ್ದರು. ನಂತರ ರಾಜಧಾನಿ, ಕಿರಾತಕ, ಲಕ್ಕಿ, ಡ್ರಾಮಾ, ಗೂಗ್ಲಿ, ರಾಜಾಹುಲಿ, ಗಜ ಕೇಸರಿ, ಮಿಸ್ಟರ್ ಅಂಡ್ ಮಿಸೆಸ್ ರಾಮಾಚಾರಿ, ಮಾಸ್ಟರ್ ಪೀಸ್ ಇನ್ನೂ ಮೊದಲಾದ ಪ್ರಸಿದ್ದ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಈಗ ಸ್ಯಾಂಡಲ್'ವುಡ್ ನ ಖ್ಯಾತ ನಟರ ಸಾಲಿನಲ್ಲಿ ನಿಂತಿರುವ ಯಶ್ ಅವರ ಜೊತೆಯಲ್ಲೇ 'ನಂದ ಗೋಕುಲ' ಧಾರವಾಹಿಯಿಂದಲೇ ಕನ್ನಡ ಚಿತ್ರರಂಗಕ್ಕೆ ಪ್ರವೇಶಿಸಿದ ಮತ್ತೊಬ್ಬ ಕಲಾವಿದೆ ರಾಧಿಕಾ ಪಂಡಿತ್ ಅವರು ಇವರ ಬಾಳ ಸಂಗಾತಿಯಾಗಿದ್ದಾರೆ. ಮತ್ತೊಂದು ವಿಶೇಷವೆಂದರೆ ಈಕೆ ಕೂಡ 'ಮೊಗ್ಗಿನ ಮನಸ್ಸು ಚಿತ್ರದ ಮೂಲಕ ಖ್ಯಾತಿ ಪಡೆದ ನಟಿ.

ಯಶ್ ಅಭಿನಯದ ಬ್ಲಾಕ್ ಬಸ್ಟರ್ ಚಿತ್ರ 'ಕೆಜಿಎಫ್' 
'ಕೆಜಿಎಫ್' ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ಹೊಸ ಇತಿಹಾಸವನ್ನೇ ಸೃಷ್ಟಿಸಿರುವ ರಾಕಿಂಗ್ ಸ್ಟಾರ್ ಯಶ್ ಬಾಲಿವುಡ್‌ನಲ್ಲೂ ಇತಿಹಾಸ ನಿರ್ಮಿಸಿದ್ದಾರೆ. ಯಶ್ ಅಭಿನಯದ ಬ್ಲಾಕ್ ಬಸ್ಟರ್ ಚಿತ್ರ 'ಕೆಜಿಎಫ್' ದಾಖಲೆಯ 200 ಕೋಟಿ ರೂ ಗಳಿಸುವತ್ತ ಹೆಜ್ಜೆ ಇಟ್ಟಿದೆ.
ಈ ಎಲ್ಲಾ ಸಂಭ್ರಮದ ನಡುವೆ ಇಂದು ರಾಕಿಂಗ್ ಸ್ಟಾರ್ ಯಶ್ ಜನ್ಮದಿನ ಆಚರಿಸಲು ಯಶ್ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದರು. 

ಆದರೆ, ನಮ್ಮಕುಟುಂಬದ ಹಿರಿಯರಾದ ರೆಬಲ್ ಸ್ಟಾರ್ ಅಂಬರೀಶ್ ಅವರು ಕೆಲ ದಿನಗಳ ಹಿಂದಷ್ಟೇ ನಮ್ಮನ್ನ ಅಗಲಿದ್ದಾರೆ ಅವರಿಗೆ ಗೌರವ ಸೂಚಿಸುವ ಉದ್ದೇಶದಿಂದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿಲ್ಲ, ಅಭಿಮಾನಿಗಳು ದಯವಿಟ್ಟು ಸಹಕರಿಸಿ ಎಂದು ಸಾಮಾಜಿಕ ಜಾಲತಾಣದ ಮೂಲಕ ಯಶ್ ಮನವಿ ಮಾಡಿದ್ದರು.  ಹಾಗಾಗಿ ಅಭಿಮಾನಿಗಳು ಇಂದು ಸೋಶಿಯಲ್ ಮೀಡಿಯಾದಲ್ಲಿ ಯಶ್ ಫೋಟೋ ಹಾಕುವುದರ ಮೂಲಕ ಯಶ್ ಹುಟ್ಟುಹಬ್ಬಕ್ಕೆ ಶುಭ ಕೋರುತ್ತಿದ್ದಾರೆ.

Read More